ಗದಗ

ಸ್ಲಂ ಪ್ರದೇಶವೆಂದು ಘೋಷಣೆ ಮಾಡುವಂತೆ ಆಗ್ರಹ

Published On :

ಗದಗ: ನಗರದ ರಾಚೂಟೇಶ್ವರ ನಗರ ಮತ್ತು ಬಾಪೂಜಿನಗರ ಗುಡಿಸಲು ಪ್ರದೇಶಗಳನ್ನು ಅಧಿಕೃತವಾಗಿ ಸ್ಲಂ ಪ್ರದೇಶಗಳೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಸೋಮವಾರ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಅಶೋಕ ಮೇಗೇರಿ ಮಾತನಾಡಿ, ಡಿಸೆಂಬರ್ 17, 2011 ರಂದು ನಗರದ ಸಿಡಿಓ ಜೈನ್ ಶಾಲೆಯ ಹಿಂದಿರುವ ರಾಚೂಟೇಶ್ವರ ನಗರ ಮತ್ತು ಹುಬ್ಬಳ್ಳಿ ರಸ್ತೆಯಲ್ಲಿರುವ ಬಾಪೂಜಿ ನಗರ ಗುಡಿಸಲು ಪ್ರದೇಶಗಳನ್ನು ಸ್ಲಂಕಾಯ್ದೆ 1973ರ ಪ್ರಕಾರ ಅಧಿಕೃತವಾಗಿ ಸ್ಲಂ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಗದಗ-ಬೆಟಗೇರಿ ನಗರಸಭೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಆಗ ನಗರಸಭೆ ಪೌರಾಯುಕ್ತರು ಸ್ಲಂ ಪ್ರದೇಶವೆಂದು ಘೋಷಣೆಗೆ ನಿರಾಕ್ಷೇಪಣಾ ಪತ್ರ ಮತ್ತು ಇತರೆ ದಾಖಲೆಗಳನ್ನು ಗದಗ ಉಪವಿಭಾಗ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಕಳಿಸಿ ಕೊಟ್ಟಿದ್ದು, ನಂತರ ಅವುಗಳನ್ನು ಸ್ಲಂಬೋರ್ಡ್ ಕಚೇರಿಯ ಅಧಿಕಾರಿಗಳಿಗೂ ಸಲ್ಲಿಸಲಾಗಿದೆ. 5 ತಿಂಗಳುಗಳ ಹಿಂದೆ ಸ್ಲಂ ಕಾಯ್ದೆ 1973ರ ಪ್ರಕಾರ ರಾಚೂಟೇಶ್ವರ ನಗರ ಮತ್ತು ಬಾಪೂಜಿ ನಗರದ ಗುಡಿಸಲು ಪ್ರದೇಶಗಳನ್ನು ಸರ್ವೇ ಮಾಡಿ ಸುಮಾರು 30 ವರ್ಷಗಳಿಂದ ಅಸ್ತಿತ್ವದಲ್ಲಿರುವುದನ್ನು ಗಮನಿಸಿ ಕಾಯ್ದೆಯ ಅಡಿಯಲ್ಲಿ ಸ್ಲಂ ಪ್ರದೇಶವೆಂದು ಘೋಷಣೆ ಮಾಡಲು ಗುಡಿಸಲು ಪ್ರದೇಶಗಳ ಕುಟುಂಬಗಳ ಮತದಾರರ ಪಟ್ಟಿ, ಜಾಗೆಯ ನಕಾಶೆ ಮತ್ತು ಇತರ ಮೂಲ ದಾಖಲೆಗಳನ್ನು ನಗರಾಭಿವೃದ್ಧಿ ಯೋಜನಾಧಿಕಾರಿಗಳಿಗೆ ಪೂರೈಸಿದ್ದು, ಸುಮಾರು 5 ತಿಂಗಳುಗಳಿಂದ ಅಧಿಕಾರಿಗಳು ವಿನಾಕಾರಣ ಸ್ಲಂ ಪ್ರದೇಶದ ಬಡಜನರಿಗೆ ಸ್ಪಂದಿಸದೇ ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ. ಇಲ್ಲಿಯವರೆಗೂ ಗುಡಿಸಲು ಪ್ರದೇಶಗಳನ್ನು ಸ್ಲಂ ಪ್ರದೇಶಗಳನ್ನಾಗಿ ಘೋಷಣೆ ಮಾಡದೇ ಇರುವುದು ಖಂಡನಾರ್ಹ. ಈ ಗುಡಿಸಲು ಪ್ರದೇಶಗಳಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಬಡ ಕುಟುಂಬಗಳು ಹೆಚ್ಚಾಗಿ ವಾಸಿಸುತ್ತಿದ್ದು, ಇಲ್ಲಿ ನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಇಂತಹ ಗುಡಿಸಲು ಪ್ರದೇಶದ ಬಡ ಕುಟುಂಬಗಳ ಪ್ರದೇಶವನ್ನು ಸ್ಲಂ  ಪ್ರದೇಶಗಳನ್ನಾಗಿ ಘೋಷಣೆ ಮಾಡದೇ ಇವರಿಗೆ ಸರ್ಕಾರದ ವಸತಿ, ಮೂಲ ಸೌಲಭ್ಯಗಳ ಯೋಜನೆಗಳಿಂದ ವಂಚಿತರಾಗಲು ನೇರವಾಗಿ ಅಧಿಕಾರಿಗಳು ಕಾರಣರಾಗಿದ್ದಾರೆ.
ತಕ್ಷಣ ಜಿಲ್ಲಾಧಿಕಾರಿಯವರು ಮನವಿಗೆ ಸ್ಪಂದಿಸಿ ರಾಚೂಟೇಶ್ವರ ನಗರ ಮತ್ತು ಬಾಪೂಜಿ ನಗರ ಗುಡಿಸಲು ಪ್ರದೇಶಗಳನ್ನು ಸ್ಲಂಕಾಯ್ದೆ 1973ರ ಪ್ರಕಾರ 3ಪಿ ಅಡಿಯಲ್ಲಿ ಸ್ಲಂ ಪ್ರದೇಶಗಳನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಇಮ್ತಿಯಾಜ ಮಾನ್ವಿ, ಅಶೋಕ ಕುಡತಿನ್ನಿ, ತಿಪ್ಪವ್ವ ಮುಟಗಾರ, ಯಲ್ಲಪ್ಪ ರಾಮಗಿರಿ, ಉಮಾದೇವಿ ಕಾತರಕಿ, ದುರ್ಗಪ್ಪ ನವಲಗುಂದ, ವಿನಯ ತಿಮ್ಮಾಪುರ, ಶರೀಫ ಬಿಳೆಯಲಿ, ಮಲ್ಲೇಶಪ್ಪ ಕಲಾಲ, ಮಂಜುನಾಥ ಮುಳಗುಂದ, ಇಬ್ರಾಹಿಂ ಮುಲ್ಲಾ, ಅಶೋಕ ಕುಸಬಿ, ಗೈಬುಸಾಬ ಡಾಲಾಯತ, ಅಮೀನಸಾಬ ಕಳಸಾಪೂರ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.