ಇಲ್ಲಗಳ ನಡುವೆ ಇದ್ದೂ ಇಲ್ಲದಂತಿರುವ ಶೀರನಹಳ್ಳಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 19
ತಾಲೂಕಿನ ಸಿಂಗಟಾಲೂರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಶೀರನಹಳ್ಳಿ ಗ್ರಾಮದಲ್ಲಿ ಸರಿಯಾದ ರಸ್ತೆ ಇಲ್ಲ, ಚರಂಡಿ ಇಲ್ಲ, ಮಹಿಳಾ ಶೌಚಾಲಯ ಇಲ್ಲ, ಹೀಗೆ ಹೇಳುತ್ತಾ ಹೋದರೆ ಈ ಗ್ರಾಮದಲ್ಲಿ ಇಲ್ಲಗಳ ಪಟ್ಟಿ ಬೆಳೆಯುತ್ತದೆ. ಈ ಗ್ರಾಮ ಇಲ್ಲಗಳ ನಡುವೆ ಇದ್ದೂ ಇಲ್ಲದಂತಾಗಿದೆ.
ಚುನಾವಣೆ ಸಮಯದಲ್ಲಿ ಜನಪ್ರತಿನಿಧಿಗಳಾಗ ಬಯಸುವವರು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ, ಗ್ರಾಮದಲ್ಲಿನ ಮೂಲ ಸೌಲಭ್ಯಗಳ ಕೊರತೆ ಸೇರಿದಂತೆ ಹತ್ತು ಹಲವಾರು ಸಮಸ್ಯೆ ಪರಿಹರಿಸುವ ಭರವಸೆ ನೀಡುವ ಮೂಲಕ ಜನರನ್ನು ನಂಬಿಸಿ ಮತ ಪಡೆಯುತ್ತಾರೆ. ಅಂತಹ ಗ್ರಾಮಗಳಲ್ಲಿ ಶೀರನಹಳ್ಳಿ ಗ್ರಾಮವೂ ಒಂದು. ಇಲ್ಲಿ ಹಲವು ವರ್ಷಗಳ ಹಿಂದೆ ಜೋಡಿಸಿದ ವಿದ್ಯುತ್ ತಂತಿಗಳು ತುಂಬಾ ಹಳೆಯದಾಗಿದ್ದು ಎಲ್ಲೆಂದರಲ್ಲಿ ತುಂಡಾಗಿ ಬೀಳುವ ಮೂಲಕ ಅಪಾಯದ ಸ್ಥಿತಿ ತಂದೊಡ್ಡಿವೆ.
ಶೀರನಹಳ್ಳಿ ಗ್ರಾಮಕ್ಕೆ ರಾತ್ರಿ 9ಕ್ಕೆ ಒಂದು ಬಸ್ ಊರೊಳಗೆ ಬರುವುದನ್ನು ಬಿಟ್ಟರೆ ಇಡೀ ದಿನ ಯಾವುದೇ ಬಸ್ ಊರ ಒಳಗೆ ಬರುವುದಿಲ್ಲ. ಎಲ್ಲವೂ ಹೊರಗಿನಿಂದಲೇ ಹೋಗುವುದರಿಂದ ಪ್ರತಿದಿನ ಇಲ್ಲಿನ ಜನರು ಅರ್ಧ ಕಿಮೀ ನಡೆದುಕೊಂಡು ಪ್ರಯಾಣ ಮಾಡಬೇಕಾಗಿದೆ.
ಉತ್ತಮ ರಸ್ತೆಯಿಲ್ಲ: ಮಳೆ ಬಂದಾಗ ಗ್ರಾಮದಲ್ಲಿ ರಜ್ಜು, ರಾಡಿ, ಕೊಳಕು ಕಾಲಿಡದಷ್ಟು ಗಲೀಜಾಗಿರುತ್ತದೆ. ಅಲ್ಲಲ್ಲಿ ತಿಪ್ಪೆ ಮತ್ತು ತಗ್ಗುಗಳಿರುವುದರಿಂದ ನೀರು ನಿಂತು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಮುಂಡರಗಿ ಹಮ್ಮಿಗಿ ಮುಖ್ಯರಸ್ತೆಯಿಂದ ಶೀರನಹಳ್ಳಿ ಗ್ರಾಮದ ಒಳಗೆ ಸಂಚರಿಸಲು ಉತ್ತಮವಾದ ರಸ್ತೆ ಇಲ್ಲದೇ ಇಕ್ಕಟ್ಟಾದ ಕಚ್ಚಾ ರಸ್ತೆಯಲ್ಲಿಯೇ ಗ್ರಾಮದ ಒಳಗೆ ಹೋಗಬೇಕಾಗಿದೆ. ಹಿಂದಿನ ಶಾಸಕ ರಾಮಣ್ಣ ಲಮಾಣಿ ಅಧಿಕಾರದ ಅವಧಿಯಲ್ಲಿ ಎಸ್ಸಿ, ಎಸ್ಟಿ ಕಾಲೋನಿಯಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆಯಾಗಿರುವುದನ್ನು ಹೊರತುಪಡಿಸಿದರೆ ಉಳಿದ ಎಲ್ಲ ರಸ್ತೆಯೂ ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದ್ದರಿಂದ ಗ್ರಾಮದ ಎಲ್ಲ ರಸ್ತೆಯನ್ನು ಡಾಂಬರ್ ಅಥವಾ ಕಾಂಕ್ರೀಟ್ ರಸ್ತೆ ಮಾಡಬೇಕೆನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.
ಅಪಾಯದ ಅಂಚಿನಲ್ಲಿ ವಿದ್ಯುತ್ ತಂತಿಗಳು: ಇಲ್ಲಿ ಜೋಡಿಸಿದ ವಿದ್ಯುತ್ ತಂತಿಗಳು ಬಹಳಷ್ಟು ಹಳೆಯದಾಗಿದ್ದು, ಆಗಾಗ್ಗೆ ಎಲ್ಲೆಂದರಲ್ಲಿ ಕಟ್ಟಾಗಿ ಬೀಳುತ್ತಿವೆ. ಜೋರಾಗಿ ಮಳೆ ಗಾಳಿ ಬೀಸಿದಾಗ ಹರಿದು ಬಿದ್ದು ಅನೇಕ ಬಾರಿ ಅಪಾಯ ತಪ್ಪಿವೆ. ಆದರೂ ಜನತೆಗೆ ವಿದ್ಯುತ್ ತಂತಿಯ ಭಯ ಮಾತ್ರ ನಿತ್ಯ ಕಾಡುತ್ತಲೇ ಇದೆ. ಗ್ರಾಮದ ಅನೇಕ ಕಡೆಗಳಲ್ಲಿ ತಂತಿಗಳು ಕಟ್ಟಾಗಿ ಬಿದ್ದಾಗ ಹೆಸ್ಕಾಂ ಇಲಾಖೆ ಮತ್ತೆ ಅದೇ ಕಟ್ಟಾದ ತಂತಿಗಳನ್ನು ಜೋಡಿಸಿದ್ದು, ಇದರಿಂದ ಅಪಾಯ ತಪ್ಪಿದ್ದಲ್ಲ. ತಂತಿಯು ಸಂಪೂರ್ಣ ಹಳೆಯದಾಗಿದ್ದು, ಇವುಗಳ ದುರಸ್ತಿ ಕಾರ್ಯ ನಡೆಯಬೇಕಿದೆ.
ಸುವರ್ಣ ಗ್ರಾಮ ಯೋಜನೆಗೆ ಒಳಪಡಿಸಿ: ಗ್ರಾಮದಲ್ಲಿ ಉತ್ತಮ ರಸ್ತೆ ಇಲ್ಲ, ಮಹಿಳಾ ಶೌಚಾಲಯವಿಲ್ಲ, ಸಾರ್ವಜನಿಕರು ತಮ್ಮ ಮನೆಗಳ ಮುಂದಿನ ನಲ್ಲಿಗಳನ್ನು ಸತತವಾಗಿ ಚಾಲೂಮಾಡಿ ಇಡುವುದರಿಂದ ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಂತು ಹಸಿರಾಗಿದೆ. ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಸರ್ಕಾರ ಶೀರನಹಳ್ಳಿ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಯಡಿ ಒಳಪಡಿಸಿ ಸಂಪೂರ್ಣ ಅಭಿವೃದ್ಧಿ ಮಾಡುವತ್ತ ಗಮನ ಕೊಡಬೇಕು. ಈ ಕುರಿತು ಈಚೆಗೆ ಗ್ರಾಮದ ಮತದಾರರಿಗೆ ಅಭಿನಂದಿಸುವ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಗ್ರಾಮಕ್ಕೆ ಅವಶ್ಯವಿರುವ ಕಾಮಗಾರಿಗಳನ್ನು ಹಂತಹಂತವಾಗಿ ಮಾಡುವುದಾಗಿ ಭರವಸೆ ನೀಡಿದ್ದು, ಗ್ರಾಮದ ನೈರ್ಮಲ್ಯ ಮತ್ತು ಸ್ವಚ್ಛತೆ ದೃಷ್ಟಿಯಿಂದ ಸುವರ್ಣ ಗ್ರಾಮ ಯೋಜನೆ ಅವಶ್ಯವಿದ್ದು ಅದರ ಮುಂಜೂರಾತಿಗೆ ಶಾಸಕರು ಹೆಚ್ಚು ಪ್ರಯತ್ನಿಸಬೇಕೆಂದು ಗ್ರಾಮಸ್ಥರು ರಾಮಕೃಷ್ಣ ದೊಡ್ಡಮನಿಗೆ ಒತ್ತಾಯಿಸಿದ್ದಾರೆ.
-ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

