ಗದಗ

ಆಶ್ರಯ ಮನೆಗಳ ಸಾಲ ಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಜ. 22
ಪುರಸಭೆ ವ್ಯಾಪ್ತಿಯಲ್ಲಿ ಬರುವ ನೂರಾರು ಆಶ್ರಯ ಮನೆಗಳ ಫಲಾನುಭವಿಗಳು ತಮ್ಮ ಆಶ್ರಯ, ವಾಂಬೆ ಮನೆಗಳ ಮೇಲೆ ಇರುವ ಸಾಲವನ್ನು ಸರ್ಕಾರವು ಕೂಡಲೇ ಮನ್ನಾ ಮಾಡಿ, ಎಲ್ಲ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸುವಂತೆ ಆಗ್ರಹಿಸಿ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆಯ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿ, ಸರ್ಕಾರ ನಿರಾಶ್ರಿತರಿಗೆ ನೀಡಿದ ಮನೆಗಳ ಮೇಲಿನ ಸಾಲವನ್ನು ತೀರಿಸುವಂತೆ ಫಲಾನುಭವಿಗಳಿಗೆ ನೋಟಿಸ್ ನೀಡಿದೆ. ಜನತೆ ಬರಗಾಲದಿಂದ ತತ್ತರಿಸಿರುವ ಈ ಸಂದರ್ಭದಲ್ಲಿ ಸಾಲ ತೀರಿಸುವಂತೆ ನೋಟಿಸ್ ಕಳಿಸಿರುವುದು ಖಂಡನೀಯ. ದೊಡ್ಡ ದೊಡ್ಡ ಕಾರ್ಖಾನೆಗಳ  ಮಾಲೀಕರ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡುವ ಸರ್ಕಾರ, ವಾಸಿಸಲು ಸೂರಿಲ್ಲದ ಬಡವರಿಗೆ, ನಿರ್ಗತಿಕರಿಗೆ ನೀಡಿದ ಆಶ್ರಯಮನೆಗಳ ಸಾಲವನ್ನು ಮರುಪಾವತಿಸುವಂತೆ ನೋಟಿಸ್ ನೀಡಿರುವುದು ಸರಿಯಲ್ಲ. ಮುಂಬರುವ ಬಜೆಟ್‌ನಲ್ಲಿ ಈ ಎಲ್ಲ ಮನೆಗಳ ಸಾಲವನ್ನು ಮನ್ನಾ ಮಾಡುವಂತೆ ಮುಖ್ಯಮಂತ್ರಿಗಳು ಮುಂಗಡಪತ್ರದಲ್ಲಿ ಘೋಷಿಸಬೇಕು.   
ಸರ್ಕಾರ ನೀಡಿರುವ ಮನೆಗಳು ಸಾಲದ ಮನೆಗಳಲ್ಲ. ಅವು ನಮ್ಮೆಲ್ಲರ ಹಕ್ಕಿನ ಮನೆಗಳು. ಸರ್ಕಾರ ಫಲಾನುಭವಿಗಳಿಗೆ ಮೋಸ ಮಾಡುತ್ತಿದೆ. ಈ ಕೂಡಲೇ ಬಜೆಟ್‌ನಲ್ಲಿ ಸಾಲಮನ್ನಾ ಘೋಷಣೆ ಮಾಡದಿದ್ದರೆ ಹಾಗೂ ಹಕ್ಕುಪತ್ರ ವಿತರಣೆ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು.
ಬಸವರಾಜ ನವಲಗುಂದ ಮಾತನಾಡಿ, ಈ ಹಿಂದೆ ಅನೇಕ ಬಾರಿ ಕೊಳಚೆ ನಿರ್ಮೂಲನಾ ಮಂಡಳಿಗೆ ಹಕ್ಕು ಪತ್ರ ವಿತರಿಸುವಂತೆ ಹಾಗೂ ಸಾಲ ಮನ್ನಾ ಮಾಡುವಂತೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಈ ಸಂದರ್ಭದಲ್ಲಿ ಹನುಮಂತಪ್ಪ ಬಂಡಿವಡ್ಡರ, ಅರ್ಜುನ ಕರಡಿಕೊಳ್ಳ, ಗಪರಸಾಬ್ ಔರಂಗ್, ಫಕ್ರುದ್ದೀನ ಹಾರೋಗೇರಿ, ಬಿ.ಕೆ. ಪಾಟೀಲ, ಹನುಮಂತಪ್ಪ ದೊಡ್ಡಮನಿ, ಹನುಮಂತಪ್ಪ ಹೆಸರೂರ, ಡಿ.ಎಂ. ಉಪ್ಪಾರ, ಹುಲಿಗೆಮ್ಮ ಬಂಡಿವಡ್ಡರ, ಕಾಳಮ್ಮ ಚಲವಾದಿ, ರಾಜಾಸಾಬ್ ಅಲ್ಲಿಪೂರ, ಬಸವರಾಜ ಮಡಿವಾಳರ, ಪರುಶುರಾಮ ನರೇಗಲ್, ತಿಪ್ಪಣ್ಣ ಕಟ್ಟಿಮನಿ ಹಾಗೂ ಹಲವಾರು ಆಶ್ರಯ ಮನೆಗಳ ಫಲಾನುಭವಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.