ವಾಯವ್ಯ ಸಾರಿಗೆ ಸಂಸ್ಥೆ ಅಭಿವೃದ್ಧಿಗೆ # 50 ಕೋಟಿ
ಕನ್ನಡಪ್ರಭ ವಾರ್ತೆ, ಗದಗ, ಜ. 23
ಈ ಹಿಂದೆ ಸರ್ಕಾರ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಲವರ್ಧನೆಗೆ ಘೋಷಿಸಿರುವ # 50 ಕೋಟಿ ಅನುದಾನವನ್ನು ಶೀಘ್ರಗತಿಯಲ್ಲಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ವಾಯವ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಹೇಳಿದರು.
ಅವರು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ವ್ಯಾಪ್ತಿಯಲ್ಲಿ ಬರುವ 6 ಜಿಲ್ಲೆ ಮತ್ತು 8 ವಿಭಾಗಗಳಿಗೆ ಸರ್ಕಾರ ನೀಡುವ # 50 ಕೋಟಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಈ ಭಾಗದ ಸಾರಿಗೆ ವ್ಯವಸ್ಥೆಯಲ್ಲಿ ತೃಪ್ತಿಕರವಾದ ಬದಲಾವಣೆ ತರಲಾಗುವುದು. # 46 ಲಕ್ಷ ವೆಚ್ಚದಲ್ಲಿ ಜಿಲ್ಲೆಯ ಗಜೇಂದ್ರಗಡ ಬಸ್ನಿಲ್ದಾಣ ಹಾಗೂ ವಾಣಿಜ್ಯ ಮಳಿಗೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಅದೇ ರೀತಿ ಶಿರಹಟ್ಟಿ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆ, ಹಿರೇವಡ್ಡಟ್ಟಿ ಗ್ರಾಮದ ನೂತನ ಬಸ್ನಿಲ್ದಾಣ ಪೂರ್ಣಗೊಂಡಿದ್ದು, ಇವುಗಳ ಉದ್ಘಾಟನೆ ಕಾರ್ಯ ಇನ್ನು 8 ದಿನಗಳೊಳಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ನೇತೃತ್ವದಲ್ಲಿ ಜರುಗಿಸಲಾಗುವುದು. ನರೇಗಲ್ಲನಲ್ಲಿ ಹೊಸಬಸ್ ನಿಲ್ದಾಣ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ರೋಣ ಬಸ್ ನಿಲ್ದಾಣ ಸುಧಾರಣೆಗೆ ಕೂಡ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಗದಗ ಬೆಟಗೇರಿ ಹಾಗೂ ಹುಲಕೋಟಿ ನಡುವೆ ಓಡಾಡುತ್ತಿರುವ ನಗರ ಸಾರಿಗೆ ಬಸ್ಸುಗಳಿಗೆ ಇನ್ನೂ 10 ಹೈಟೆಕ್ ಬಸ್ಸುಗಳ ಸೇರ್ಪಡೆ ಕಾರ್ಯ ಶೀಘ್ರವೇ ನಡೆಯಲಿದೆ. ನಗರ ಸಾರಿಗೆ ಬಸ್ಸುಗಳನ್ನು ಬೆಟಗೇರಿಗೆ ಮೊಟಕುಗೊಳಿಸದೇ ನರಸಾಪುರದ ವರೆಗೆ ಓಡಾಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್.ಬಿ. ಸಂಕಣ್ಣವರ, ಶಹರ ಬಿಜೆಪಿ ಅಧ್ಯಕ್ಷ ತೋಟುಸಾ ಭಾಂಡಗೆ, ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಆನಂದ ಶೇಠ, ಬಿಜೆಪಿ ವಕ್ತಾರ ಶ್ರೀನಿವಾಸ ಹುಬ್ಬಳ್ಳಿ, ವಿಶ್ವನಾಥ ಸಾಳುಂಕೆ ಉಪಸ್ಥಿತರಿದ್ದರು.
ಖಾಸಗಿ ಬಂಕ್ಗಳಿಂದ ಡೀಸೆಲ್ ಖರೀದಿ
ಖಾಸಗಿ ಪೆಟ್ರೋಲ್ ಬಂಕ್ಗಳಲ್ಲಿ ಮಾರಾಟವಾಗುವ ಡೀಸೆಲ್ ಪ್ರತಿಲೀಟರ್ಗೆ # 52.49 ದರ ಇದ್ದರೆ ಸಾರಿಗೆ ಸಂಸ್ಥೆಯ ಬಂಕ್ಗಳಲ್ಲಿ ಹೆಚ್ಚಿಗೆ ಅಂದರೆ ಪ್ರತಿ ಲೀಟರ್ಗೆ # 64.29 ದರ ನಿಗದಿಪಡಿಸಲಾಗಿದೆ.
ಈ ದುಬಾರಿ ದರದಲ್ಲಿ ಡೀಸೆಲ್ ಖರೀದಿ ಮಾಡುವುದು 4700 ಬಸ್ಸುಗಳನ್ನು ಹೊಂದಿರುವ ಸಂಸ್ಥೆಗೆ ಹೊರೆಯಾಗಿದ್ದು, ಈ ಸಮಸ್ಯೆ ನಿವಾರಣೆಗೆಂದು ಖಾಸಗಿ ಬಂಕ್ಗಳ ಮೂಲಕವೇ ಸಂಸ್ಥೆ ಖರೀದಿ ಮಾಡಲು ಕ್ರಮ ಕೈಗೊಂಡಿದೆ. ಹಣವನ್ನು ಆಯಾ ಖಾಸಗಿ ಪೆಟ್ರೋಲ್ ಬಂಕ್ಗಳಿಗೆ ಡೀಸೆಲ್ ಖರೀದಿ ಮಾಡಿದ 7 ದಿನದೊಳಗೆ ಮರುಪಾವತಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

