ವಕಾರಸಾಲ ಮಾರಾಟ ನಿರ್ಣಯ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗದಗ, ಫೆ. 11
ಗದಗ-ಬೆಟಗೇರಿ ನಗರಸಭೆಯ ಅಮೂಲ್ಯ 54 ವಕಾರಗಳನ್ನು ಮಾರಾಟ ಮಾಡುವ ನಗರಸಭೆ ನಿರ್ಣಯ ಖಂಡಿಸಿ, ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಯುವ ಸೇನಾ ಸಮಿತಿ ಗದಗ ಹಾಗೂ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಯುವ ಸೇನಾ ಸಮಿತಿಯ ಅಧ್ಯಕ್ಷ ವಿಜಯ ಮುಳಗುಂದ ಮಾತನಾಡಿ, ನಗರಸಭೆಯ 54 ವಕಾರು ಸಾಲುಗಳ ಮಾರಾಟ ವಿರೋಧಿಸಿ ಹಲವಾರು ಬಾರಿ ಧ್ವನಿ ಎತ್ತಿದರೂ ಜಿಲ್ಲಾಧಿಕಾರಿಗಳಾಗಲಿ, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪೌರಾಯುಕ್ತರು ಹಾಗೂ ಆಡಳಿತ ನಡೆಸುತ್ತಿರುವ ಜನಪ್ರತಿನಿಧಿಗಳು ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ನಗರಸಭೆಯ ಆಡಳಿತದಲ್ಲಿ ಇದುವರೆಗೆ ಮಾಡಿಕೊಂಡು ಬಂದ ಅವ್ಯವಹಾರಗಳ ಕುರಿತು ಎಲ್ಲ ಪ್ರಕರಣಗಳನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದರು.
ರಾಜ್ಯ ರೇಲ್ವೆ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ನಿಸ್ಸಾರ್‌ಅಹ್ಮದ್ ಖಾಜಿ ಮಾತನಾಡಿ, ನಗರಸಭೆಯ 11.88.000 ಚದರ ಅಡಿ ಜಾಗೆಯನ್ನು ಸಾವಿರಾರು ಕೋಟಿ ಬೆಲೆ ಬಾಳುವಂತಹ ವಕಾರಸಾಲು ಜಾಗೆಯನ್ನು ಒಮ್ಮೆಲೆ ಮಾರಾಟ ಮಾಡಬೇಕೆಂದು ನಗರಸಭೆ ಆಡಳಿತ ಹುನ್ನಾರ ಮಾಡಿದ್ದು, ಇದರಲ್ಲಿ ನಗರಾಧ್ಯಕ್ಷರು ಅವರ ಸ್ವಾರ್ಥ ಹಾಗೂ ಸ್ಥಳೀಯ ಶಾಸಕರು ಅವಳಿ ನಗರದ ಜನ ಸಾಮಾನ್ಯರ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಎಸಗಿದ್ದಾರೆ.
ಈ ಆಸ್ತಿಯನ್ನು ಸರ್ಕಾರ ಕೂಡಲೇ ತನ್ನ ವಶಕ್ಕೆ ತೆಗೆದುಕೊಂಡು ಸರ್ಕಾರಿ ಕಚೇರಿ, ಆಸ್ಪತ್ರೆ, ಶಾಲೆ-ಕಾಲೇಜು ಸ್ಥಾಪನೆ, ನಿರುದ್ಯೋಗಿ ಯುವಕರಿಗೆ ಹಿಂದುಳಿದ ಹಾಗೂ ಬಡ ಜನತೆಗೆ ಚಿಕ್ಕ ಚಿಕ್ಕ ಅಂಗಡಿಗಳ ಸಾಲು, ಸಾಹಿತ್ಯ ಭವನ, ಸಾಂಸ್ಕೃತಿಕ ಭವನ ಇತ್ಯಾದಿಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು.
ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಪಿ. ಸುಬ್ರಹ್ಮಣ್ಯರೆಡ್ಡಿ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಚಂದ್ರಕಾಂತ ಚವ್ಹಾಣ, ಅಮರೇಶ ಬೂದಿಹಾಳ, ರಾಜ್ಯ ಹಮಾಲರ ಒಕ್ಕೂಟದ ಅಧ್ಯಕ್ಷ ಅಯ್ಯಪ್ಪ ನಾಯ್ಕರ ಮಾತನಾಡಿದರು.
ನಗರದ ವೀರ ರಾಣಿ ಕಿತ್ತೂರ ಚೆನ್ನಮ್ಮ ವೃತ್ತದಿಂದ ಅರಂಭಗೊಂಡ ರ್ಯಾಲಿಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ, ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಇಮಾಮ್‌ಸಾಬ ಕಲೇಗಾರ, ಜೈಭೀಮ ಸಂಘಟನೆ ಅಧ್ಯಕ್ಷ ಗಣೇಶ ಹುಬ್ಬಳ್ಳಿ, ಶರಣಪ್ಪ ವಾಲ್ಮೀಕಿ, ಮಂಜುನಾಥ ಜಮಖಂಡಿ, ರಾಜೇಸಾಬ ಅಣ್ಣಿಗೇರಿ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಪ್ರಕಾಶ ಕೆಲೂರ, ಡಿಎಸ್‌ಎಸ್‌ನ ದೇವಪ್ಪ ಲಿಂಗದಾಳ, ಎಂ.ವೈ. ಮುಳಗುಂದ ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

