ರಾಷ್ಟ್ರೀಯ ಪಕ್ಷಗಳಿಗೆ ಬುದ್ಧಿ ಕಲಿಸಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 15
ರಾಜ್ಯದ ನೆಲ, ಜಲ ಸಂರಕ್ಷಣೆಗಾಗಿ ಜನರು ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡಿ, ರಾಷ್ಟ್ರೀಯ ಪಕ್ಷಗಳಿಗೆ ಬುದ್ಧಿ ಕಲಿಸಬೇಕೆಂದು ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ. ಶ್ರೀರಾಮುಲು ಹೇಳಿದರು.
ಅವರು ಶುಕ್ರವಾರ ಪಟ್ಟಣದ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಅವರ ತೋಟದ ಆವರಣದಲ್ಲಿ ಜರುಗಿದ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸದೇ, ಬಡವರ, ದೀನ ದಲಿತರ, ನೊಂದ ಮಹಿಳೆಯರ ಕಣ್ಣೀರು ಒರೆಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ರಾಜ್ಯದ ವಿಧವೆಯರಿಗೆ, ಅಂಗವಿಕಲರಿಗೆ, ವೃದ್ಧಾಪ್ಯ ವೇತನದಂತಹ ಮಾಸಾಶನ ನೀಡುತ್ತಿಲ್ಲ. ಬಿಪಿಎಲ್ ಕಾರ್ಡ್ ವಿತರಿಸುತ್ತಿಲ್ಲ. ಜನತೆ ಬರಗಾಲದ ಬವಣೆಯಲ್ಲಿ ಸಿಲುಕಿ, ತೊಂದರೆಯಲ್ಲಿರುವಾಗ ರಾಜ್ಯ ಬಿಜೆಪಿ ಸರ್ಕಾರ ಯಾವ ಪುರುಷಾರ್ಥಕ್ಕಾಗಿ ಇಂತಹ ಬಜೆಟ್ ಮಂಡಿಸಿದೆ ಎಂಬುದು ತಿಳಿಯುತ್ತಿಲ್ಲ. ಇಂತಹ ಸಾಹಸಕ್ಕೆ ಕೈಹಾಕಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕೂಡಾ 2ಜಿ ಸ್ಪೆಕ್ಟ್ರಮ್, ಕಲ್ಲಿದ್ದಲು ಹಗರಣ, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹಾಗೂ ಇತ್ತೀಚೆಗೆ ಬೆಳಕಿಗೆ ಬಂದ ಹೆಲಿಕಾಪ್ಟರ್ ಹಗರಣದಲ್ಲಿ ಸಿಲುಕಿ ಒದ್ದಾಡುತ್ತಿದೆ. ಇನ್ನೊಂದೆಡೆ ದಿನ ನಿತ್ಯದ ವಸ್ತುಗಳು ಹಾಗೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಗಗನಕ್ಕೇರುತ್ತಿದೆ. ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸಾರ್ವಜನಿಕರ ಜತೆ ಚೆಲ್ಲಾಟವಾಡುತ್ತಿವೆ. ಅದಕ್ಕಾಗಿ ನಮಗೆ ದಿಲ್ಲಿ ದೊರೆಗಳ ಗುಲಾಮಗಿರಿ ಸರ್ಕಾರಗಳು ಬೇಡ. ರಾಷ್ಟ್ರೀಯ ಪಕ್ಷಗಳಿಗೆ ಬುದ್ದಿ ಕಲಿಸುವ ಕಾರ್ಯವನ್ನು ಬರುವ ದಿನಗಳಲ್ಲಿ ಕಾರ್ಯಕರ್ತರು ಮಾಡಬೇಕೆಂದು ಹೇಳಿದರು. ಗದಗ ಜಿಲ್ಲಾ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಮಾತನಾಡಿ, ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರಾಡುವ ಹಕ್ಕಿಯಾಗಿದ್ದಾರೆ. ಕೇವಲ 5 ವರ್ಷಗಳ ಹಿಂದೆ ಶ್ರೀರಾಮುಲು ಹಾಗೂ ಗಂಗಣ್ಣ ಮಹಾಂತಶೆಟ್ಟರ ಅವರ ಆಶೀರ್ವಾದದಿಂದ ಆರಿಸಿ ಬಂದಿರುವುದನ್ನು ಮರೆತು, ಮನ ಬಂದಂತೆ ವರ್ತಿಸುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ರಾಮಣ್ಣ ಲಮಾಣಿ ಠೇವಣಿ ಕಳೆದುಕೊಳ್ಳುವಂತೆ ಮಾಡದಿದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆಂದು ಸವಾಲು ಹಾಕಿದರು.
ಸಮಾರಂಭದಲ್ಲಿ ಸಣ್ಣಿರಪ್ಪ ಹಳ್ಳೆಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಎಸ್ಆರ್ ಕಾಂಗ್ರೆಸ್ ಪಕ್ಷವು ಬಡವರ ಬಗ್ಗೆ ಕಾಳಜಿ ಹೊಂದಿದೆ ಎಂದರು. ಮಹಾಂತೇಶ ಹಳ್ಳೆಪ್ಪನವರ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಜಯಶ್ರೀ ಹಳ್ಳೆಪ್ಪನವರ, ತಾಪಂ ಮಾಜಿ ಅಧ್ಯಕ್ಷ ಅಶೋಕ ಪಲ್ಲೇದ, ಈರಣ್ಣ ಹತ್ತಿಕಾಳ ಮಾತನಾಡಿದರು.
ಮದನಲಾಲ್ ಬಾಫಣಾ, ಶಿವಾನಂದ ಬೆಂತೂರ, ಅನಿಲ ಮೆಣಸಿನಕಾಯಿ, ಶಿವರಾಜಗೌಡ ಪಾಟೀಲ. ಮಲ್ಲೇಶಿ ಚೆಪ್ಪರಮನಿ, ಶಂಕರ ಗೋಡಿ. ಶಂಕ್ರಣ್ಣ ಗೊರವರ, ಬಸಣ್ಣ ಸಾಸಲವಾಡ, ಬಸವಣ್ಣೆಯ್ಯ ಹಿರೇಮಠ, ಚಿತ್ತರಂಜನ ಕಲಕೋಟಿ ಭಾಗವಹಿಸಿದ್ದರು.
ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಬೆಳಗ್ಗೆ ಬಿ. ಶ್ರೀರಾಮುಲು ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ವೇದಿಕೆಗೆ ಕರೆತರಲಾಯಿತು. ಮೆರವಣಿಗೆಯಲ್ಲಿ ಮಹಿಳಾ ಡೊಳ್ಳು ಕುಣಿತ ಹಾಗೂ ಹಲಗೆ ಮೇಳಗಳು ಜನರ ಮನ ಸೆಳೆದವು. ಸೋಮಣ್ಣ ಡಾಣಗಲ್ ಸ್ವಾಗತಿಸಿದರು. ಶಿವಾನಂದ ದೇಸಾಯಿ ನಿರೂಪಿಸಿದರು. ಮೋಹನ ನರಗುಂದ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

