ಗದಗ

ತೆರೆಮರೆಯಲ್ಲಿ ಕಸರತ್ತು ಜೋರು

Published On :

ಡಿ.ಜಿ. ಮೋಮಿನ್
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ ಫೆ. 22
ರಾಜಕೀಯ ಪಕ್ಷಗಳ ನಾಯಕರಿಗೆ ಬೇಡವೆಂದರೂ ಬಂದ ಅತಿಥಿ, ಮಾ. 7ರಂದು ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅನಿವಾರ್ಯವಾಗಿ ಎಲ್ಲರೂ ತಮ್ಮ ರಾಜಕೀಯ ಬಲಾಬಲ ಪ್ರದರ್ಶನಕ್ಕಾಗಿ ಪಕ್ಷದಲ್ಲಿ ಗೆಲ್ಲುವ ಕುದುರೆಗಳ ಹುಡುಕಾಟದಲ್ಲಿ ತಲ್ಲೀನರಾಗಿದ್ದರೆ, ಇನ್ನು ಕೆಲವರು ನಾಯಕರನ್ನು ಟೇಕ್‌ಓವರ್ ಮಾಡಿ ನಾಮಪತ್ರ ಸಲ್ಲಿಸಿದ್ದಾರೆ.
ಇಲ್ಲಿ 34 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, 19379 ಮತದಾರರಿದ್ದಾರೆ. ಗಜೇಂದ್ರಗಡ ಪುರಸಭೆ ಒಟ್ಟು 23 ಸದಸ್ಯರನ್ನು ಹೊಂದಿದ್ದು, ಹಿಂದಿನ ಅವಧಿಯಲ್ಲಿ 15 ಪುರುಷ ಸದಸ್ಯರು, 8 ಮಹಿಳಾ ಸದಸ್ಯರಿದ್ದರು. ಬಿಜೆಪಿ 19, ಕಾಂಗ್ರೆಸ್ 2, ಪಕ್ಷೇತರ 2 ಸ್ಥಾನ ಪಡೆದು, ಬಿಜೆಪಿ ಬಹುಮತದಿಂದ ಅಧಿಕಾರ ಗದ್ದುಗೆ ಏರಿತು. 5 ವರ್ಷದಲ್ಲಿ ನಾಲ್ವರು ಮಹಿಳಾ ಸದಸ್ಯರು ತಲಾ 15 ತಿಂಗಳಂತೆ ಅಧ್ಯಕ್ಷೆ ಗದ್ದುಗೆ ಅಲಂಕರಿಸಿದರು.
ಮೂವರು ಜನ ಪುರುಷ ಸದಸ್ಯರು ತಲಾ 20 ತಿಂಗಳಂತೆ ಉಪಾಧ್ಯಕ್ಷರಾಗಿ ಅಧಿಕಾರ ಚಲಾಯಿಸಿದರು. 5 ವರ್ಷದಲ್ಲಿ ಪುರಸಭೆಗೆ ಕೇಂದ್ರ, ರಾಜ್ಯ ಸರ್ಕಾರ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ರು. 20 ಕೋಟಿಗೂ ಅಧಿಕ ಮೊತ್ತದ ಅನುದಾನ ಬಿಡುಗಡೆಯಾಗಿದೆ. ಈ ಅವಧಿಯಲ್ಲಿ ಪಟ್ಟಣದ ಹಲವಾರು ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯ ನಡೆದು, ನಗರಾಭಿವೃದ್ಧಿ ಇಲಾಖೆಯಿಂದ ಪ್ರಶಂಸೆಗೆ ಪಾತ್ರವಾದರೆ, ಇನ್ನು ಕೆಲ ವಾರ್ಡ್‌ಗಳ ಸದಸ್ಯರ ನಿಷ್ಕಾಳಜಿಯಿಂದಾಗಿ ಅಭಿವೃದ್ಧಿ ಕಾಣದೇ ಅಲ್ಲಿನ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
5 ವರ್ಷ ಅಧಿಕಾರಾವಧಿ ಪೂರೈಸಿದ ಸದಸ್ಯರು ಮತ್ತೊಂದು ಕೈ ನೋಡೊಣ ಎಂದು ಚುನಾವಣಾ ಕಣಕ್ಕೆ ಧುಮುಕುತ್ತಿದ್ದರೆ ಇನ್ನೂ ಕೆಲ ಸದಸ್ಯರಿಗೆ ಪಕ್ಷಗಳ ಗ್ರೀನ್ ಸಿಗ್ನಲ್ ಸಿಗದೇ ನಿರಾಶೆಗೊಂಡಿದ್ದಾರೆ. ಅದರಲ್ಲೂ ಕೆಲವರು ಬೇರೆಬೇರೆ ಪಕ್ಷಗಳಿಂದ ಸ್ಪರ್ಧಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವುದು ಕಂಡು ಬರುತ್ತಿದೆ.
38 ನಾಮಪತ್ರ ಸಲ್ಲಿಕೆ: ಫೆ. 16 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದರೂ ಫೆ. 21ರ ವರೆಗೆ ಒಂದು ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಆದರೆ, ಶುಕ್ರವಾರ ಬಿಜೆಪಿಯಿಂದ 19, ಕಾಂಗ್ರೆಸ್ 4, ಜೆಡಿಎಸ್ 4, ಕೆಜೆಪಿ 1, ಸಿಪಿಐಎಂ 8 ಹಾಗೂ ಇಬ್ಬರು ಪಕ್ಷೇತರರು ಸೇರಿದಂತೆ ಒಟ್ಟು 38 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗದ ಮೂಲಗಳು ಖಚಿತ ಪಡಿಸಿವೆ.
ಬಂಡಿ ಸಹೋದರ ಕಣಕ್ಕೆ: ಸಚಿವ ಕಳಕಪ್ಪ ಬಂಡಿ ಸಹೋದರ ಸಿದ್ದಪ್ಪ ಬಂಡಿ ಸ್ಥಳೀಯ ಪುರಸಭೆಯ 20ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಬೆಂಬಲಿಗರೊಂದಿಗೆ ಶುಕ್ರವಾರ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ.
ಇಲ್ಲಿಯವರೆಗೂ ಸಹೋದರರ ಹಿಂದೆ ನಿಂತು ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸಿದ್ದಪ್ಪ ಬಂಡಿ ಪುರಸಭೆಗೆ ಆಯ್ಕೆ ಬಯಸಿರುವುದು ರಾಜಕೀಯ ರಂಗೇರಲು ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.