ಸಮರ್ಪಕ ಪಡಿತರ ವ್ಯವಸ್ಥೆ ಕಲ್ಪಿಸಿ: ಎಚ್ಕೆ
ಗದಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯು ಅರ್ಹ ಬಡವರಿಗೆ ತಲುಪುವ ನಿಟ್ಟಿನಲ್ಲಿ ಆಹಾರ ಇಲಾಖೆ ಹಾಗೂ ಜಿಲ್ಲಾಡಳಿತ ಸಮರ್ಪಕ ಪಡಿತರ ವ್ಯವಸ್ಥೆ ಕಲ್ಪಿಸುವತ್ತ ಗಮನ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶನಿವಾರ ಗದಗದ ಜಿಲ್ಲಾಡಳಿತ ಭವನದಲ್ಲಿ ಜಿಪಂ ಸಭಾಭವನದಲ್ಲಿ ಆಯೋಜಿಸಿದ್ದ ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಪಡಿತರ ಚೀಟಿಗಳ ಕುರಿತು ಮಾಹಿತಿ ನೀಡಿದ ಆಹಾರ ಇಲಾಖೆ ಅಧಿಕಾರಿ ಶಶಿಧರ ಕುರೇರ, ಜಿಲ್ಲೆಯಲ್ಲಿ 2.38 ಲಕ್ಷ ಪಡಿತರ ಕಾರ್ಡ್ಗಳಿದ್ದು, 36396 ಹೊಸ ಪಡಿತರ ಚೀಟಿಗಳಿಗಾಗಿ ಆನ್ಲೈನ್ ಮೂಲಕ ಅರ್ಜಿ ಬಂದಿವೆ ಎಂದು ಮಾಹಿತಿ ನೀಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಚಿವ ಪಾಟೀಲ, ನಮಗೆ ಅದೆಲ್ಲಾ ಬೇಡಾ.. ಈಗಿರುವ ಕಾರ್ಡ್ಗಳೆಷ್ಟು? ಅವರಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಅರ್ಹರಿಗೆ ಆಹಾರ ಧಾನ್ಯ ವಿತರಿಸುವ ಕ್ರಮ ತೆಗೆದುಕೊಳ್ಳಿ ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ನೂತನ ಪಡಿತರ ಅರ್ಜಿಗಳ ವಿಷಯವಾಗಿ ನಾವು ಗ್ರಾಮೀಣ ಪ್ರದೇಶಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ನಗರ ಪ್ರದೇಶದಲ್ಲಿ ಖಾಸಗಿಯವರಿಗೆ ನೀಡಿದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಖಾಸಗಿಯವರಿಗೆ ನೀಡಿ, ಬೇಗನೇ ಈ ಕೆಲಸ ಮುಗಿಸುವಂತೆ ಸೂಚನೆ ನೀಡಿದರು.
ಇದಕ್ಕೆ ಉತ್ತರಿಸಿದ ಸಚಿವ ಎಚ್.ಕೆ. ಪಾಟೀಲ, ಖಾಸಗಿಯವರಿಗೆ ನೀಡಿದರೆ ಆಯಾ ಪಡಿತರ ಚೀಟಿದಾರರ ಸಮಗ್ರ ಮಾಹಿತಿ ಗ್ರಾಪಂಗೆ ಲಭ್ಯವಾಗುವುದಿಲ್ಲ. ಅದಕ್ಕಾಗಿ ಪ್ರತಿಯೊಂದು ಗ್ರಾಪಂಗಳಲ್ಲಿಯೂ ಈ ಕುರಿತು ದಾಖಲೆ ಸಂಗ್ರಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ವಿಪ ಸದಸ್ಯ ಬಸವರಾಜ ಹೊರಟ್ಟಿ ಜಿಲ್ಲೆಯಲ್ಲಿ ಒಟ್ಟು 2.50 ಲಕ್ಷ ಕುಟುಂಬಗಳಿವೆ. ಈಗಾಗಲೇ 2.38 ಲಕ್ಷ ಕಾರ್ಡ್ ವಿತರಣೆ ಮಾಡಿದೆ. ಇನ್ನು 36 ಸಾವಿರ ಅರ್ಜಿಗಳು ಬಂದಿವೆ ಎಂದಾದರೆ ಇದರಲ್ಲಿ ಸಾಕಷ್ಟು ಬೋಗಸ್ ಕಾರ್ಡ್ಗಳಿವೆ. ಕೂಡಲೇ ಅವುಗಳನ್ನು ಪತ್ತೆ ಮಾಡಿ, ಅನರ್ಹಗೊಳಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಿ, ಇಲ್ಲವಾದಲ್ಲಿ ಅರ್ಹರಿಗೆ ಸಿಗಬೇಕಾದ ಯೋಜನೆ ಇನ್ನಾದರೋ ಪಾಲಾಗುತ್ತದೆ ಎಂದರು.
ಇದಕ್ಕೆ ಸಹಮತ ಸೂಚಿಸಿದ ಸಚಿವ ಪಾಟೀಲ ಈ ಬಗ್ಗೆ ಕೂಡಲೇ ಸಭೆ ನಡೆಸಿ ತೀರ್ಮಾನಿಸಲಾಗುವುದೆಂದರು.
ಈ ವೇಳೆ ರೋಣ ತಾಲೂಕಿನ ಜಿಗಳೂರ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಬೃಹತ್ ಕೆರೆಯಲ್ಲಿ ರೋಣ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಅವಕಾಶವಿಲ್ಲ ಎನ್ನುವ ಅಧಿಕಾರಿಗಳ ಹೇಳಿಕೆಗೆ ಶಾಸಕ ಜಿ.ಎಸ್. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವಿಷಯದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆಯಾಗಿ, ರೋಣವನ್ನು ಅದರಲ್ಲಿ ಸೇರ್ಪಡೆ ಮಾಡಬೇಕು. ಅದಕ್ಕೆ ಬೇಕಾಗುವ ಹೆಚ್ಚುವರಿ ಅನುದಾನ ಮಂಜೂರು ಮಾಡಿಸುವ ನಿಟ್ಟಿನಲ್ಲಿ ಸಿಎಂ ಜತೆ ಚರ್ಚಿಸುವುದಾಗಿ ತಿಳಿಸಿದರು.
ಇನ್ನು ಲಕ್ಕುಂಡಿ ಗ್ರಾಮ ಜಿಲ್ಲೆಯ ಅತ್ಯುತ್ತಮ ಪ್ರವಾಸಿ ತಾಣವಾಗಿದ್ದು, ಅದನ್ನು ಮತ್ತಷ್ಟು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದೆಂದರು.
ಸಭೆಯಲ್ಲಿ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ಡಿಸಿ ಎಸ್.ಟಿ. ಅಂಜನ್ಕುಮಾರ, ಜಿಪಂ ಸಿಇಓ ವೀರಣ್ಣ ತುರಮರಿ, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಜಿಪಂ ಅಧ್ಯಕ್ಷ ಎಂ.ಎಸ್.ಪಾಟೀಲ, ಉಪಾಧ್ಯಕ್ಷ ರಮೇಶ ಮುಂದಿನಮನಿ ಮತ್ತಿತರರಿದ್ದರು.
ಬೇಕಾದ್ರ ಬರ್ರೀ...ನಿಮ್ ಹೆರ್ಸಲ್ಲು ಬಿಪಿಎಲ್ ಸಿಗ್ತಾವ್..
ಅಲ್ರೀ... ಗೌಡ್ರ.. ಬಿಪಿಎಲ್ ಕಾರ್ಡ್ ಕೊಡಾಕಂತಾ ಎಲ್ಲಾ ಊರಾಗೂ ಒಂದ್ ತಂಡಾನ ಐತ್ರೀ...ಬರ್ರೀ ಬೇಕಾದ್ರ ನಿಮ್ ಹೆರ್ಸಲ್ಲು ಬಿಪಿಎಲ್ ಮಾಡಿಕೊಡೌವ್ರ ಅದಾರ..ಅದಕ್ ಮೊದ್ಲ್ ಬೊಗಸ್ ಕಾರ್ಡ್ ತೆಗದ್ ಹಾಕ್ರೀ..ಇಲ್ಲಾಂದ್ರ..ನೀವ್ ಕೊಡು 30 ಕೆಜಿ ಅಕ್ಕಿ ಅವ್ಗ ಹೆಚ್ಚಾಕ್ಕಾವು.. ಅದಕ್ ಅದ ರೇಷನ್ ಅಂಗಡಿಗೆ ಅವಾಂ 12 ಮಾರಾತಾನ..ಅಂಗ್ಡಿಯ್ಯಾವ 18 ಮಾರವಾಡಿಗೆ ಮಾರತಾನ, ಮತ್ ಅದ ಅಕ್ಕಿನ್ ನಿಮ್ಮ ಸರ್ಕಾರ ಖರೀದಿ ಮಾಡತ್ ಇದನ್ ತಡೀರಿ....ಎಂದು ವಿಪ ಸದಸ್ಯ ಬಸವರಾಜ ಹೊರಟ್ಟಿ, ಸಭೆಯಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲಿಯೇ ಸಚಿವ ಎಚ್.ಕೆ. ಪಾಟೀಲರಿಗೆ ಸೂಚನೆ ನೀಡಿದ್ದು ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

