ಬದ್ಧತೆ ಇಲ್ಲದ ಸರ್ಕಾರದಿಂದ ರೈತರ ಏಳ್ಗೆ ಅಸಾಧ್ಯ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 21
ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಕೊಡಲು ಯಾವ ಸರ್ಕಾರದಿಂದಲೂ ಸಾಧ್ಯವಾಗಿಲ್ಲ. ಆರ್ಥಿಕ ನೀತಿ ಬದ್ಧತೆ ಇಲ್ಲದ ಸರ್ಕಾರಗಳಿಂದ ರೈತರ ಏಳ್ಗೆ ಅಸಾಧ್ಯ ಎಂದು ರಾಜ್ಯ ರೈತ ಸಂಘದ ಮುಖಂಡ ಹಾಗೂ ಮೇಲುಕೋಟೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಹೇಳಿದರು.
ಅವರು ಭಾನುವಾರ ಸ್ಥಳೀಯ ಅನ್ನದಾನೀಶ್ವರ ಮಠದ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ಜರುಗಿದ ನರಗುಂದ-ನವಲಗುಂದ 33ನೇ ರೈತ ಹುತಾತ್ಮ ದಿನಾಚರಣೆ ಹಾಗೂ ರೈತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ 6 ದಶಕಗಳಿಂದ ನೆನೆಗುದಿಗೆ ಬಿದ್ದ ಕೃಷ್ಣಾ, ಕಾವೇರಿ, ಕಳಸಾ ಎಡದಂಡೆ-ಬಲದಂಡೆ ಯೋಜನೆಗಳು ಸಮರ್ಪಕವಾಗಿ ರೈತರಿಗೆ ಅನುಕೂಲ ಮಾಡಿಕೊಡದೇ ಇರುವುದು ನಾಚಿಕೆಗೇಡಿನ ವಿಷಯ. ಕೇವಲ ಸರ್ಕಾರಗಳು ಆಹಾರ ಭದ್ರತೆ ಬಗ್ಗೆ ಭರವಸೆ ನೀಡುತ್ತಿವೆ. ಆಹಾರವನ್ನೇನು ಕಂಪ್ಯೂಟರ್‌ನಲ್ಲಿ ಬೆಳೆಯುತ್ತಾರೆಯೇ? ನಿತ್ಯ ಕಷ್ಟಪಟ್ಟು ಬೆಳೆಯುವ ರೈತನನ್ನು ಇಂದು ಕಡೆಗಣಿಸಿರುವ ಸರ್ಕಾರಗಳ ಕ್ರಮ ಖಂಡನೀಯ.
ರೈತರಿಗೆ ಬೇಕಾಗುವ ಪೂರಕ ಸೌಲಭ್ಯ ಹಾಗೂ ರೈತರ ಬೆಳೆಗೆ ಬೆಂಬಲ ಬೆಲೆ ನೀಡುವುದು ಅತ್ಯವಶ್ಯಕವಾಗಿದೆ ಎಂದರು. ಮುಂಬರುವ ರೈತರ ಹುತಾತ್ಮ ದಿನಾಚರಣೆಗೆ ಕನಿಷ್ಠ 25 ಸಾವಿರ ರೈತರು ಸೇರುವಂತಾಗಬೇಕು. ರೈತರ ಶಕ್ತಿಯಿಂದ ಸಾಧನೆ ಸಾಧ್ಯ ಎಂದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಬಿ. ಗಂಗಾಧರ ಮಾತನಾಡಿ, ರೈತರ ಜಮೀನುಗಳನ್ನು ವಿದೇಶಿ ಕಂಪನಿಗಳಿಗೆ ಕೊಡುವ ಹುನ್ನಾರ ವ್ಯವಸ್ಥಿತವಾಗಿ ನಡೆದಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ರೈತರು ಜಾಗೃತರಾಗಿರಬೇಕು. ಸಿಎಂ ಸಿದ್ದರಾಮಯ್ಯ ರೈತ ವಿರೋಧಿ ನೀತಿ ಅನುಸರಿಸಿದರೆ ರೈತರು ಸುಮ್ಮನಿರುವುದಿಲ್ಲ ಎಂದರು. ರೈತ ಮುಖಂಡ ಅಶೋಕ ಮದ್ದೂರ, ಸುರೇಶಬಾಬು ಪಾಟೀಲ, ಬಿ.ಸಿ. ಪಾಟೀಲ, ನಂಜುಂಡೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಾಪುರ ನಾಗೇಂದ್ರ, ಬಲ್ಗೂರು ರವಿಕುಮಾರ, ಚಂದ್ರಕಾಂತ ಉಳ್ಳಾಗಡ್ಡಿ, ಸೋಮುದ್ದ ರಂಗಸ್ವಾಮಿ ಸೇರಿದಂತೆ ಅನೇಕ ರಾಜ್ಯ ಮುಖಂಡರು ಮಾತನಾಡಿದರು. ವಿಠ್ಠಲ ಗಣಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಹಲವಾರು ಸಮಸ್ಯೆಗಳ ಮನವಿಯನ್ನು ಶಾಸಕ ಪುಟ್ಟಣ್ಣಯ್ಯಗೆ ಸಲ್ಲಿಸಿದರು.
ಯಾದಗಿರಿ ಜಿಲ್ಲಾಧ್ಯಕ್ಷ ಸಂಗಣ್ಣ ಅಂಗಡಿ ಸಸಿಗೆ ನೀರು ಹಾಕುವ ಮೂಲಕ ರೈತ ಸಮಾವೇಶವನ್ನು ಉದ್ಘಾಟಿಸಿದರು. ಸಾನ್ನಿಧ್ಯವಹಿಸಿದ್ದ ಡಾ. ಅನ್ನದಾನೀಶ್ವರ ಸ್ವಾಮಿಗಳು ಮಾತನಾಡಿದರು. ಸಮಾವೇಶದಲ್ಲಿ ಹನುಮಂತಪ್ಪ ಕುರಿ, ಎಂ.ಬಿ. ಸಂಕನಗೌಡರ, ಚಂದ್ರಹಾಸ ಉಳ್ಳಾಗಡ್ಡಿ, ಬೀರಪ್ಪ ಮಲ್ಲಾರ್ಜಿ, ನಂದಿನಿ ಜಯರಾಮ, ಕೃಷ್ಣಪ್ಪ ಅಶ್ವಥ, ಮಂಜಪ್ಪ ಜೋಳದ, ನಿಂಗಪ್ಪ ಬಂಡಾರಿ, ಸೋಮಪ್ಪ ಹೈತಾಪುರ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಜಿಲ್ಲಾ ರೈತ ಸಂಘದ ಅಧ್ಯಕ್ಷರು ಇತರರು ಪಾಲ್ಗೊಂಡಿದ್ದರು. ದೇವಪ್ಪ ಇಟಗಿ ರೈತ ಗೀತೆಯನ್ನು ಹಾಡಿದರು. ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ ಸ್ವಾಗತಿಸಿದರು. ಕೆ.ಜಿ. ಶಾಂಸ್ವಾಮಿಮಠ ನಿರೂಪಿಸಿದರು.
ಗಮನ ಸೆಳೆದ ಪುಟ್ಟ ರೈತನ ಭಾಷಣ
ಸಮಾವೇಶದ ಮಧ್ಯೆ ಕೊಪ್ಪಳ ಜಿಲ್ಲೆಯ ಸಿಂದೋಗಿಯ ಪುಟ್ಟ ರೈತ ಕಳಕಪ್ಪ ಹೂಗಾರ ಅವರ ಭಾಷಣವು ಜನರನ್ನು ಆಕರ್ಷಿಸುವಂತೆ ಮಾಡಿತು. ಜತೆಗೆ ಸಂಘ ಕಟ್ಟಬೇಕು. ರೈತರ ಹಿತ ಕಾಯುವ ಸಂಘ ಕಟ್ಟಬೇಕು. ಭ್ರಷ್ಟತೆ ಓಡಿಸಲು ಸಂಘ ಕಟ್ಟಬೇಕು ಎನ್ನುವ ಗೀತೆ ಸೇರಿದ ರೈತರನ್ನು ಹುರಿದುಂಬಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

