ಗದಗ

ಚುರುಕಾದ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

Published On :

ಲಕ್ಷ್ಮೇಶ್ವರ: ಮುಂಗಾರು ಮಳೆಯು ಚುರುಕಾದ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ಹೋಬಳಿಯಲ್ಲಿ ಕೃಷಿ ಚಟುವಟಿಕೆ ಶುರುವಾಗಿದೆ.
ಪುಷ್ಯ ಮಳೆಯು ಈ ಬಾರಿ ಮುಂಗಾರು ಬೆಳೆಗಳಿಗೆ ಜೀವ ತುಂಬುವ ಕಾರ್ಯ ಮಾಡಿದೆ. ಲಕ್ಷ್ಮೇಶ್ವರ ಹೋಬಳಿಯ ರಾಮಗೇರಿ, ಬಸಾಪುರ, ಗೊಜನೂರು, ಶಿಗ್ಲಿ, ಮಾಗಡಿ, ಬಟ್ಟೂರು, ಯಳವತ್ತಿ, ಮಾಡಳ್ಳಿ ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಮುಂಗಾರು ಹಂಗಾಮಿನ ಬೆಳೆಗಳಾದ ಹೆಸರು ಈಗ ಕಾಯಿ ಕಟ್ಟುವ ಹಂತದಲ್ಲಿದ್ದು, ಮಳೆಯ ಅವಶ್ಯಕತೆ ಹೆಚ್ಚಾಗಿತ್ತು. ಅಲ್ಲದೆ ಶೇಂಗಾ, ಈರುಳ್ಳಿ, ಬಿಟಿ ಹತ್ತಿ, ಗೋವಿನ ಜೋಳ, ತೊಗರಿ, ಮೆಣಸಿನಕಾಯಿ ಗಿಡ ನಾಟಿ ಮಾಡುವುದು ಇತ್ಯಾದಿ ಕೃಷಿ ಕಾರ್ಯಕ್ಕೆ ಈಗ ಆಗುತ್ತಿರುವ ಮಳೆ ಜೀವ ಕಳೆಯನ್ನು ನೀಡಿದೆ.
ಕೈಹಿಡಿದ ಪುಷ್ಯ: ಈ ಹಿಂದೆ ಸುರಿದ ಆರಂಭಿಕ ಒಂದೆರೆಡು ಮಳೆಗಳನ್ನು ಬಿಟ್ಟರೆ ಮುಂಗಾರು ಹಂಗಾಮಿನಲ್ಲಿ ಯಾವುದೇ ದೊಡ್ಡ ಪ್ರಮಾಣದಲ್ಲಿ ಮಳೆ ಆಗದೇ ಹೋಗಿದ್ದವು. ಅಲ್ಲದೆ ಮೃಗಶಿರ ಮಳೆಯು ಕಣ್ಣುಮುಚ್ಚಾಲೆ ಆಡುತ್ತ ರೈತರ ನಿದ್ದೆಗೆಡಿಸಿತ್ತು. ನಂತರದ ಅನುರಾಧ ಹಾಗೂ ಮತ್ತಿತರ ಮಳೆಗಳು ಕೈಕೊಟ್ಟವು. ಆದರೆ, ಈಗ ರಾಜ್ಯದ ಎಲ್ಲೆಡೆ ಸುರಿಯುತ್ತಿರುವ ಪುಷ್ಯ ಮಳೆ ರೈತರಲ್ಲಿ ಸಂತಸ ತಂದಿದೆ.
ಗದಗ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆಯು ಮತ್ತೆ ವಿಫಲತೆಯ ಹಾದಿ ಹಿಡಿದಾಗ ಮಳೆಗಾಗಿ ದೇವರ ಮೊರೆಹೋಗುವುದು, ಕಪ್ಪೆಗಳ, ಕತ್ತೆಗಳ ಮದುವೆ ಮಾಡುವುದು, ಗುರ್ಜಿಯಾಟ ಆಡುವುದು ದೇವರಿಗೆ ಅಭಿಷೇಕ ಮಾಡುವುದು ಪ್ರಾರಂಭವಾಗಿದ್ದವು. ಹೀಗೆ ಮಳೆಗಾಗಿ ನಾನಾ ಪೂಜೆ ಪುನಸ್ಕಾರಗಳು ನಡೆದಿದ್ದವು. ಮಳೆಯ ಕೊರತೆಯಿಂದ ಈಗಾಗಲೆ ಹೆಸರು ಬೆಳೆಗಳಿಗೆ ಸೀರು ಬಾಧೆ, ಬಿಟಿ ಹತ್ತಿ ಗಿಡಗಳಿಗೆ ಎಲೆ ತಿನ್ನುವ ಹುಳುಗಳ ಬಾಧೆ, ಎಲೆ ಕೆಂಪಗಾಗುವ ರೋಗ, ಶೇಂಗಾ ಬೆಳೆಗೆ ಎಲೆ ಮುಟುರು ರೋಗ ಕಾಣಿಸಿಕೊಂಡಿತ್ತು. ಇದು ರೈತರ ನೆಮ್ಮದಿ ಕೆಡಿಸಿತ್ತು.
ಕೆಲವೆಡೆ ಶೇಂಗಾ ಬೆಳೆ ಒಣಗುವು ಹಂತ ತಲುಪಿದ್ದರಿಂದ ರೈತರಲ್ಲಿ ಚಿಂತೆ ಕಾಡುತ್ತಿತ್ತು. ಆದರೆ, ಈಗ ಬೀಳುತ್ತಿರುವ ಮಳೆಗೆ ಕೃಷಿ ಚಟುವಟಿಕೆ ಜೋರಾಗಿ ಸಾಗಿವೆ. ತುಂತುರು ಮಳೆಗೆ ಮೆಣಸಿನಕಾಯಿ ಸಸಿಗಳನ್ನು ನಾಟಿ ಮಾಡಲು ಯೋಗ್ಯ ವಾತಾವರಣ ಕಲ್ಪಿಸಿದ್ದು, ಕಪ್ಪು ಮಣ್ಣಿನ ಭೂಮಿ ಇರುವ ಸಮೀಪದ ರಾಮಗೇರಿ ಬಸಾಪುರ, ಗೊಜನೂರು, ಯಳವತ್ತಿ ಯತ್ತಿನಹಳ್ಳಿ, ಮಾಡಳ್ಳಿ ಮುಂತಾದ ಕಡೆಗಳಲ್ಲಿ ಉತ್ತಮ ಹದಭರಿತ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.   ಲಕ್ಷ್ಮೇಶ್ವರ ಹೋಬಳಿಯಲ್ಲಿ 8050 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಹೆಸರು ಹೂವು ಬಿಡುವ, ಕಾಯಿ ಕಟ್ಟುವ ಹಂತದಲ್ಲಿದೆ. ಇನ್ನೂ ಕೆಲವೆಡೆ ಕಾಯಿಗಳು ಬಲಿತು ಒಣಗುವ ಹಂತ ತಲುಪಿವೆ. ಈಗ ಮಳೆ ಬೀಳುತ್ತಿರುವುದು ರೈತರಲ್ಲಿ ನೆಮ್ಮದಿ ಮೂಡಿಸಿದೆ.

ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.