ಗದಗ

ಮಳೆ ಕೊರತೆ ಮಧ್ಯೆಯೂ ಈರುಳ್ಳಿ ಬಿತ್ತನೆ

Published On :

ಕನ್ನಡಪ್ರಭ ವಾರ್ತೆ, ಗದಗ, ಜು. 29
ಮಳೆ ಕೊರತೆ ಎನ್ನುವುದು ಜಿಲ್ಲೆಯ ರೈತರಿಗೆ 3 ವರ್ಷದಿಂದ ಬೆಂಬಿಡದಂತೆ ಕಾಡುತ್ತಿದೆ. ಪ್ರಸಕ್ತ ಸಾಲಿನಲ್ಲೂ ಅದು ಮುಂದುವರಿದಿದೆ. ಆದಾಗ್ಯೂ ಜಿಲ್ಲೆಯ ರೈತರು ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಈರುಳ್ಳಿ ಬಿತ್ತನೆ ಮಾಡಲು ಮುಂದಾಗುತ್ತಿದ್ದು, ಮತ್ತೊಮ್ಮೆ ನಿಸರ್ಗದ ಮೇಲೆ ಬಂಡವಾಳ ಹೂಡಲು ಧೈರ್ಯ ಮಾಡುತ್ತಿದ್ದಾರೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗುತ್ತಿವೆ. ಆದರೆ, ಗದಗ ಜಿಲ್ಲೆಯಲ್ಲಿ ಮಾತ್ರ ಅದೇಕೋ ಮಳೆ ಮುನಿಸಿಕೊಂಡಿದೆ. ಈಗಾಗಲೇ ಬಿತ್ತನೆ ಮಾಡಿರುವ ಹೆಸರು ಬೆಳೆ ಈಗ ಕಾಯಿ ಕಟ್ಟುವ ಹಂತದಲ್ಲಿದ್ದು, ಸದ್ಯ ಅದಕ್ಕೆ ಉತ್ತಮ ಮಳೆ ಬೇಕು, ಆದರೆ ಕಳೆದ ಒಂದುವರೇ ತಿಂಗಳಿಂದ ಮಳೆಯಾಗದೇ ರೈತರನ್ನು ನಿದ್ದೆಗೆಡಿಸಿದೆ.
ಈರುಳ್ಳಿ ಬಿತ್ತನೆ: ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆ ಎನ್ನುವ ಹಿರಿಮೆಯನ್ನು ಹೊಂದಿರುವ ಗದಗ ಜಿಲ್ಲೆಯ ರೈತರು ಭೂಮಿಯಲ್ಲಿರುವ ಅಲ್ಪ ತೇವಾಂಶ ನಂಬಿಕೊಂಡು ಮತ್ತೆ ಈರುಳ್ಳಿ ಬೀಜ ಬಿತ್ತನೆ ಮಾಡುತ್ತಿದ್ದಾರೆ.
ಜಿಲ್ಲೆಯ ರೋಣ, ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕುಗಳಲ್ಲಿ 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಕಳೆದ ಸಾಲಿನಲ್ಲಿಯೂ ಮಳೆ ಕೊರತೆಯ ನಡುವೆಯೂ 1.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು (ಕೃಷಿ ಇಲಾಖೆಯ ಮಾಹಿತಿ ಆಧಾರದಲ್ಲಿ).
ಮುಂಗಾರು ಪ್ರಾರಂಭದಲ್ಲಿ ಅಬ್ಬರಿಸಿದ ಹಿನ್ನೆಲೆಯಲ್ಲಿ ಈ ಬಾರಿ ಅದಕ್ಕಿಂತ ಹೆಚ್ಚು ಬಿತ್ತನೆಯಾಗುವ ಸಾಧ್ಯತೆ ಇದೆ.
ತೇವಾಂಶ ಕೊರತೆಯಿದ್ದರೂ ಧೈರ್ಯದಿಂದ ಬಿತ್ತನೆ
ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳೇ ತೇವಾಂಶದ ಕೊರತೆಯಿಂದ ಬರುವ ಸಾಧ್ಯತೆ ಕಡಿಮೆ ಇದೆ. ಆದರೆ, ರೈತರು ಮಾತ್ರ ಇದ್ಯಾವುದನ್ನೂ ಲೆಕ್ಕಿಸದೇ ಇರುವ ಅಲ್ಪ ತೇವಾಂಶದಲ್ಲಿಯೇ ಈರುಳ್ಳಿ ಬಿತ್ತನೆ ಮಾಡುತ್ತಿದ್ದು, ಇದಕ್ಕಾಗಿ ಪ್ರತಿ ಎಕರೆಗೆ ರು. 2 ರಿಂದ 3 ಸಾವಿರ ಖರ್ಚು ಮಾಡುತ್ತಿದ್ದಾರೆ.
ಈರುಳ್ಳಿಯನ್ನು ಬಹುತೇಕ ಒಣಬೇಸಾಯ ಆಧರಿಸಿಯೇ ಬಿತ್ತನೆ ಮಾಡುತ್ತಿದ್ದು, ಇದು ರೈತರ ಪಾಲಿಗೆ ಮತ್ತೊಂದು ಚೆಲ್ಲಾಟದ ವಿಷಯವಾಗಿದೆ.
ಇಂದಲ್ಲ ನಾಳೆ ಮಳೆಯಾದೀತು ಎನ್ನುವ ಧೈರ್ಯದಲ್ಲಿ ಬಿತ್ತನೆ ಮಾಡುತ್ತಿದ್ದು, ಮಳೆಯಾಗದೇ ಇದ್ದ ಪಕ್ಷದಲ್ಲಿ ಜಿಲ್ಲೆಯ ರೈತರು ದೊಡ್ಡ ಆರ್ಥಿಕ ಹೊಡೆತವನ್ನು ಅನುಭವಿಸುವಂತಾಗುತ್ತದೆ.

ಮೋಡವಿದೆ ಮಳೆಯಿಲ್ಲ
ಕಳೆದ 1 ತಿಂಗಳಿಂದ ಜಿಲ್ಲಾದ್ಯಂತ ಮೋಡಕವಿದ ವಾತಾವರಣ ಕಂಡುಬರುತ್ತಿದೆ. ಆದರೆ, ಮೋಡವು ಮಳೆಯಾಗಿ ಸುರಿಯದಾಗಿದೆ. ಸೂರ್ಯನ ಮುಖ ದರ್ಶನವಾಗದ ರೀತಿಯಲ್ಲಿ ಮೋಡಗಳು ಆಕಾಶದಲ್ಲಿ ತೇಲಾಡುತ್ತವೆ. ಆದರೆ, ಮಳೆ ಚೆಲ್ಲುತ್ತಿಲ್ಲ. ನಿಲ್ಲಿ ಮೋಡಗಳೇ ನಾಲ್ಕು ಹನಿಗಳನ್ನು ಚೆಲ್ಲಿ ಎಂದು ದೇವರನ್ನು ಬೇರೆ ಬೇರೆ ರೂಪದಲ್ಲಿ ಜಿಲ್ಲೆಯ ರೈತರು ಬೇಡಿಕೊಂಡಿದ್ದರೂ ಮಳೆರಾಯ ಮಾತ್ರ ಇಲ್ಲಿಯವರೆಗೂ ಕಣ್ಣು ತೆರೆದಿಲ್ಲ.

ಮಳೆ ಪ್ರಮಾಣ
ರಾಜ್ಯಾದ್ಯಂತ ಉತ್ತಮವಾಗಿ ಸುರಿದಿರುವ ಮಳೆ ಗದಗ ಜಿಲ್ಲೆಯ ಕಡೆ ಮುನಿಸು ತೋರಿದಂತಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜುಲೈ ಅಂತ್ಯದ ವೇಳೆಗೆ 72 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಇದುವರೆಗೆ ಆಗಿರುವ ಒಟ್ಟು ಮಳೆ 21 ಮಿ.ಮೀ. ಮಾತ್ರ. ಹಾಗಾಗಿ ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಅತಿ ಕಡಿಮೆ ಮಳೆಯಾಗಿದ್ದು ರೈತರನ್ನು ಕಂಗೆಡಿಸಿದೆ. ಇಷ್ಟೊಂದು ಮಳೆ ಕೊರತೆಯ ನಡುವೆಯ ಜಿಲ್ಲೆಯ ರೈತರು ಈರುಳ್ಳಿ ಬಿತ್ತನೆಗೆ ಮುಂದಾಗಿದ್ದಾರೆ.
-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.