ಅನ್ನದಾನೀಶ್ವರ ಶ್ರೀಗೆ ನಾಡೋಜ
ಮುಂಡರಗಿ: ಅನ್ನದಾನ, ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಇಲ್ಲಿನ ಅನ್ನದಾನೀಶ್ವರ ಮಠ ನಾಡಿನ ಶ್ರೇಷ್ಠ ಧಾರ್ಮಿಕ ಕೇಂದ್ರವೆನಿಸಿದ್ದು, ಈ ಮಠದ ಅನ್ನದಾನೀಶ್ವರ ಶ್ರೀಗಳಿಗೆ ಹಂಪಿ ಕನ್ನಡ ವಿವಿ ನಾಡೋಜ ಪ್ರಶಸ್ತಿ ಲಭಿಸಿದೆ.
ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ಮಹತ್ತರ ಸಾಧನೆ ತೋರಿದ ಮಠದ ಶ್ರೀಗಳಿಗೆ ನಾಡೋಜ ಪ್ರಶಸ್ತಿ ದೊರೆತಿದ್ದು, ಈ ಭಾಗದ ಜನರಿಗೆ, ಮಠದ ಭಕ್ತರಲ್ಲಿ ಸಂತಸ ತಂದಿದೆ.
ಬಡ ಮಕ್ಕಳಿಗೆ ಜ್ಞಾನಾರ್ಜನೆ
ಅನ್ನದಾನೀಶ್ವರ ಶಿಕ್ಷಣ ಸಂಸ್ಥೆಯಿಂದ ಶೈಕ್ಷಣಿಕ ರಂಗದಲ್ಲಿ 40 ಅಂಗ ಸಂಸ್ಥೆಗಳನ್ನು ಪ್ರಾರಂಭಿಸಿ, ಗ್ರಾಮೀಣ ಭಾಗದ ಸಾವಿರಾರು ಮಕ್ಕಳಿಗೆ ಜ್ಞಾನ ದಾನ ಮಾಡಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ 300ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಾಗಿದೆ.
ಆಚಾರ ವಿಚಾರದ ಜತೆಗೆ ಭಕ್ತಿವಂತರಾಗಿದ್ದ ವೀರಭದ್ರಯ್ಯ ಮತ್ತು ಬಸಮ್ಮ ದಂಪತಿಗಳಿಗೆ 1943ರಲ್ಲಿ ಮುದ್ದೇಬಿಹಾಳ ತಾಲೂಕಿನ ಪೀರಾಪುರ ಗ್ರಾಮದಲ್ಲಿ ಜ.ಡಾ. ಅನ್ನದಾನೀಶ್ವರ ಶ್ರೀ ಜನಿಸಿದರು. 1963ರಲ್ಲಿ ತಮ್ಮ 18ನೇ ವಯಸ್ಸಲ್ಲೇ ಮುಂಡರಗಿ ಮಠದ 10ನೇ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡರು.
ಕೃತಿಗಳ ರಚನೆ: ಅನ್ನದಾನ ಶ್ರೀಗಳು ನಿರಂತರ ಅಧ್ಯಯನ ನಡೆಸುವ ಮೂಲಕ 111 ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. 1967ರಲ್ಲಿ ಸ್ಥಾಪನೆಗೊಂಡಿರುವ ಅನ್ನದಾನೀಶ್ವರ ಗ್ರಂಥ ಮಾಲೆಯಿಂದ ಶ್ರೀಗಳು ರಚಿಸಿದ 111 ಕೃತಿಗಳೂ ಸೇರಿದಂತೆ 200 ಕೃತಿಗಳನ್ನು ಪ್ರಕಟಿಸಿದ್ದಾರೆ. ಶ್ರೀಗಳು ರಚಿಸಿದ ಸಾಹಿತ್ಯದ ಮೇಲೆ ಈಗಾಗಲೇ 4 ಪಿಎಚ್ಡಿ, 2 ಎಂಫಿಲ್ ಪದವಿ ಪಡೆದಿರುವುದು ವಿಶೇಷವಾಗಿದೆ. ಚನ್ನಬಸವಣ್ಣ, ಅಲ್ಲಮಫ್ರಭು, ಅಕ್ಕಮಹಾದೇವಿ, ಸಿದ್ದರಾಮ, ಬಸವಣ್ಣ, ದ್ಯಾಂಪುರ ಚನ್ನಕವಿ ಮುಂತಾದ ಶರಣರ 10 ವಿಚಾರ ಸಂಕಿರಣಗಳನ್ನು ನಡೆಸಿದ್ದಾರೆ.
ಜನರ ಹಿತಕ್ಕಾಗಿ ಹೋರಾಟ
ಉಚಿತ ಸಾಮೂಹಿಕ ವಿವಾಹ, ಆರೋಗ್ಯ ತಪಾಸಣಾ ಶಿಬಿರ, ಉಚಿತ ನೇತ್ರ ಚಿಕಿತ್ಸಾ ಶಿಬಿರ, ಬರಡು ದನಗಳ ಚಿಕಿತ್ಸೆ ಮತ್ತು ರೇಷ್ಮೆ-ಕೃಷಿ ಅಭಿವೃದ್ಧಿಯ ಪ್ರಾತ್ಯಕ್ಷಿಕೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಕಪ್ಪತ್ತಗುಡ್ಡದ ಉಳುವಿಗಾಗಿ ಹೋರಾಟ, ಪ್ರಾಣಿಬಲಿ, ದೇವದಾಸಿ ಅನಿಷ್ಠ ಪದ್ಧತಿ ವಿರುದ್ಧ, ಪೋಸ್ಕೋದಂತಹ ಕಂಪನಿ ವಿರುದ್ಧ ನಡೆದ ರೈತ ಪರ ಹೋರಾಟದಲ್ಲಿ ಶ್ರೀಗಳು ಪ್ರಮುಖ ಪಾತ್ರ ವಹಿಸಿದ್ದಾರೆ.
ವಿವಿಧ ಸಾಮಾಜಿಕ, ವಿದಾಯಕ ಕಾರ್ಯಕ್ರಮಗಳಿಗೆ ಶ್ರೀಮಠದ 130ಕ್ಕೂ ಹೆಚ್ಚು ಎಕರೆ ಭೂಮಿ ದಾನ ನೀಡಿದ್ದಲ್ಲದೆ, ಲಕ್ಷಾಂತರ ರು. ದೇಣಿಗೆ ನೀಡಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು, ಗುಜರಾತ್, ಲಾತೂರ್ ಭೂಕಂಪ, ಇತ್ತೀಚಿನ ನೆರೆ ಸಂತ್ರಸ್ತರಿಗೆ ಸಹಾಯಾರ್ಥವಾಗಿ ಪಾದಯಾತ್ರೆ ನಡೆಸಿ, ಶ್ರೀಮಠದಿಂದ ನಿಧಿ, ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ನೀಡಿದ್ದಾರೆ.
ಹಲವು ಪ್ರಶಸ್ತಿ: ಶ್ರೀಗಳಿಗೆ 1963-65ರಲ್ಲಿ ಅಲಹಾಬಾದ್ ವಿವಿ ಹಿಂದಿ ಸಾಹಿತ್ಯ ವಿಶಾರದ, ಸಾಹಿತ್ಯ ರತ್ನ ಪ್ರಶಸ್ತಿ, 1966ರಲ್ಲಿ ಬನಾರಸ್ ವಿವಿಯಿಂದ ವೇದಾಂತ ಶಾಸ್ತ್ರಿ ಪ್ರಶಸ್ತಿ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಕಾರ್ಯಕ್ಕೆ ಧಾರವಾಡ ಕವಿವಿ 2005ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ.
ಶ್ರೀಗಳಿಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಕರಬಸಪ್ಪ ಹಂಚಿನಾಳ, ವೈ.ಎನ್. ಗೌಡರ, ಕೊಟ್ರೇಶ ಅಂಗಡಿ, ಹೇಮಗಿರೀಶ ಹಾವಿನಾಳ, ಪಾಲಾಕ್ಷಿ ಗಡದಿನ್ನಿ, ಹೇಮಂತಗೌಡ ಪಾಟೀಲ, ನಾರಾಯಣಪ್ಪ ಇಲ್ಲೂರ, ರಜನಿಕಾಂತ ದೇಸಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

