ಪತ್ರಕರ್ತರು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜು. 31
ಪತ್ರಿಕೋದ್ಯಮ ಪವಿತ್ರವಾದದ್ದು, ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸಮಾಜಕ್ಕೆ ಅನ್ಯಾಯವಾದಾಗ ತನಗಾದ ಅನ್ಯಾಯ ಎಂಬಂತೆ ಭಾವಿಸಿ, ಆ ಮೂಲಕ ವೃತ್ತಿಯ ಪಾವಿತ್ರ್ಯ ಕಾಪಾಡಿಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಹೇಳಿದರು.
ಅವರು ಬುಧವಾರ ಶಿರಹಟ್ಟಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಾಪಂ ಸಾಮರ್ಥ್ಯಸೌಧ ಸಭಾಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ವಿಶ್ವಾಸಾರ್ಹತೆ ಬೆಳೆಸಿಕೊಳ್ಳಬೇಕು. ಜನತೆಯೂ ಯೋಗ್ಯವಾದುದಕ್ಕೆ ಪ್ರೋತ್ಸಾಹ ನೀಡಬೇಕು. ಸಮಾಜ ಎಲ್ಲ ರೀತಿಯಿಂದ ಕೆಟ್ಟು ಹೋಗಿಲ್ಲ. ಸಮಾಜದಲ್ಲಿನ ಓರೆ ಕೋರೆಗಳನ್ನು ತಿದ್ದುವ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಪತ್ರಕರ್ತರು ಮುಂದಾಗಬೇಕು. ತಾಲೂಕು ಪತ್ರಕರ್ತರ ಸಂಘವೂ ಪ್ರಾಮಾಣಿಕವಾಗಿ ಮತ್ತು ಸ್ಪಷ್ಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶಂಶಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ, ಸಿಪಿಐ ಪ್ರಕಾಶ ನಾಯ್ಡು ಮಾತನಾಡಿ, ಪತ್ರಕರ್ತರು ಸಮಾಜ ಸುಧಾರಣೆಯ ನಿಟ್ಟಿನಲ್ಲಿ ಹಾಗೂ ಜನ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕಾ ರಂಗವೂ ತನ್ನದೇ ಆದ ಅಮೂಲ್ಯ ಕೊಡುಗೆ ನೀಡಿದ್ದು, ಸ್ವಾತಂತ್ರ್ಯ ನಂತರವೂ ಸರ್ಕಾರದ ಲೋಪ ದೋಷಗಳನ್ನು, ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಆಧುನಿಕ ಜಗತ್ತಿನಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪತ್ರಿಕಾ ರಂಗವೂ ವೇಗದಲ್ಲಿ ಮುನ್ನಡೆಯುತ್ತಿದ್ದು, ಪತ್ರಕರ್ತರ ನಿರಂತರ ಶ್ರಮ ಹಾಗೂ ಕಾಳಜಿಯಿಂದಾಗಿ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದರು. ಪಿಎಸ್ಐ ವಿಕಾಸ ಲಮಾಣಿ, ಜಗದೀಶ ಕುಲಕರ್ಣಿ, ರಮೇಶ ನಾಡಿಗೇರ, ನ್ಯಾಯವಾದಿ ಬಿ.ಎಸ್. ಬಾಳೇಶ್ವರಮಠ, ಲೋಕೋಪಯೋಗಿ ಇಲಾಖೆ ಅಧಿಕಾರಿ ಎಲ್.ವೈ. ಮಾಳೋದೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿಗಂಬರ ಪೂಜಾರ ವಹಿಸಿದ್ದರು. ಪಪಂ ಸದಸ್ಯ ಎಚ್.ಡಿ. ಮಾಗಡಿ, ಜೆ.ಆರ್. ಕುಲಕರ್ಣಿ, ಬುಡನಶಾ ಮಕಾನದಾರ, ಸಂತೋಷ ಕುರಿ, ಡಿ.ಟಿ.ದೊಡ್ಡಮನಿ, ಮಂಜುನಾಥ ಘಂಟಿ, ಎಂ.ಕೆ. ಲಮಾಣಿ, ಸುರೇಶ ಅಕ್ಕಿ, ಕೆ.ಎಫ್. ರಮಜಾನಿಯವರ, ಕೆ.ಎ. ಬಳಿಗೇರ, ಶೀಲಾ ಪಾಟೀಲ, ನಾಗರಾಜ ಕುಲಕರ್ಣಿ, ಎಚ್.ಎಂ. ದೇವಗೀರಿ ಮುಂತಾದವರು ಉಪಸ್ಥಿತರಿದ್ದರು. ನಾಗರಾಜ ಹಣಗಿ ಸ್ವಾಗತಿಸಿದರು. ಜಿ.ಬಿ. ಹೆಸರೂರ ನಿರೂಪಿಸಿದರು. ಮಂಜುನಾಥ ಅರಪಲ್ಲಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

