ಗದಗ

ಕಳಸಾ-ಬಂಡೂರಿ ಹೋರಾಟಕ್ಕೆ ಬೆಂಬಲ: ದಶರಥ ಗಾಣಿಗೇರ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಜ. 27
ಗದಗ ಜಿಲ್ಲೆಯಲ್ಲಿ 2 ವರ್ಷಗಳಿಂದ ಮಳೆ ಬಾರದೆ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮಲಪ್ರಭಾ ಜಲಾಶಯಕ್ಕೆ ಕಳಸಾ ಬಂಡೂರಿ ನಾಲಾ ಜೋಡಣೆ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ರೈತ ಸಮುದಾಯ ಬಹುದಿನಗಳಿಂದ ಕಳಸಾ ಬಂಡೂರಿ ನಾಲಾ ಜೋಡಣೆ ಮಾಡುವಂತೆ ಹೋರಾಟ ಮಾಡುತ್ತಿದ್ದರೂ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕಳಸಾ ಹಳ್ಳಕ್ಕೆ ಸ್ವಲ್ಪ ಹಣ ಬಿಡಗಡೆ ಮಾಡಿ ಕೈತೊಳೆದುಕೊಂಡಿದೆ. ಹೀಗಾಗಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ನೇತೃತ್ವದಲ್ಲಿ ನೀರಾವರಿ ಅಧಿಕಾರಿಗಳ ಮೂಲಕ ಅಧ್ಯಯನ ಮಾಡಿ, 20 ವರ್ಷಗಳಿಂದ ಖಾನಾಪುರ ಮೇಲ್ಭಾಗದಲ್ಲಿ ವಿವಿಧ ಹಳ್ಳಗಳಿಂದ 7 ಟಿಎಂಸಿಗೂ ಅಧಿಕ ನೀರು ಬರುತ್ತದೆ, ವಿದ್ಯುತ್ ಕೂಡ ದೊರೆಯುತ್ತದೆ ಎಂಬ ವರದಿ ಸಲ್ಲಿಸಿದ್ದರೂ ರಾಜ್ಯ ಸರ್ಕಾರ ಕಾಳಜಿ ವಹಿಸದಿರುವ ಕಾರಣ ಯೋಜನೆಗೆ ಹಿನ್ನಡೆಯಾಗಿದೆ ಎಂದು ದೂರಿದರು.
ಕೇಂದ್ರಕ್ಕೆ ಅನ್ಯ ರಾಜ್ಯದವರು ನೀಡಿದ ತಪ್ಪು ಮಾಹಿತಿಯಿಂದಾಗಿ, ಮಹಾದಾಯಿ ಯೋಜನೆಯಿಂದ ಕರ್ನಾಟಕಕ್ಕೆ ನೀರು ಕೊಡಲು ಸಾಧ್ಯವಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದರು. ಸ್ಥಳೀಯ ಕೆಲವು ಕಾಂಗ್ರೆಸ್ ನಾಯಕರೂ ಕಳಸಾ ಬಂಡೂರಿ ಹೋರಾಟವನ್ನು ಲೇವಡಿ ಮಾಡುತ್ತಿದ್ದಾರೆ. ಆದರೆ, ತಾವು ಹೋರಾಟವನ್ನು ಬೆಂಬಲಿಸಿದ್ದು, ಈ ಕುರಿತು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಮಾಹಿತಿ ನೀಡಿದ್ದೇನೆ ಎಂದರು.
ಜ. 30ರಂದು ಕಳಸಾ ಬಂಡೂರಿ ನಾಲಾ ಯೋಜನೆಯನ್ನು ಮಲಪ್ರಭಾ ಜಲಾಶಯಕ್ಕೆ ಜೋಡಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕದ ಮಠಾಧೀಶರು ಹಮ್ಮಿಕೊಂಡಿರುವ ಹೋರಾಟವನ್ನು ತಾವು ಬೆಂಬಲಿಸಿದ್ದು, ಈ ಹೋರಾಟದಲ್ಲಿ 10 ಸಾವಿರ ಜನರು ಸೇರುವ ನೀರಿಕ್ಷೆ ಹೊಂದಲಾಗಿದೆ ಎಂದರು.
ಎಪಿಎಂಸಿ ಸದಸ್ಯ ಪರಶುರಾಮ ಅಳಗವಾಡಿ, ಅನಿಲ ತೆಗ್ಗಿನಕೇರಿ, ಶಿವಪ್ಪ ಕೆಂದರ, ಮಾಜಿ ಗ್ರಾಪಂ ಅಧ್ಯಕ್ಷ ಸೋಮಣ್ಣ ಉಮಚಗಿ, ಲಿಂಗಪ್ಪ ಮೇಟಿ, ಆನಂದ ಜಕ್ಕಲಿ, ಬಸವರಾಜ ಬ್ಯಾಳಿ, ಬಿ.ಎಲ್. ಪೂಜಾರ, ಗ್ರಾಪಂ ಸದಸ್ಯ ಗಂಗಾದಾರ ಮನಸೋಪ್ಪಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.