ಗದಗ

ಎಲ್ಲ ಮಕ್ಕಳಿಗೂ ಶಿಕ್ಷಣ ನೀಡಿ

Published On :

ಕನ್ನಡಪ್ರಭ ವಾರ್ತೆ, ಗದಗ, ಜು. 18
ಎಲ್ಲ ಮಕ್ಕಳು 8 ವರ್ಷಗಳ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಪಡೆದುಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರದ್ದು ಮತ್ತು ಶಿಕ್ಷಕರದ್ದಾಗಿದೆ ಎಂದು ಪಿ.ಆರ್.ಪಿ. ವಿವೇಕಾನಂದಗೌಡ ಪಾಟೀಲ ಕರೆ ನೀಡಿದರು.
ಈಚೆಗೆ ಅವರು ತಾಲೂಕಿನ ಮುಳಗುಂದದ ಮಾದರಿ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ ಜರುಗಿದ 90 ದಿನಗಳ ವಿಶೇಷ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳನ್ನು ಮುಖ್ಯವಾಹಿನಿಗೆ ಸ್ವಾಗತಿಸಿ ಮಾತನಾಡಿದರು.
ಸತತವಾಗಿ ಗೈರುಹಾಜರಾಗಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರು ನಿತ್ಯ ಶಾಲೆಗೆ ಬರುವಂತೆ ಮಾಡಬೇಕು. ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯನ್ವಯ ಮಕ್ಕಳನ್ನು ಶಾಲೆಗೆ ಕಳುಹಿಸದ ಪಾಲಕರು ಅಪರಾಧಿಗಳಾಗುತ್ತಾರೆ. ಪಾಲಕರಿಗೆ ಸೂಕ್ತ ತಿಳಿವಳಿಕೆ ಮತ್ತು ಮಾರ್ಗದರ್ಶನವನ್ನು ಎಸ್‌ಡಿಎಂಸಿಯವರು ನೀಡಬೇಕು. ಮುಖ್ಯವಾಹಿನಿಗೆ ಬಂದ ಮಕ್ಕಳನ್ನು ಸಹಪಾಠಿಗಳು ಮತ್ತು ಶಿಕ್ಷಕರು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳಬೇಕು. ಈ ಮಕ್ಕಳಿಗೆ ವಿಶೇಷ ಪೂರಕ ಬೋಧನೆ ನೀಡುವ ಮೂಲಕ ಕಲಿಕಾ ಸಾಮರ್ಥ್ಯ ಹೆಚ್ಚಿಸಬೇಕು ಎಂದರು.
ಸಿಆರ್‌ಪಿ ಎಂ.ಎಂ. ಮೇಗಲಮನಿ ಮಾತನಾಡಿ, ನಿರಂತರವಾಗಿ ಶಾಲೆ ಬಿಡುವ ಮಕ್ಕಳ ಬಗ್ಗೆ ನಿಗಾವಹಿಸಿ ಸಂಬಂಧಿಸಿದ ಶಿಕ್ಷಕರು ಅವರ ಮನೆ ಮನೆಗೆ ಭೇಟಿ ನೀಡಿ ಪಾಲಕರಲ್ಲಿ ಜಾಗೃತಿ ಮೂಡಿಸಬೇಕು. ಈ ಮಕ್ಕಳನ್ನು ಕರೆ ತರುವಲ್ಲಿ ಎಸ್‌ಡಿಎಂಸಿ ಮತ್ತು ಪಂಚಾಯಿತಿ ಸದಸ್ಯರ ನೆರವನ್ನು ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಪಿ.ಟಿ. ಸಂಶಿ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಮಕ್ಕಳು ಮತ್ತು ಪಾಲಕರು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯ ಈರಣ್ಣ ಗೌಳಿ, ಶಬಾನಾಬಾನು ಕುರ್ತಕೋಟಿ, ವಸಂತಲಕ್ಷ್ಮಿ ಮಾಳೋದೆ ಮುಖ್ಯವಾಹಿನಿಗೆ ಬಂದ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಲೇಖನ ಸಾಮಗ್ರಿಗಳನ್ನು ವಿತರಿಸಿದರು. ಪ್ರಭಾರಿ ಮುಖ್ಯಶಿಕ್ಷಕ ವಿ.ವೈ. ನವಲೆ ಸ್ವಾಗತಿಸಿದರು. ಶಿಕ್ಷಕ ಜಿ.ಎಸ್. ತಳವಾರ ನಿರೂಪಿಸಿದರು. ಶಿಕ್ಷಕಿ ಎಸ್.ಡಿ. ಗುಂಜಳ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.