ಗದಗ

ಸಚಿವರ ಪ್ರವಾಸ

Published On :

ಗದಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ಜೂ. 2ರ ಬೆಳಗ್ಗೆ 11.30 ಗಂಟೆಗೆ ಗದುಗಿನಲ್ಲಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ನಂತರ ಸಂಜೆ 6.30 ಗಂಟೆಗೆ ಗದಗಿನಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡುವರು ಎಂದು ಸಚಿವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಸಿಡಿಲು: ಎತ್ತು ಸಾವು
ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಸಿಡಿಲು, ಗುಡುಗು ಸಹಿತ ಧಾರಾಕಾರ ಸುರಿದ ಭಾರಿ ಮಳೆ ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಆದರೆ, ಸಮೀಪದ ನಾಗೇಂದ್ರಗಡದಲ್ಲಿ ಸಿಡಿಲು ಬಡಿದು ಎತ್ತು ಸಾವನ್ನಪ್ಪಿದ ಘಟನೆ ಜರುಗಿದೆ.
ಗ್ರಾಮದ ವೀರಭದ್ರಪ್ಪ ಅಮರಗಟ್ಟಿ ಎಂಬುವರ ಮನೆ ಮುಂದಿನ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತಿಗೆ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾಗಿದೆ. ಆದರೆ, ಮನೆಯಲ್ಲಿ ವಾಸಾವಾಗಿದ್ದ ರೈತ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ.  ಜಿಟಿ ಜಿಟಿ ಮಳೆ ಆರಂಭಗೊಂಡು ಧಾರಾಕಾರ ಮಳೆ ಸುರಿದ ಪರಿಣಾಮ ಜನ ಜೀವನಕ್ಕೆ ತೊಂದರೆಯಾಯಿತು. ಆದರೆ, ರೈತ ಸಮೂಹಕ್ಕೆ ಮಳೆ ಹರ್ಷ ನೀಡಿದೆ.
ಹರಿದ ಹಳ್ಳಗಳು: ನೀರಿಲ್ಲದೇ ಸೊರಗಿದ್ದ ಉಣಚಗೇರಿ ಹಳ್ಳ, ಸೂಡಿ, ಜಿಗಳೂರ, ಹೊಸಳ್ಳಿ ಹಳ್ಳಗಳು ವರುಣ ದೇವರ ಕೃಪೆಯಿಂದ ಸ್ವಲ್ಪ ಹರಿಯುತ್ತಿವೆ. ಕೆಲವೆಡೆ ಹೊಲಗಳ ಒಡ್ಡುಗಳು ಮಳೆ ನೀರಿನ ರಭಸಕ್ಕೆ ಅಲ್ಲಲ್ಲಿ ಒಡೆದಿವೆ.  

ಇಂದು ಸಭೆ
ಗದಗ:  ಜೂ. 2ರ ಸಂಜೆ 7 ಗಂಟೆಗೆ ಬೆಟಗೇರಿಯ ಕನ್ಯಾಳಅಗಸಿ ಹೆಳವಿಯವರ ಓಣಿಯಲ್ಲಿ ಬೆಟಗೇರಿ ಘಟಕದ ಪಂಚಮಸಾಲಿ ಸಮಾಜದ ಮಾಸಿಕ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಹೆಚ್ಚು ಅಂಕಗಳಿಸಿದ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ, ನೂತನವಾಗಿ ಆಯ್ಕೆಯಾದ ನಗರಸಭಾ ಸದಸ್ಯರಿಗೆ ಹಾಗೂ ನಿವೃತ್ತಿ ಹೊಂದಿದ ಸಮಾಜದ ಸದಸ್ಯರಿಗೆ ಸನ್ಮಾನ, ಸಮಾಜದ ಮುಂದಿನ ರೂಪುರೇಷೆಗಳ ಕುರಿತು ಚರ್ಚಿಸಲಾಗುವುದು.  ಸಮಾಜ ಬಾಂಧವರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ನೌಕರರಿಂದ ಬೆಂಗಳೂರು ಚಲೋ
ಗದಗ:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂ. 3ರಂದು ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಕಮಿಶನರ್ ಕಚೇರಿ ಎದುರು ಹಾಸ್ಟೇಲ್ ದಿನಗೂಲಿ ನೌಕರರ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಗದಗ ನಗರದಿಂದ ತೆರಳಲು ಉದ್ದೇಶಿಸಿದ್ದು, ಜೂ. 2ರ ಸಂಜೆ 4 ಗಂಟೆಗೆ ನಗರದ ನಗರಸಭೆ ಕಾಲೇಜು ಆವರಣದಿಂದ ಹೊರಡಲಿದ್ದು, ಕಾರಣ ಬರುವ ಹಾಸ್ಟೇಲ್ ನೌಕರರು ಸಮಯಕ್ಕೆ ಸರಿಯಾಗಿ ಆಗಮಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 9482538273, 8970275815  ಸಂಪರ್ಕಿಸುವಂತೆ ಜಿಲ್ಲಾ ಸಂಚಾಲಕ ಪೀರು ರಾಠೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸಾರ್ವಜನಿಕರ ಗಮನಕ್ಕೆ
ಗದಗ:  ಜಿಲ್ಲೆಯಲ್ಲಿ ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಗದಗನ ಗಾಂಧಿ ವೃತ್ತದಲ್ಲಿರುವ ಹಳೇ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ ತೀವ್ರ ಚಿಕಿತ್ಸಾ ಘಟಕ ಪ್ರಾರಂಭಿಸಲಾಗಿದೆ. ಸಾರ್ವಜನಿಕರಿಗೆ ಸಂಪರ್ಕಕ್ಕಾಗಿ ಕಂಟ್ರೋಲ್ ರೂಂ ಸಹ ಸ್ಥಾಪಿಸಲಾಗಿದ್ದು, ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08372-250542 ಇರುತ್ತದೆ. ತೀವ್ರ ಚಿಕಿತ್ಸಾ ಘಟಕ ಹಾಗೂ ಕಂಟ್ರೋಲ್ ರೂಂನ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಜಿಲ್ಲಾಡಳಿತದ ಪರವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶೇ. 95ರಷ್ಟು ಫಲಿತಾಂಶ
ಗದಗ: ನಗರದ ಡಿ.ಜಿ. ಮೇಲ್ಮಾಳಗಿ ಸಂಸ್ಕೃತ ಪಾಠಶಾಲೆಯ ಫಲಿತಾಂಶವು ಪ್ರಕಟವಾಗಿದ್ದು, ಶಾಲೆಯ ಒಟ್ಟು ಫಲಿತಾಂಶ ಶೆ. 95ರಷ್ಟಾಗಿದೆ. ಶಾಲೆಯಲ್ಲಿ 31 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಅದರಲ್ಲಿ 30 ಜನರು ಪಾಸಾಗಿದ್ದಾರೆ. 25 ಪ್ರಥಮ ಮತ್ತು 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಿಳೆ ಆತ್ಮಹತ್ಯೆ
ರೋಣ: ತೀವ್ರ ಹೊಟ್ಟೆನೋವಿನ ಭಾದೆ ತಾಳಲಾರದೇ ಗೃಹಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯು ಹೀನಾಕೌಸರ ಮಕಾಂದಾರ (22) ಎಂದು ಗುರುತಿಸಲಾಗಿದ್ದು, ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.