ಗದಗ

ಹುತಾತ್ಮ ರೈತರ ಜಿಲ್ಲೆಯಲ್ಲಿ ರೈತ ಸಂಘಕ್ಕಿಲ್ಲ ನೆಲೆ

Published On :

ಕನ್ನಡಪ್ರಭ ವಾರ್ತೆ, ಗದಗ, ಜು. 20
ಜುಲೈ 21 ರಾಜ್ಯದ ರೈತರ ಪಾಲಿಗೆ ಮರೆಯಲಾಗದ ದಿನ.
ನರಗುಂದ, ನವಲಗುಂದ ತಾಲೂಕಿನಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿ ರೈತರ ಮೇಲೆ ನಡೆದ ಗೋಲಿಬಾರ್ನಲ್ಲಿ ರೈತರು ಮೃತಪಟ್ಟರು. ಈ ಘಟನೆಯ ನಂತರವೇ (80ರ ದಶಕದಲ್ಲಿ) ರಾಜ್ಯದಲ್ಲಿ ರೈತ ಚಳವಳಿ ಉದಯಕ್ಕೆ ನಾಂದಿಯಾಯಿತು.
ರೈತ ಚಳವಳಿಗೆ ನಾಂದಿಯಾದ ಗದಗ ಜಿಲ್ಲೆಯ ರೈತ ಸಂಘಕ್ಕೆ ಇಲ್ಲಿಯವರೆಗೂ ಒಂದು ಜಿಲ್ಲಾ ಕಚೇರಿ ಇಲ್ಲ ಎಂದರೆ ಆಶ್ಚರ್ಯವಾಗುತ್ತದೆ. ಆದರೂ ನಂಬಲೇಬೇಕು.
ಈ ರೀತಿ ರಾಜ್ಯದಲ್ಲಿಯೇ ರೈತ ಚಳವಳಿಗೆ ದಾರಿಯಾದ ಗದಗ ಜಿಲ್ಲೆಯ ರೈತರಿಗೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದರೆ ಕುಳಿತುಕೊಳ್ಳಲು ಜಿಲ್ಲಾ ಕಚೇರಿಯೇ ಇಲ್ಲ. ಈ ಬಗ್ಗೆ ಹಾಲಿ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರಿಗೆ ಹಲವಾರು ಬಾರಿ ಮನವಿ ಮಾಡಿದರೂ ಈ ಬಗ್ಗೆ ಕಿಂಚಿತ್ತು ಅವರು ಕಾಳಜಿ ವಹಿಸುತ್ತಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ರೈತರಿಗೆ, ರೈತಪರ ಹೋರಾಟಗಾರರಿಗೆ ಸಾಕಷ್ಟು ತೊಂದರೆಯಾಗಿದೆ. ಇನ್ನು ರೈತ ಸಂಘದ ರಾಜ್ಯ ಕಾರ್ಯಕಾರಿಣಿ ಮಂಡಳಿಯ ಕಾನೂನಿನ ಪ್ರಕಾರ ಪ್ರತಿ ತಿಂಗಳು ಸಭೆ ಕರೆದು, ರೈತರ ಸಮಸ್ಯೆಗಳು ಹಾಗೂ ಮುಂದಿನ ಹೋರಾಟದ ಕುರಿತು ಚಿಂತನೆ ನಡೆಸಬೇಕು. ಆದರೆ, ನಾಲ್ಕೈದು ವರ್ಷಗಳಿಂದ ಅದ್ಯಾವುದು ಜಿಲ್ಲೆಯಲ್ಲಿ ನಡೆಯುತ್ತಿಲ್ಲವೆಂದು ಕೆಲ ರೈತರು ದೂರುತ್ತಿದ್ದಾರೆ.
ಅರ್ಥಪೂರ್ಣವಾಗಿ ಆಚರಿಸುತ್ತಿಲ್ಲ: ಬಂಡಾಯಕ್ಕೆ ಮತ್ತೊಂದು ಹೆಸರೇ ನರಗುಂದ. ಅಂದಿನ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿ, ಪೊಲೀಸರ ಗುಂಡಿಗೆ ಎದೆಯೊಡ್ಡಿದ ವೀರ ರೈತರ ನೆನಪಿಗಾಗಿ ಪ್ರತಿ ವರ್ಷ ಜು. 21 ರಂದು ರೈತ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆದರೆ, ಗದಗ ಜಿಲ್ಲೆಯ ರೈತ ಸಂಘಟನೆಯ ಕೆಲ ಪದಾಧಿಕಾರಿಗಳು ಎಲ್ಲ ರೈತರೊಂದಿಗೆ ಸಮನ್ವಯತೆ ಸಾಧಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದು, ಈ ಕಾರ್ಯಕ್ರಮ ಜಿಲ್ಲೆಯ ಮಟ್ಟಿಗೆ ಕೆಲವೇ ರೈತ ಮುಖಂಡರ ನಿರ್ಧಾರಕ್ಕೆ ಸೀಮಿತವಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ 30 ಜಿಲ್ಲೆಗಳಿಂದ ಆಗಮಿಸುವ ರೈತ ಹೋರಾಟಗಾರರು ಪ್ರತಿ ವರ್ಷವೂ ಗದಗ ಜಿಲ್ಲಾ ಸಂಘಟನೆಯ ಪುನಾರಚನೆ ಹಾಗೂ ಸುಸಜ್ಜಿತವಾದ ಜಿಲ್ಲಾ ಕಚೇರಿ ಹಾಗೂ ರೈತರ ಶ್ರೇಯೋಭಿವೃದ್ಧಿಗೆ ಬೇಕಾಗುವ ಕಾರ್ಯಕ್ರಮ ರೂಪಿಸುತ್ತಿಲ್ಲ. ಈ ಬಗ್ಗೆ ಯೋಚಿಸಲು ಹೇಳುತ್ತಲೇ ಬಂದಿದ್ದರೂ ರಾಜ್ಯ ಸಮಿತಿಯವರು ಮಾತ್ರ ಗಮನ ಹರಿಸುತ್ತಿಲ್ಲ ಎನ್ನುವ ಆರೋಪ ರೈತರದ್ದಾಗಿದೆ.

ಮಾಲಾರ್ಪಣೆಗಾಗಿ ಸಮಯ ನಿಗದಿ
ನರಗುಂದ: 
ಜು. 21ರಂದು ರೈತ ಹುತಾತ್ಮ ದಿನಾಚರಣೆಯನ್ನು ನರಗುಂದದಲ್ಲಿ ಹಮ್ಮಿಕೊಂಡಿದ್ದು, ಅಂದು ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ಬರುವ ವಿವಿಧ ಪಕ್ಷದ, ರೈತ ಮುಖಂಡರಿಗೆ ಸಮಯ ನಿಗದಿಪಡಿಸಲಾಗಿದೆ. ಜು. 21 ರಂದು ಬೆಳಗ್ಗೆ 9 ಗಂಟೆಯಿಂದ 9.30ರ ವರೆಗೆ ಜೆಡಿಎಸ್ ಪಕ್ಷ, 9.30 ರಿಂದ 10 ಗಂಟೆಯವರೆಗೆ ಬಸವ ಗ್ರಾಮೀಣ ಪ್ರತಿಷ್ಠಾನ ಸಂಸ್ಥೆಯವರಿಗೆ, 10 ಗಂಟೆಯಿಂದ 11 ರವರೆಗೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದವರಿಗೆ, 11 ಗಂಟೆಯಿಂದ 12 ಗಂಟೆಯವರೆಗೆ ಕಳಸಾ ಬಂಡೂರಿ ಹೋರಾಟ ಸಮಿತಿ, ಮತ್ತು ರೈತ ಸಂಘಗಳಿಗೆ 12 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಬಿಜೆಪಿಗೆ, 1 ರಿಂದ 2 ಗಂಟೆಯ ವರಗೆ ಕಾಂಗ್ರೆಸ್ ಪಕ್ಷದವರಿಗೆ ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ಸಮಯವನ್ನು ನಿಗದಿಪಡಿಸಲಾಗಿದ್ದು, ಕಾರಣ ಎಲ್ಲ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ತಮ್ಮ ನಿಗದಿತ ಸಮಯದಲ್ಲಿ ಬಂದು ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ತಹಸೀಲ್ದಾರ್ ವೆಂಕನಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ರೈತರ ನೂರಾರು ಸಮಸ್ಯೆಗಳು ಜೀವಂತವಾಗಿವೆ. ಅದರಲ್ಲಿಯೂ ಜಿಂಕೆ ಹಾವಳಿ, ಬೆಳೆವಿಮೆ, ಗೊಬ್ಬರ, ಬೀಜ, ನೈಸರ್ಗಿಕ ವಿಕೋಪಕ್ಕೆ ತುತ್ತಾದ ರೈತರಿಗೆ ಸೂಕ್ತ ಪರಿಹಾರ ಹೀಗೆ ಹಲವಾರು ಯೋಜನೆಗಳು ರೈತರನ್ನು ತಲುಪುವಲ್ಲಿ ಸಂಪೂರ್ಣ ವಿಫಲವಾಗುತ್ತಿವೆ. ಇದಕ್ಕೆಲ್ಲ ಮುಖ್ಯ ಕಾರಣ ಜಿಲ್ಲಾ ರೈತ ಸಂಘದಲ್ಲಿ ಸಮನ್ವಯದ ಕೊರತೆ ಕಂಡು ಬರುತ್ತಿರುವುದು. ಅದಕ್ಕಾಗಿ ಸಂಘದ ಹಿರಿಯರು ಕೂಡಲೇ ಇದನ್ನು ಪರಿಶೀಲಿಸಿ, ನೂತನ ಪದಾಧಿಕಾರಿಗಳನ್ನು ನೇಮಿಸಿ ಸಂಘಕ್ಕೆ ಹೊಸ ಚೈತನ್ಯ ನೀಡಬೇಕು.
- ಗಂಗಾಧರ ಕೊಟಗಿ, ರೈತ ಮುಖಂಡ, ನರೇಗಲ್ಲ
ಜಿಲ್ಲಾ ಕಚೇರಿ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಸೂಕ್ತ ಸ್ಥಳ ನೀಡುವಂತೆ ಈಗಾಗಲೇ ಗದಗ ಎಪಿಎಂಸಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅವರು ಪರಿಶೀಲಿಸಿ ನೀಡುವುದಾಗಿ ತಿಳಿಸಿದ್ದಾರೆ. ಸಂಘದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲ ಜಿಲ್ಲೆಯ ರೈತರ ಸಮಸ್ಯೆಗೆ ಒಗ್ಗಟ್ಟಿನಿಂದ ಹೋರಾಡುತ್ತೇವೆ.
- ಕೆ.ಜಿ. ಶಾಂತಸ್ವಾಮಿಮಠ
ರೈತ ಸಂಘದ ರಾಜ್ಯ ಉಪಾಧ್ಯಕ್ಷ

- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.