ಪಡಿತರ ಚೀಟಿ ವಿತರಣೆ ಅವ್ಯವಸ್ಥೆ ಸರಿಪಡಿಸಿ
ರೋಣ: ಕಳೆದ 6 ತಿಂಗಳಿನಿಂದ ಪಡಿತರ ಚೀಟಿ ಇಲ್ಲದೇ ಆಹಾರ ಧಾನ್ಯಕ್ಕಾಗಿ ತೊಂದರೆ ಎದುರಿಸುತ್ತಿದ್ದರೂ ಸಹ ತಹಸೀಲ್ದಾರ್ ನಮ್ಮ ಸಮಸ್ಯೆ ಆಲಿಸದೇ ನಿರ್ಲಕ್ಷ್ಯವಹಿಸಿದ್ದು, ಕೂಡಲೇ ಪಡಿತರ ಚೀಟಿ ವಿತರಣೆಯಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಮಂಗಳವಾರ ತಾಲೂಕಿನ ಯಾಸ ಹಡಗಲಿ ಗ್ರಾಮಸ್ಥರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ವಿಜಯಕುಮಾರ ತೋಟದ ಮಾತನಾಡಿ, ಪಡಿತರ ಚೀಟಿ ವಿತರಿಸುವಂತೆ ಹಾಗೂ ಪಡಿತರ ಚೀಟಿಯಲ್ಲಿರುವ ಗೊಂದಲ ನಿವಾರಿಸಿ, ಶ್ರೀಸಾಮಾನ್ಯರಿಗೆ ಅನಕೂಲ ಕಲ್ಪಿಸಿಕೊಡುವಂತೆ 6-7 ತಿಂಗಳುಗಳಿಂದ ಕಚೇರಿಗೆ ಅಲೆಯುತ್ತಿದ್ದರೂ ಇಂದಿಗೂ ನಮಗೆ ನ್ಯಾಯ ದೊರೆತಿಲ್ಲ. ನಮಗೆಲ್ಲರಿಗೂ ಪಡಿತರ ಚೀಟಿ ವಿತರಣೆ ಮಾಡದೇ ವಿಳಂಬ ನೀತಿ ಅನುಸರಿಸುತ್ತಿದ್ದು, ಈಗಿರುವ ತಹಸೀಲ್ದಾರ್ ಸಾಮಾನ್ಯ ಜನರ ಭವಣೆಯನ್ನು ಅರ್ಥಮಾಡಿಕೊಳ್ಳದೇ, ಬರಿ ತಮ್ಮ ಇಲಾಖೆಯ ಸಬೂಬುಗಳನ್ನೇ ಜನರಿಗೆ ತಿಳಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಗ್ರಾಮದಲ್ಲಿರುವ ನ್ಯಾಯ ಬೆಲೆ ಅಂಗಡಿಗಳಿಗೆ ಹೋದರೆ ಪಡಿತರ ಚೀಟಿ ಇಲ್ಲದೇ ರೇಷನ್ ನೀಡುವದಿಲ್ಲ ಎನ್ನುತ್ತಾರೆ. ಇಲ್ಲಿ ಬಂದು ಕೇಳಿದರೆ ನಾಳೆ ಬನ್ನಿ ಎನ್ನುತ್ತಾರೆ. ಒಟ್ಟಿನಲ್ಲಿ ಸಾರ್ವಜನಿಕರು ಕೂಲಿ ಕೆಲಸ ಬಿಟ್ಟು ಪಡಿತರ ಚೀಟಿ ಪಡೆಯಲು ನಿತ್ಯ ತಹಸೀಲ್ದಾರ್ ಕಚೇರಿಗೆ ಅಲೆಯುವ ಸ್ಥಿತಿ ಬಂದೊದಗಿದೆ. ಸತತ 3 ವರ್ಷ ಬರಗಾಲ ಎದುರಿಸಿರುವ ಜನರು ಇಂದಿನ ಸ್ಥಿತಿಯಲ್ಲಿ ಒಂದು ಹೊತ್ತಿನ ಗಂಜಿಗೂ ಪರದಾಡುವ ಪರಿಸ್ಥಿತಿ ಇದ್ದರೂ ತಹಸೀಲ್ದಾರ್ ಮಾತ್ರ ನಮ್ಮ ಸಮಸ್ಯೆಗಳನ್ನು ಆಲಿಸದೇ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಕೂಡಲೇ ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಹಾಗೂ ಪಡಿತರ ಚೀಟಿ ವಿತರಣೆಯಲ್ಲಾಗಿರುವ ಅವ್ಯವಸ್ಥೆಯನ್ನು ನಿವಾರಿಸಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಚಂದ್ರಶೇಖರ ಮಾದರ, ಕಲ್ಲನಗೌಡ ನಾಗನಗೌಡ್ರ, ಎಂ.ಆರ್. ತಳವಾರ, ವೀರಯ್ಯ ಸೋರೆಬಾನ, ಭರಮಪ್ಪ ಬಾರಕೇರ, ಬಸಯ್ಯ ಪೂಜಾರ, ರೇಣುಕಾ ಮಲ್ಲಾಪುರ, ಕಮಲವ್ವ ವಾಸನದ, ಭಾರತಿ ತಹಸೀಲ್ದಾರ್, ಕಲ್ಲಪ್ಪ ಹರ್ತಿ, ಬಸಪ್ಪ ಯಲಿಗಾರ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

