ಪೊಲೀಸ್ ಜೀಪಲ್ಲೇ ಪ್ರಥಮ ಚಿಕಿತ್ಸಾ ಪೆಟ್ಟಿಗೆ
ಟ ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಜ. 29
ನಮ್ಮೆಲ್ಲರಿಗೆ ರಕ್ಷಣೆ ನೀಡುತ್ತಿರುವ ಪೊಲೀಸ್ ಇಲಾಖೆ ಬಗ್ಗೆ ಸಮಾಜದಲ್ಲೊಂದು ಅಸಡ್ಡೆ ಇದೆ. ಎಲ್ಲ ಮುಗಿದ ಮೇಲೆ ಬರುತ್ತಾರೆ ಎಂಬುದು ವಾಡಿಕೆಯ ಮಾತು.
ಇದಕ್ಕೆ ಅಪವಾದ ಎಂಬಂತೆ ಕಾರ್ಯ ನಿರ್ವಹಿಸಲು ಗದಗ ಪೊಲೀಸ್ ಇಲಾಖೆ ಸಜ್ಜಾಗಿದೆ. ಪ್ರತಿಯೊಂದು ಪೊಲೀಸ್ ವಾಹನದಲ್ಲೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ (ಫಸ್ಟ್ ಏಡ್ ಬಾಕ್ಸ್) ಇರಿಸುವ ಮೂಲಕ ಜನಸ್ನೇಹಿಯಾಗಲು ಮುಂದಾಗಿದೆ.
ಹೊಸತೇನಿದೆ? ಪೊಲೀಸ್ ಇಲಾಖೆ ಅಧಿಕಾರಿಗಳ ಜೀಪ್‌ನಲ್ಲಿ ಸಣ್ಣ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರುತ್ತದೆ. ಆಯಾ ಅಧಿಕಾರಿಗಳೇ ಪದೇಪದೇ ಗಮನಿಸಿ, ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದರು. ಈಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರ ಬಳಿ ಇರುವ ಫಸ್ಟ್ ಏಡ್ ಕಿಟ್ ಸಾಕಾಗುವುದಿಲ್ಲ. ಹೀಗಾಗಿ, ಸರ್ಕಾರದಿಂದಲೇ ನೀಡಿರುವ ವಿಶೇಷ ಕಿಟ್‌ನ್ನು ಪ್ರತಿ ಪೊಲೀಸ್ ಜೀಪ್‌ನಲ್ಲಿ ಅಳವಡಿಸಲು ಚಿಂತನೆ ನಡೆಸಲಾಗಿದೆ.
15 ಜೀಪ್‌ಗಳಲ್ಲಿ ಕಿಟ್ ಲಭ್ಯ: ಜಿಲ್ಲೆಯ 5 ಪೊಲೀಸ್ ವೃತ್ತಗಳಲ್ಲಿ 10 ಪಿಎಸ್‌ಐಗಳು ಹಾಗೂ ಐವರು ಸಿಪಿಐಗಳು ಹಾಗೂ ಹಿರಿಯ ಅಧಿಕಾರಿಗಳ ಒಟ್ಟು 15ಕ್ಕೂ ಹೆಚ್ಚು ವಾಹನಗಳಲ್ಲಿ ಆರೋಗ್ಯ ಇಲಾಖೆಯಿಂದ ವಿತರಿಸುವ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹೊಂದಲು ಜಿಲ್ಲಾ ಪೊಲೀಸ್ ಇಲಾಖೆ ನಿರ್ಧರಿಸಿದೆ. ಇದು ಪ್ರಾಮಾಣಿಕವಾಗಿ ಅನುಷ್ಠಾನವಾದಲ್ಲಿ ಅಪಘಾತದ ವೇಳೆ ಸಂಭವಿಸುವ ಜೀವ ಹಾನಿ ತಗ್ಗಿಸಲು ಸಾಧ್ಯ.
ಪೊಲೀಸರಿಗೂ ಅನುಕೂಲ: ಪೊಲೀಸ್ ಅಧಿಕಾರಿಗಳ ವಾಹನದಲ್ಲಿ ಸುಸಜ್ಜಿತವಾದ ಫಸ್ಟ್ ಏಡ್ ಕಿಟ್ ಲಭ್ಯತೆ ಅಪಘಾತದಲ್ಲಿ ಗಾಯಗೊಂಡವರಿಗೆ ಮಾತ್ರವಲ್ಲ, ಪೊಲೀಸರಿಗೂ ಅನುಕೂಲ ಕಲ್ಪಿಸುತ್ತದೆ. ಅಪಘಾತದ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಸಂಭವಿಸಿದ್ದು, ತುರ್ತು ಪರಿಸ್ಥಿತಿಯಲ್ಲಿ ಪೊಲೀಸರು ಯಾವುದೇ ಸುರಕ್ಷಾ ವ್ಯವಸ್ಥೆ ಇಲ್ಲದೆ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ಸುಸಜ್ಜಿತ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇದ್ದಲ್ಲಿ ಅವರಿಗೂ ಅನುಕೂಲ.
ಸದ್ಯದಲ್ಲೇ ಜಾರಿ...
ಜಿಲ್ಲಾ ಪೊಲೀಸ್ ಇಲಾಖೆ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಇನ್ನಷ್ಟು ಜನಪರವಾಗಿ, ಸಾರ್ವಜನಿಕರಿಗೆ ಉಪಯುಕ್ತವಾಗುವ ದೃಷ್ಟಿಯಿಂದ ಎಲ್ಲ ಪೊಲೀಸ್ ಜೀಪ್‌ಗಳಲ್ಲಿ ಸುಸಜ್ಜಿತ ಫಸ್ಟ್ ಏಡ್ ಕಿಟ್ ಹೊಂದಲು ಯೋಜನೆ ರೂಪಿಸಲಾಗಿದೆ. ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅವರೂ ಸಮ್ಮತಿಸಿದ್ದಾರೆ. ಸದ್ಯದಲ್ಲೇ ಇದು ಜಾರಿಗೆ ಬರಲಿದೆ.
ಟ ಎಸ್.ಡಿ. ಶರಣಪ್ಪ, ಎಸ್ಪಿ, ಗದಗ
ಉತ್ತಮ ಯೋಚನೆ
ಇದೊಂದು ಉತ್ತಮ ಯೋಚನೆ. ತೀವ್ರ ತೊಂದರೆಯಲ್ಲಿ ಇರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಇಂತಹ ಉತ್ತಮ ನಿರ್ಧಾರ ತೆಗೆದುಕೊಂಡಿರುವ ಜಿಲ್ಲೆಯ ಹೊಸ ಎಸ್ಪಿ ಎಸ್.ಡಿ. ಶರಣಪ್ಪ ಅವರ ಕಾರ್ಯವೈಖರಿ ಶ್ಲಾಘನೀಯ. ಮುಂದೆ ಅವರಿಂದ ಇನ್ನಷ್ಟು ಜನೋಪಯೋಗಿ ಕಾರ್ಯಗಳು ಜಾರಿಗೆ ಬರಲಿ.
ಟ ವಿಜಯ ಮುಳಗುಂದ,
ದಲಿತ ಮುಖಂಡ
ಕಿಟ್ ವಿತರಿಸಲು ಕ್ರಮ
ಪೊಲೀಸ್ ವಾಹನಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಅಳವಡಿಸುವ ಸಂಬಂಧ ಎಸ್ಪಿ ಶರಣಪ್ಪ ಅವರು ಬೇಡಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಔಷಧಿಗಳನ್ನು ಒಳಗೊಂಡ ಕಿಟ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.
ಟ ಡಾ ಡಿ.ಬಿ. ಚೆನ್ನಶೆಟ್ಟಿ
ಡಿಎಚ್‌ಓ, ಗದಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

