22 ಎಕರೆಯಲ್ಲಿ ವಾಜಪೇಯಿ ವಸತಿ ಶಾಲೆ: ಪಾಟೀಲ
ಕನ್ನಡಪ್ರಭ ವಾರ್ತೆ, ರೋಣ, ಜು. 16
ಗ್ರಾಮೀಣ ಪ್ರದೇಶದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ರೋಣದಲ್ಲಿ 22 ಎಕರೆ ಪ್ರದೇಶದಲ್ಲಿ ರು. 10 ಕೋಟಿ ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆಯನ್ನು ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಸೋಮವಾರ ಪಟ್ಟಣದ ಗುಲಗಂಜಿ ಮಠದ ಆವರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಘ ಇವುಗಳ ಆಶ್ರಯದಲ್ಲಿ ಜರುಗಿದ ಅಟಲ್ ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆಯ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು. ವಾಜಪೇಯಿ ವಸತಿ ಶಾಲೆಯ ಕಟ್ಟಡ ನಿರ್ಮಿಸಲು ರೋಣ ಮತ್ತು ಅಬ್ಬಿಗೇರಿ ರಸ್ತೆಯಲ್ಲಿ 22 ಎಕರೆ ಪ್ರದೇಶ ಗುರುತಿಸಲಾಗಿದ್ದು, ಖರೀದಿ ಪ್ರಕ್ರಿಯೆ ನಡೆದಿದೆ. ಸದ್ಯದಲ್ಲಿಯೇ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣ ಕೋಡಬೇಕು ಎಂಬ ಉದ್ದೇಶದಿಂದ ಹಲವಾರು ಕಾರ್ಯಕ್ರಮ ಜಾರಿಗೆ ತರುತ್ತಿದೆ. ಜವಾಹರ ವಸತಿ ಶಾಲೆ, ಮೊರಾರ್ಜಿ ದೇಸಾಯಿ, ರಾಣಿ ಚನ್ನಮ್ಮ ವಸತಿ ಶಾಲೆಗಳಂತೆಯೇ ವಾಜಪೇಯಿ ವಸತಿ ಶಾಲೆಯಲ್ಲೂ ಬಡ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಲಿದೆ. ಗ್ರಾಮೀಣ ಬಡ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನೀರಿನ ಯೋಜನೆ: ರೋಣ ಪಟ್ಟಣದ ಜನತೆಯ ಬಹು ದಶಕಗಳ ಕುಡಿವ ನೀರಿನ ತೀವ್ರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು 100 ಎಕರೆ ಪ್ರದೇಶದಲ್ಲಿ ಬೃಹತ್ ಕೆರೆಯನ್ನು ನಿರ್ಮಿಸಿ, ರೋಣ ಪಟ್ಟಣಕ್ಕೆ ಪ್ರತ್ಯೇಕವಾಗಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಈ ಕುರಿತು ಈಗಾಗಲೇ ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾದ ತಕ್ಷಣವೇ ಕೆರೆ ನಿರ್ಮಾಣ ಪ್ರಕ್ರಿಯೆ ಪ್ರಾರಂಭಸಲಾಗುವುದು. ರೋಣ ಕ್ಷೇತ್ರ ಮತ್ತು ತಾಲೂಕಿಗೆ ರಸ್ತೆ, ಕುಡಿವ ನೀರು, ಮಹಿಳಾ ಶೌಚಾಲಯ, ಚರಂಡಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದು. ಭರವಸೆ ನೀಡಿದಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವೀರಮಲ್ಲಪ್ಪ ಪೂಜಾರ, ಸಾನ್ನಿಧ್ಯ ವಹಿಸಿದ್ದ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಜಿಪಂ ಸದಸ್ಯ ಡಾ. ಆರ್.ಬಿ. ಬಸವರಡ್ಡಿ, ತಾಪಂ ಸದಸ್ಯೆ ಗಾಯತ್ರಿ ನಾಗನೂರ, ಶಪೀಕ ಮೂಗನೂರ, ಮಲ್ಲಯ್ಯ ಮಹಾಪುರುಷಮಠ ಮಾತನಾಡಿದರು. ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ಉಪಾಧ್ಯಕ್ಷೆ ರುದ್ರವ್ವ ತಾಳಿ, ಸದಸ್ಯ ಅಂದಪ್ಪ ಬಿಚ್ಚೂರ, ರೇಣುಕಾ ಹಟ್ಟಿಮನಿ, ಮಾಲಾನಬಿ ಗಡಾದ, ಧಶರಥ ಗಾಣಿಗೇರ, ವೀರಣ್ಣ ಸೊನ್ನದ, ಮುತ್ತಣ್ಣ ಸಂಗಳದ, ವಿ.ಆರ್. ಗುಡಿಸಾಗರ, ಮಂಜುನಾತ ಹಾಳಕೇರಿ, ಶಿವಪ್ಪ ಕರಲಿಂಗಣ್ಣವರ, ದಾವಲಸಾಬ ಚಿನ್ನೂರ, ತೋಟಪ್ಪ ನವಲಗುಂದ, ಜಯಶ್ರೀ ನವಲಗುಂದ ಇದ್ದರು. ಬಸವರಾಜ ಬಳ್ಳಾರಿ ನಿರೂಪಿಸಿದರು. ವೈಶಾಲಿ ಸೊಲ್ಲಾಪೂರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

