ಗದಗ

ಅಂಗವಿಕಲ ಶಾಲೆ ಶಿಕ್ಷಕರಿಗೆ ಸೇವಾ ಭದ್ರತೆ ನೀಡಿ

Published On :

ಗದಗ: ಸಾಮಾನ್ಯ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರ ವೇತನ ಅನುಸಾರ 1982ರ ಅಧಿನಿಯಮ ಜಾರಿಗೊಳಿಸಿ, ವಿಕಲಚೇತನ ಮಕ್ಕಳ ವಿಶೇಷ ಶಾಲೆಗಳ ವಿಶೇಷ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಆಗ್ರಹಿಸಿದರು.
ಅವರು ಶನಿವಾರ ನಗರದ ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ರಾಜ್ಯ ವಿಕಲಚೇತನ ಶಾಲೆಗಳ ಶಿಕ್ಷಕ, ಶಿಕ್ಷಕೇತರರ ಹೋರಾಟ ಸಮಿತಿಯ ರಾಜ್ಯ ಘಟಕದಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಸಿದ ಪ್ರತಿಭಟನಾ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಸಾಮಾನ್ಯ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೂ, ವಿಕಲಚೇತನರ ಶಿಕ್ಷಣ ನೀಡುವ ಶಿಕ್ಷಕರ ಸ್ಥಿತಿಗತಿಗೂ ತುಂಬಾ ವ್ಯತ್ಯಾಸವಿದ್ದು, ವೇತನ ಇನ್ನಿತರ ಸೇವಾ ಸೌಲಭ್ಯಗಳು ಹಾಗೂ ಸೇವಾ ಭದ್ರತೆ ಇಲ್ಲದೇ ಕಾರ್ಯನಿರ್ವಹಿಸುತ್ತ ಹಲವರು ಸೇವಾ ನಿವೃತ್ತಿಯ ಅಂಚಿನಲ್ಲಿದ್ದಾರೆ. ಸರ್ಕಾರ 2008ರಲ್ಲಿ 1982ನೇ ಅಧಿನಿಯಮವನ್ನು ಬದಲಿಸಿ, ಶಿಶುಕೇಂದ್ರಿತ ಅನುದಾನ ಪದ್ಧತಿ ಜಾರಿಮಾಡಿದ್ದು, ಈ ಪದ್ಧತಿ ವಿಶೇಷ ವಿಕಲಚೇತನ ಶಾಲಾ ಶಿಕ್ಷಕರಿಗೆ ಮಾರಕವಾಗಿ ಪರಿಣಮಿಸಿದೆ. ಇದರಿಂದಾಗಿ ವಿಕಲಚೇತನ ಮಕ್ಕಳಿಗೆ ಶಿಕ್ಷಣ ಇಂದು ಸಮರ್ಪಕವಾಗಿ ಜಾರಿಯಾಗದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣ ಹಕ್ಕು ಮತ್ತು ಶಿಕ್ಷಣ ಕಡ್ಡಾಯ ಎಂಬುದು ಕೇವಲ ಘೋಷಣೆಯಾಗದೇ ಕಾರ್ಯರೂಪಕ್ಕೆ ಬರುವಲ್ಲಿ ಸರ್ಕಾರ ಪ್ರಾಮಾಣಿಕ ಚಿಂತನೆ ನಡೆಸಬೇಕಿದೆ. ಈ ಕುರಿತು ಈಗಾಗಲೇ ಸದನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು, ಈ ಶಿಕ್ಷಕರ ನ್ಯಾಯಯುತ ಬೇಡಿಕೆಗಾಗಿ ಈ ವಿಷಯವನ್ನು ಮತ್ತೆ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ತಳಬಾಳ ಮಾತನಾಡಿ, ವಿಕಲಚೇತನ ಮಕ್ಕಳ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 4-5 ವರ್ಷಗಳಿಂದ ರಾಜ್ಯಾದ್ಯಂತ ಸರ್ಕಾರದ ಗಮನ ಸೆಳೆಯುತ್ತಿದ್ದರೂ ಸರ್ಕಾರ ಮಾನವೀಯ ತಳಹದಿಯಲ್ಲಿ ನಮ್ಮ ಸಮಸ್ಯೆಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ತೋರಿದೆ. ಜನಪರ ಸೇವಾ ಕಾರ್ಯದಲ್ಲಿ ತೊಡಗುತ್ತಿರುವ ವಿಶೇಷ ಶಾಲೆಗಳ ಸಿಬ್ಬಂದಿ ಸರ್ಕಾರದ ನಿರಾಸಕ್ತಿಯಿಂದ ಸಂದಿಗ್ಧ ಸ್ಥಿತಿಯಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಪ್ರಸಂಗ ಎದುರಾಗಿದೆ.  ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರ ರಾಜ್ಯಗಳಲ್ಲಿ ವಿಕಲಚೇತನ ಶಿಕ್ಷಣ ಹಾಗೂ ಪುನರ್ವಸತಿಗೆ, ವಿಶೇಷ ಶಾಲೆಗಳಿಗೆ ಮತ್ತು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಪೂರ್ಣ ಪ್ರಮಾಣದ ವೇತನ ನೀಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಮಾತ್ರ ಈ ಕುರಿತು ನಿರಾಸಕ್ತಿ ತೋರುತ್ತಿರುವುದು ವಿಷಾದನೀಯ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಶಿಕ್ಷಕರಿಗೆ ನೀಡುವ ವೇತನ ಸೇವಾ ಭದ್ರತೆಯೊಂದಿಗೆ ಮೂಲವೇತನ, ತುಟ್ಟಿಭತ್ಯೆ ಹಾಗೂ ಇತರ ಭತ್ಯೆಗಳನ್ನು ನೀಡುವ ಮೂಲಕ ವೇತನ ನಿಗದಿಗೊಳಿಸಿ ನಮ್ಮ ನೋವಿಗೆ ಸ್ಪಂದಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದರು. ನಗರದ ವೀರೇಶ್ವರ ಪುಣ್ಯಾಶ್ರಮದಿಂದ ಪ್ರಾರಂಭವಾದ ಮೆರವಣಿಗೆಯು ಭೂಮರಡ್ಡಿ ವೃತ್ತ, ಕೆ.ಎಚ್. ಪಾಟೀಲ ವೃತ್ತ, ಹಳೆ ಬಸ್ ನಿಲ್ದಾಣ, ಹುಯಿಲಗೋಳ ನಾರಾಯಣರಾವ ವೃತ್ತ, ಮಹೇಂದ್ರಕರ್ ವೃತ್ತದ ಮೂಲಕ ಗಾಂಧಿ ವೃತ್ತಕ್ಕೆ ಆಗಮಿಸಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ, ನಂತರ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಪಿಪಿಜಿ ಅಂಧರ ವಸತಿ ಶಾಲೆ ಗದಗ, ಅನ್ನದಾನೀಶ್ವರ ಕಿವುಡ-ಮೂಗರ ಶಾಲೆ ನರೇಗಲ್ಲ, ಲಯನ್ಸ್ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಗಂಗಾವತಿ, ಬಾಪೂಜಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ಗಜೇಂದ್ರಗಡ, ಕಿವುಡ ಮಕ್ಕಳ ವಸತಿ ಪಾಠಶಾಲೆ ಧಾರವಾಡದ ಸಿಬ್ಬಂದಿ ಹಾಗೂ ಸೋಮಣ್ಣ ಹರ್ಲಾಪುರ, ಎಸ್.ಕೆ.ಅಬ್ಬಿಗೇರಿ, ಎಂ.ಎಂ. ಶಿರೋಳಮಠ, ಕೆ.ವಿ. ಮುದ್ಲಾಪುರ, ಬಿ.ಎಸ್. ಗಾಣಿಗೇರ, ಆರ್.ಕೆ. ಬಾಗವಾನ, ಕೆ.ಬಿ. ಹೂಗಾರ, ಎ.ಕೆ. ಕಡೇತೋಟದ, ಡಿ.ಜಿ. ಕುಲಕರ್ಣಿ, ಸೋಮನಗೌಡ ದ್ಯಾವಣ್ಣವರ, ಎ.ಸಿ. ಅರಮನಿ, ಮಲ್ಲಪ್ಪ ಹಕ್ಕಿ, ಆರ್.ಕೆ. ನಂದಿಕೋಲಮಠ, ರಾಜೇಶ್ವರಿ ಲಕ್ಷ್ಮೇಶ್ವರಮಠ, ಶೋಭಾ ಭಜಂತ್ರಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.