ಸ್ವಾತಂತ್ರ್ಯಪೂರ್ವ ಶಾಲೆ ತಾಲೂಕಿಗೆ ಹೆಮ್ಮೆ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಜ. 21
ಕರ್ನಾಟಕ ಏಕೀಕರಣ ರೂವಾರಿ ದಿ. ಅಂದಾನಪ್ಪ ದೊಡ್ಡಮೇಟಿಯವರ ಶಿಕ್ಷಣ ಪ್ರೇಮದ ಸಂಕೇತವಾಗಿ ಅಂದಿನ ಬಾಂಬೆ ಸರ್ಕಾರದಲ್ಲಿ ತಾಲೂಕಿನ ಪ್ರಪ್ರಥಮ ಕನ್ನಡ ಶಾಲೆಯು 1867ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಸೋಮವಾರ ಸಮೀಪದ ಜಕ್ಕಲಿ ಗ್ರಾಮದ ಸರ್ಕಾರಿ ಬಾಲಕರ ಮಾದರಿ ಕೇಂದ್ರ ಶಾಲೆಯಲ್ಲಿ 2011-12ನೇ ಸಾಲಿನ ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ಪ್ರಧಾನ ಗುರುಗಳ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ಜಕ್ಕಲಿ ಗ್ರಾಮಕ್ಕೆ ಭವ್ಯ ಇತಿಹಾಸವಿದೆ. ಕರ್ನಾಟಕ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರ ಕನ್ನಡ ನಾಡ ಪ್ರೇಮವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ಈ ಗ್ರಾಮಕ್ಕೆ 1964ರಲ್ಲಿ ಮಹಾತ್ಮಾ ಗಾಂಧೀಜಿಯವರು, ಕರ್ನಾಟಕದ ಗಾಂಧೀಜಿ ಎಂದೇ ಹೆಸರಾದ ಹರ್ಡೇಕರ್ ಮಂಜಪ್ಪನವರು ಭೇಟಿ ನೀಡಿರುವುದು ಹೆಮ್ಮಯ ವಿಷಯ. ಇದು ಈ ಗ್ರಾಮದ ಐತಿಹಾಸಿಕ ಕುರುಹುಗಳಿಗೆ ಮೈಲುಗಲ್ಲಾಗಿದೆ ಎಂದರು.
ಈಚೆಗೆ ನಡೆದ ಸಂಪುಟ ಸಭೆಯಲ್ಲಿ ಗ್ರಾಮದ ಏಕೈಕ ಪ್ರೌಢ ಶಾಲೆಗೆ ಅನುದಾನ ನೀಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ಸರ್ಕಾರವೇ ಈ ಪ್ರೌಢ ಶಾಲೆಯ ಉಸ್ತುವಾರಿ ನೋಡಿಕೊಳ್ಳುವುದು. ಇಲ್ಲಿ ನಿರ್ಮಾಣವಾದ ಪ್ರತಿಯೊಂದು ಸರ್ಕಾರಿ ಆಸ್ತಿಗಳು ಜನತೆಯ ಬೆವರಿನ ಹಣದಿಂದ ಎನ್ನುವುದನ್ನು ಸರ್ವರೂ ಅರ್ಥೈಸಿಕೊಳ್ಳಬೇಕು. ರಾಜಕೀಯ ಬಳಸಿ ಸರ್ಕಾರಿ ಆಸ್ತಿಗಳಿಗೆ ತೊಂದರೆ ನೀಡಿದರೆ ನಮ್ಮ ಆಸ್ತಿಯನ್ನು ನಾವೇ ಹಾಳು ಮಾಡಿದಂತಾಗುತ್ತದೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ಪಕ್ಷವಿರಲಿ, ಯಾರೇ ನಾಯಕರಾಗಲಿ ಅಭಿವೃದ್ಧಿಯೇ ಅವರ ಮೂಲಮಂತ್ರವಾಗಬೇಕು. ಅಂದಾಗ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದರು.
ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಕೆ. ಕಾಳಪ್ಪನವರ ಹಾಗೂ ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಅನಿಲಕುಮಾರ ಹೊಸಮನಿ ಮಾತನಾಡಿದರು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ರವಿ ದೊಡ್ಡಮೇಟಿ, ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ತಾಪಂ ಸದಸ್ಯೆ ಮಾಲಾನಬಿ ಗಡಾದ, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಮೇಟಿ, ಉಪಾಧ್ಯಕ್ಷೆ ಭುವನೇಶ್ವರಿ ಪಲ್ಲೇದ, ಪ್ರಭಣ್ಣ ಮೇಟಿ, ಸಿದ್ಧಣ್ಣ ಮೇಟಿ, ತೋಟಪ್ಪ ಕಡಗದ, ತಾಪಂ ಇಓ ಎಸ್.ಎಂ. ರುದ್ರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

