ಗದಗ

ಭೂಸ್ವಾಧೀನ ಕಾನೂನು ಕೈಬಿಡಿ

Published On :

ಕನ್ನಡಪ್ರಭ ವಾರ್ತೆ, ಗದಗ, ಫೆ.11
ರೈತರ ವಿರೋಧಿ ಕಾನೂನು ರದ್ದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ಸಮಿತಿಯ ಜಿಲ್ಲಾ ಘಟಕದಿಂದ ಸೋಮವಾರ ನಗರದ ಜಿಲ್ಲಾಡಳಿತ ಭವನ ಎದುರು ಧರಣಿ ನಡೆಯಿತು.
ಈ ಸಂದರ್ಭ ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರದೇಶ ಉತ್ತರ ಪ್ರಾಂತದ ಅಧ್ಯಕ್ಷ ಎಸ್.ಬಿ. ಹರ್ಲಾಪುರ ಮಾತನಾಡಿ, ಇಂದು ರಾಜ್ಯದಲ್ಲಿ ರೈತರ ಮೇಲೆ ಹಲವು ರೀತಿ ದಬ್ಬಾಳಿಕೆ, ಮೊಸ, ಇನ್ನಿತರ ಘಟನೆಗಳು ನಡೆಯುತ್ತಿವೆ. ರೈತರ ಬೆಳೆಗೆ ಸೂಕ್ತ ಬೆಲೆ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ.
ಭೂಸ್ವಾಧೀನ ಕಾನೂನು ರೂಪಗೊಳ್ಳುತ್ತಿದೆ. ರೈತ ಸಮುದಾಯ ಸಹನೆಯಿಂದಲೇ ಎಲ್ಲ ಕಷ್ಟ, ನೋವುಗಳನ್ನು ನಷ್ಟದಲ್ಲಿಯೇ ಸಹಿಸುತ್ತಾ ಬಂದಿದೆ. ಸ್ವಾತಂತ್ರ್ಯ ದೊರೆತು 65 ವರ್ಷ ಗತಿಸಿದರೂ ರೈತರು ಬೆಳೆದ ಉತ್ಪಾದನಾ ಬೆಳೆಗಳಿಗೆ ಲಾಭದಾಯಕ ಬೆಲೆ ನಿಗದಿ ಮಾಡದೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮಗಾಗಿ ಏನನ್ನು ಮಾಡಿವೆ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಕೃಷಿ ಪ್ರಧಾನ ದೇಶದಲ್ಲಿ ಕೃಷಿಕನ ಬಗ್ಗೆ ಧ್ವನಿ ಎತ್ತದೇ ಇರುವುದು ರಾಷ್ಟ್ರದ ದುರ್ದೈವವಾಗಿದೆ ಎಂದರು.
ಬೇಡಿಕೆಗಳು: ರೈತರ ಉತ್ಪಾದನಾ ಬೆಳೆಗಳಿಗೆ ಲಾಭದಾಯಕ ಬೆಲೆ ನಿಗದಿಪಡಿಸಬೇಕು ಹಾಗೂ ಭೂಸ್ವಾಧೀನದ ರೈತರ ವಿರೋಧಿ ಕಠಿಣ ಕಾನೂನು ಜಾರಿಗೆ ತರುವುದನ್ನು ಕೈಬಿಡಬೇಕು. ಬರದಿಂದ ತತ್ತರಿಸಿದ ಉ-ಕ ಜಿಲ್ಲೆಗಳಲ್ಲಿ ಬರಗಾಲದಿಂದ ಜನತೆ ತತ್ತರಿಸಿದ್ದು, ನಿಭಾಯಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ರೈತರ ಕೃಷಿಭೂಮಿ ರಕ್ಷಣೆಗೆ ಸೂಕ್ತ ಕಾನೂನು ರೂಪಿಸಬೇಕು. ಸರ್ಕಾರ ಪ್ರಸಕ್ತ ಅಧಿವೇಶನದಲ್ಲಿ ವಿಶೇಷ ಭೂಸ್ವಾಧೀನ ಕಾನೂನು ತಿದ್ದುಪಡಿ ಮಸೂದೆ ಪಾಸ್ ಮಾಡಿರುವುದನ್ನು ಕೈಬಿಡಬೇಕು. ರಾಷ್ಟ್ರಿಕೃತ ಬ್ಯಾಂಕ್‌ನಲ್ಲಿನ ಕೃಷಿಸಾಲ ಮನ್ನಾ ಮಾಡಬೇಕು. ಪ್ರವಾಹ, ಬರಗಾಲ ಇತ್ಯಾದಿ ಪ್ರಕೃತಿ ವಿಕೋಪಗಳು ಉಂಟಾದಾಗ ಸೂಕ್ತ ಬೆಳೆ ಪರಿಹಾರ ನೀಡಬೇಕು. ಕೃಷಿಭೂಮಿಯನ್ನು ಸಮಗ್ರ ನೀರಾವರಿಗೆ ಒಳಪಡಿಸಬೇಕು. ನಿಗದಿತ ಅವಧಿಯಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ನಿಗದಿಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಜಿಲ್ಲಾಧ್ಯಕ್ಷ ಎಚ್.ಜಿ. ಹಿರೇಗೌಡರ, ಶೇಖರಪ್ಪ ಕುರಟ್ಟಿ, ಆರ್.ಕೆ. ಹುನಗುಂಡಿ, ಮಹೇಶ ಹರಕಲ್, ಆರ್.ಎನ್. ಹಬೀಬ, ಪಿ.ಎಚ್. ಅಬ್ಬಕ್ಕನವರ, ಕೆ.ಎಂ. ದೊಡ್ಡಮನಿ, ಎಸ್.ಎಸ್. ಮರಡ್ಡಿ, ಬಿ.ಎಚ್. ಹ್ಯಾಟಿ, ವಿ.ಎಂ. ಪಾಟೀಲ, ಎಚ್.ಬಿ. ಹನವಾಳ, ಪರಶುರಾಮ ಕಮತರ, ಬಸವರಾಜ ಪ್ಯಾಟಿ, ಎಂ.ಆರ್. ಮೇವುಂಡಿ, ಬಿ.ಸಿ. ನಾಡಗೌಡ್ರ, ಎಲ್.ಬಿ. ಉಪ್ಪಾರ, ದೇವರಾಜ ಮೇಟಿ, ಬಿ.ಆರ್. ಪಾಟೀಲ, ವೈ.ಎಸ್. ಹಿರೇಗೌಡ್ರ, ಎಸ್.ಪಿ. ಪಾಟೀಲ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.