ಗದಗ

ಪರಮ ತತ್ವಜ್ಞಾನವನ್ನುಬೋಧಿಸುವವನೇ ಸದ್ಗುರು

Published On :

ಗದಗ: ತತ್ವಜ್ಞಾನವನ್ನು ಉಪದೇಶಿಸಿ ಪರಮ ತತ್ವವನ್ನು ಬೋಧಿಸುವವನೇ ಸದ್ಗುರು ಎಂದು ಕಾಶಿಯ ಜ.ಡಾ. ಚಂದ್ರಶೇಖರ ಶಿವಾಚಾರ್ಯ ಹೇಳಿದರು. ಅವರು ಶುಕ್ರವಾರ ರಾತ್ರಿ ನಗರದ ಎಪಿಎಂಸಿ ಯಾರ್ಡ್ನಲ್ಲಿರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಪಂಚಾಚಾರ್ಯ ಸೇವಾ ಸಂಘದ ನೇತೃತ್ವದಲ್ಲಿ ಆಷಾಢ ಮಾಸದ ಗುರುಪೂರ್ಣಿಮೆಯ ನಿಮಿತ್ತ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಜೀವಿಗಳ ಮನಸ್ಸಿಗೆ ಅಜ್ಞಾನವೆಂಬ ಮಾಲಿನ್ಯ ಅಂಟಿಕೊಂಡಿರುವುದರಿಂದ ಅದನ್ನು ತನ್ನ ಉಪದೇಶದಿಂದ ಕಳೆಯುವವನೇ ಶ್ರೀಗುರುವು. ದರ್ಪಣಕ್ಕೆ ಮುಖದ ಪ್ರತಿಬಿಂಬ ತೋರಿಸುವ ಸಾಮರ್ಥ್ಯವಿದ್ದರೂ ಅದು ಮಲೀನಗೊಂಡಾಗ ಅದು ಪ್ರತಿಬಿಂಬ ತೋರಿಸುವುದಿಲ್ಲ. ಅದನ್ನು ವಿಭೂತಿಯಿಂದ ತಿಕ್ಕಿ ಸ್ವಚ್ಛಗೊಳಿಸಿದಾಗ ಅದರಲ್ಲಿ ಪ್ರತಿಬಿಂಬ ಕಾಣಬಹುದು. ಅದರಂತೆ ಶಿಷ್ಯನ ಚಿತ್ತಕ್ಕೆ ಅಂಟಿಕೊಂಡಿದ್ದ ಅಜ್ಞಾನವೆಂಬ ಮಾಲಿನ್ಯವನ್ನು ಶ್ರೀಗುರುವು ಸುಜ್ಞಾನವೆಂಬ ವಿಭೂತಿಯಿಂದ ತಿಕ್ಕಿ ಸ್ವಚ್ಛಗೊಳಿಸುತ್ತಾನೆ. ಅಂತೆಯೇ ನಿತ್ಯ ಗುರುವಿನ ಸಾನ್ನಿಧ್ಯದಲ್ಲಿ ಇರಬೇಕು. ಆದ್ದರಿಂದ ವಚನಕಾರರು ಶ್ರೀಗುರುವಿನ ಸಾನ್ನಿಧ್ಯ ಇರಲು ತತ್ವ ವಿಧ್ಯೆಯ ಚಿಂತೆ ಏಕಯ್ಯ ಎಂದು ನುಡಿದಿದ್ದಾರೆ ಎಂದರು. ಡಾ. ಎಸ್.ಬಿ. ಶೆಟ್ಟರ್, ಎಪಿಎಂಸಿ ಕಾರ್ಯದರ್ಶಿ ಎಂ. ನಂಜುಂಡಸ್ವಾಮಿ, ಪಂಚಾಚಾರ್ಯ ಮಾಂಗಲ್ಯ ಮಂದಿರದ ಕಾರ್ಯಾಧ್ಯಕ್ಷ ಬಸಣ್ಣ ಮಲ್ಲಾಡದ, ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, ವಿ.ಕೆ. ಗುರಮಠ, ನಗರಸಭೆ ಮಾಜಿ ಸದಸ್ಯ ಎಂ.ಎಂ. ಹಿರೇಮಠ, ಮಂಜುನಾಥ ಬೇಲೇರಿ, ಸುರೇಶ ಅಬ್ಬಿಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.