ಸ್ವಚ್ಛತೆಗಾಗಿ ತಹಸೀಲ್ದಾರ್ಗೆ ದೂರು
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜು. 29
ಪಪಂ ವ್ಯಾಪ್ತಿಯ ವಾರ್ಡ್ ನಂ.1ರ ಖಾನಾಪುರದಲ್ಲಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ರು. 7.60 ಲಕ್ಷ ವೆಚ್ಚದಲ್ಲಿ ಕೈಗೊಂಡ ಸಿಸಿ ರಸ್ತೆ, ಗಟಾರ ಮತ್ತಿತರ ಕಾಮಗಾರಿಗಳು ಕಳಪೆ ಮಟ್ಟದ್ದಾಗಿದ್ದು, ಈ ಬಗ್ಗೆ ಗಮನಕ್ಕೆ ತಂದರೂ ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಪಂ ಸದಸ್ಯ ನಾಗರಾಜ ಲಕ್ಕುಂಡಿ, ಸುರೇಶ ಅಕ್ಕಿ ಹಾಗೂ ಗ್ರಾಮಸ್ಥರು ತಹಸೀಲ್ದಾರ್ಗೆ ದೂರು ಸಲ್ಲಿಸಿದರು.
ಪಟ್ಟಣದ ಬೇಂದ್ರೆ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಹಸೀಲ್ದಾರ್ಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದು, ರಸ್ತೆಯಲ್ಲಿ ತೆಗ್ಗು ಬಿದ್ದಿವೆ. ಸದ್ಯ ಗ್ರಾಮದ ರಸ್ತೆಗೆ ಮಣ್ಣು ಹಾಕಿದ್ದು, ಕೆಸರಿನಿಂದ ಕೂಡಿ ಮತ್ತಷ್ಟು ಹದಗೆಟ್ಟಿದೆ. ಸಂಚರಿಸಲು ತೀವ್ರ ತೊಂದರೆಯಾಗಿದೆ. ರಸ್ತೆ ಅಕ್ಕಪಕ್ಕ ಗಟಾರ ನಿರ್ಮಿಸಿ ಶಾಶ್ವತ ಕಾಮಗಾರಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪಟ್ಟಣದ ಶಬ್ಬೀರ ನಗರ, ವಿದ್ಯಾನಗರ ಮತ್ತಿತರೆಡೆ ಸ್ವಚ್ಛತೆಯಿಲ್ಲದೆ ಈ ಬಡಾವಣೆಗಳು ಗಬ್ಬು ನಾರುತ್ತಿವೆ. ಇದು ಜನರ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಜತೆಗೆ ಡೆಂಘೀ, ಮಲೇರಿಯಾ ಕಾಯಿಲೆ ಹರಡುವ ಎಲ್ಲ ಸಾಧ್ಯತೆಗಳಿದ್ದು, ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಮರಾಠಾ ಗಲ್ಲಿಯಲ್ಲಿ ಒಣ ಶೌಚಾಲಯವಿದ್ದು, ಅದನ್ನು ನೆಲಸಮಗೊಳಿಸುವಂತೆ ಅನೇಕ ಬಾರಿ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ನಾಗರಾಜ ಲಕ್ಕುಂಡಿ ಆರೋಪಿಸಿದರು.
ವಾರ್ಡ್ ನಂ. 6ರ ನಿವಾಸಿ ಇಮಾಮಹುಸೇನ ಹಮ್ಮಿಗಿ ಅವರ ನಿವೇಶನವನ್ನು ಬೇರೊಬ್ಬರು ಅತಿಕ್ರಮಣ ಮಾಡಿಕೊಂಡು ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಈ ಕುರಿತಂತೆ ಎಲ್ಲ ದಾಖಲೆಗಳನ್ನು ನೀಡಿ ನಿಜವಾದ ಫಲಾನುಭವಿಗೆ ನ್ಯಾಯ ಕಲ್ಪಿಸಿಕೊಡುವಂತೆ 9 ತಿಂಗಳಿಂದ ಕಾರ್ಯಾಲಯಕ್ಕೆ ಅಲೆದಾಡುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನ್ಯಾಯ ಕೊಡಿಸುವಂತೆ ತಹಸೀಲ್ದಾರ್ಗೆ ಮನವಿ ಮಾಡಿಕೊಂಡರು.
ಗ್ರಾಮಸ್ಥರ ಸಮಸ್ಯೆ ಆಲಿಸಿದ ತಹಸೀಲ್ದಾರ್ ಆರ್.ಡಿ. ಉಪ್ಪಿನ ಸ್ಥಳದಲ್ಲಿಯೇ ಹಾಜರಿದ್ದ ಮುಖ್ಯಾಧಿಕಾರಿ ಡಿ.ಟಿ. ದೊಡ್ಡಮನಿ, ಕಿರಿಯ ಅಭಿಯಂತರ ಜೆ.ಕೆ. ಉಳ್ಳಟ್ಟಿ ಅವರಿಗೆ ಯಾವುದೇ ಸಬೂಬು ಹೇಳದೆ ತುರ್ತಾಗಿ ಜನರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು. ಸಿಖಂದರ ಟಪಾಲ, ಇಮಾಮಹುಸೇನ ಹಮ್ಮಿಗಿ, ಬಸವರಾಜ ರಡ್ಡೇರ, ಅಲ್ಲಾಬಕ್ಷಿ ನಗಾರಿ, ಹುಸೇನಸಾಬ ತಹಸೀಲ್ದಾರ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

