ಪದವಿ ಕಾಲೇಜಿಗೆ ಕನಿಷ್ಠ ಸೌಲಭ್ಯವೂ ಇಲ್ಲ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜು. 31
ನಿತ್ಯ ಮಧ್ಯಾಹ್ನ 12ಕ್ಕೆ ಕಾಲೇಜಿಗೆ ಬರುವ ಪ್ರಾಂಶುಪಾಲರು, ನಾವೇನು ಕಮ್ಮಿ ಎಂಬಂತೆ ಸಮಯಕ್ಕೆ ಸರಿಯಾಗಿ ಬರದಿರುವ ಕೆಲ ಕಾಯಂ ಉಪನ್ಯಾಸಕರು, ಇದರಿಂದ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ತೊಂದರೆಯಾಗುತ್ತಿದ್ದು, ಅವರ ಗೋಳು ಕೇಳುವವರೇ ಇಲ್ಲದಂತಾಗಿದೆ.
ಈ ಅವ್ಯವಸ್ಥೆ ಪ್ರಶ್ನಿಸಿದರೆ, ಕೆಲ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ ಬಾಯಿ ಮುಚ್ಚಿಸುತ್ತಿದ್ದಾರೆ. ಅನ್ಯ ಮಾರ್ಗವಿಲ್ಲದೇ ವಿದ್ಯಾರ್ಥಿಗಳು ಕಾಲೇಜು ಅಂಗಳದಲ್ಲಿ ಕುಳಿತು ಅಭ್ಯಸಿಸುವ ಸ್ಥಿತಿ ಬಂದಿದೆ.
ಇದು ಪಟ್ಟಣದ ಜ. ಫಕ್ಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದುಸ್ಥಿತಿ. ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ ವಾಸ್ತವದಲ್ಲಿ ಮೂಲ ಸೌಕರ್ಯಗಳಿಲ್ಲದೇ ನಲಗುತ್ತಿರುವ ಸರ್ಕಾರಿ ಶಾಲೆ, ಕಾಲೇಜುಗಳ ಸಂಖ್ಯೆಗೇನೂ ಕಡಿಮೆ ಇಲ್ಲ. ಈ ಕಾಲೇಜಿನಲ್ಲಿ ಇತಿಹಾಸ, ಅರ್ಥಶಾಸ್ತ್ರ, ಕನ್ನಡ, ಇಂಗ್ಲಿಷ್ ವಿಷಯಗಳಿಗೆ ಕಾಯಂ ಉಪನ್ಯಾಸಕರು ಇದ್ದಾರೆ. ಇನ್ನುಳಿದ ವಿಷಯಗಳಿಗೆ ಅತಿಥಿ ಉಪನ್ಯಾಸಕರು. ದೈಹಿಕ ಶಿಕ್ಷಕ, ಗ್ರಂಥಪಾಲಕ, ಬೆರಳಚ್ಚುಗಾರರ ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಬಿಬಿಎ ವಿದ್ಯಾರ್ಥಿಗಳ ಗೋಳು: ಈ ಕಾಲೇಜಿನಲ್ಲಿ ಬಿಬಿಎ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯವಿಲ್ಲದೆ ಗೋಳಾಡುತ್ತಿದ್ದಾರೆ. ಇವರಿಗೆ ಕುಳಿತುಕೊಳ್ಳಲು ಕೊಠಡಿಗಳಿಲ್ಲ. ವೇಳೆಗೆ ಸರಿಯಾಗಿ ಉಪನ್ಯಾಸಕರು ಬರುವುದಿಲ್ಲ. ವಿದ್ಯಾರ್ಥಿಗಳು ಮೈದಾನದಲ್ಲಿಯೇ ಕುಳಿತು ಅಭ್ಯಸಿಸುವ ಸ್ಥಿತಿಯಿದೆ. ಇದೆಲ್ಲವೂ ಪ್ರಾಂಶುಪಾಲರ ಗಮನಕ್ಕೆ ಬಂದರೂ ಮೂಲ ಸೌಲಭ್ಯ ಒದಗಿಸುವಲ್ಲಿ ಬೇಜವಾಬ್ದಾರಿ ತೋರಿದ್ದಾರೆ. ಕಾಲೇಜು ಆವರಣದ ಉದ್ಯಾನದಲ್ಲಿ ಮುಳ್ಳುಕಂಟಿಗಳಿದ್ದು, ವಿದ್ಯಾರ್ಥಿಗಳು ಇಲ್ಲಿ ಕುಳಿತುಕೊಳ್ಳಲು ಭಯಪಡುತ್ತಿದ್ದಾರೆ.
ಇರುವ 5 ಶಾಲಾ ಕೊಠಡಿಗಳಿಗೆ ಬಾಗಿಲು, ಕಿಟಕಿಗಳಿಲ್ಲ. 4-5 ವರ್ಷಗಳಿಂದ ಸಮಸ್ಯೆ ಕುರಿತು ಚುನಾಯಿತ ಪ್ರತಿನಿಧಿಗಳಿಗೆ, ಸಂಬಂಧಿಸಿದ ಅಧಿಕಾರಿಗಳಿಗೆ ಕಾಲೇಜು ವಿದ್ಯಾರ್ಥಿಗಳೇ ತರಗತಿ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿ ಗಮನ ಸೆಳೆದರೂ ಕ್ರಮ ಕೈಗೊಂಡಿಲ್ಲ. ಕಾಲೇಜು ಆರಂಭವಾದಾಗಿನಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಕಾಲೇಜಿನಲ್ಲಿ ಬಿಎ, ಬಿಬಿಎ ಕೋರ್ಸ್ಗಳಿಗೆ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಇವರೆಲ್ಲರಿಗೂ ಕೊಠಡಿಗಳ ಕೊರತೆ. ಅಭಿವೃದ್ಧಿಗೆಂದು ಸರ್ಕಾರದಿಂದ ಬರುವ ಲಕ್ಷಾಂತರ ಅನುದಾನ ಏತಕ್ಕೆ ಬಳಕೆಯಾಗುತ್ತಿದೆ ಎಂಬುದು ಮಾತ್ರ ತಿಳಿಯುತ್ತಿಲ್ಲ. ಪ್ರಾಂಶುಪಾಲ ವಿ.ಪಿ. ಸಮೋರೆಕರ ಮಾತ್ರ ಕಾಲೇಜಿನಲ್ಲಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಯಾವುದೂ ಪ್ರಸ್ತಾವನೆ ಸಲ್ಲಿಸದೇ ಕಾಲೇಜು ಸುಧಾರಣೆಗೆ ಮುಂದಾಗುತ್ತಿಲ್ಲ. ಇದು ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಮಸ್ಯೆಯಾಗಿದೆ.
ಕಾಲೇಜಿನಲ್ಲಿರುವ ಶೌಚಾಲಯ ಸ್ವಚ್ಛತೆಯಿಲ್ಲದೆ ಗಬ್ಬು ನಾರುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ತರಗತಿಗಳಲ್ಲಿ ಕುಳಿತು ಪಾಠ ಆಲಿಸದಂತಹ ವಾತಾವರಣ ನಿರ್ಮಾಣವಾಗಿದೆ. ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು ಇದರಿಂದ ವಿದ್ಯಾರ್ಥಿಗಳು ಕಾಯಿಲೆಗೆ ತುತ್ತಾಗುವ ಭಯದಲ್ಲಿದ್ದಾರೆ. ಮೂಗು ಮುಚ್ಚಿಕೊಂಡೇ ತರಗತಿಯಲ್ಲಿ ಕುಳಿತುಕೊಳ್ಳುವಷ್ಟು ಗಲೀಜು ವಾತಾವರಣ ನಿರ್ಮಾಣವಾಗಿದೆ. ಇನ್ನೂ ಮುಂದಾದರೂ ಸರ್ಕಾರ, ಈ ಕಾಲೇಜಿಗೆ ಮೂಲ ಸೌಲಭ್ಯ ನೀಡುತ್ತದೆಯೇ ಕಾದು ನೋಡಬೇಕು.
-ಮಹದೇವಪ್ಪ ಎಂ. ಸ್ವಾಮಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

