ಗದಗ

ನಿಷೇಧ: ಲಭ್ಯವಿರುವ ಗುಟ್ಕಾಗೆ ಭಾರಿ ಬೇಡಿಕೆ

Published On :

ಗದಗ: ಸರ್ಕಾರ ಶುಕ್ರವಾರದಿಂದ ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿ ಆದೇಶ ಹೊರಡಿಸುತ್ತಿದ್ದಂತೆ, ಈಗಾಗಲೇ ಮಾರುಕಟ್ಟೆಯಲ್ಲಿರುವ ಗುಟ್ಕಾಗೆ ಸಾಕಷ್ಟು ಬೇಡಿಕೆ ಬಂದಿದ್ದು, ಗುಟ್ಕಾ ಪ್ರಿಯರು, ದುಪ್ಪಟ್ಟು, ಮೂರು ಪಟ್ಟು ಹಣ ನೀಡಿ ಗುಟ್ಕಾ ಪಡೆಯುತ್ತಿದ್ದಾರೆ. ದಾಸ್ತಾನಿರುವ ಗುಟ್ಕಾ ಮಾಲೀಕರಿಂದ ಕಳ್ಳ ದಂಧೆಯೇ ಪ್ರಾರಂಭವಾಗಿದ್ದು, ಪರಿಸ್ಥಿತಿಯ ಲಾಭವನ್ನು ಅತ್ಯಂತ ಜಾಣ್ಮೆಯಿಂದ ಪಡೆದುಕೊಳ್ಳುತ್ತಿದ್ದಾರೆ.
ಗುಟ್ಕಾ ನಿಷೇಧದಿಂದ ಒಂದೆಡೆ ಅಡಕೆ ಬೆಳೆಗಾರರು ಆತಂಕದಲ್ಲಿದ್ದರೆ, ಗುಟ್ಕಾ ಪ್ರಿಯರು ಸರ್ಕಾರದ ಕ್ರಮವನ್ನು ಒಳಗೊಳಗೆ ಶಪಿಸುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಗುಟ್ಕಾ ಮಾರಾಟದ ಸಗಟು ಮಾರಾಟದ ಪರವಾನಗಿ ಹೊಂದಿರುವ ಪ್ರತಿಯೊಬ್ಬರಿಗೂ ಸದ್ಯ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಸರ್ಕಾರ ಮೇ 31ರಿಂದ ಗುಟ್ಕಾ ನಿಷೇಧಿಸುವ ಮುನ್ಸೂಚನೆ ನೀಡಿದ ದಿನದಿಂದಲೇ ಈ ಹಿಂದೆ ಇದ್ದ ಗುಟ್ಕಾ ಬೆಲೆಯಲ್ಲಿ ಭಾರಿ ಹೆಚ್ಚಳ ಮಾಡಿದ್ದು, ಹೆಚ್ಚಿನ ಬೆಲೆ ನೀಡಿದವರಿಗೆ ಮಾತ್ರ ಗುಟ್ಕಾ ನೀಡಿದ್ದಾರೆ.
ಎಲ್ಲಿಲ್ಲದ ಬೇಡಿಕೆ: ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯಲ್ಲಿ 8710 ವ್ಯಾಪಾರಸ್ಥರು ಗುಟ್ಕಾ ಮಾರಾಟದ ಸಗಟು ಪರವಾನಗಿ ಹೊಂದಿದ್ದಾರೆ. ಇನ್ನು 1501425 ಕ್ಕೂ ಹೆಚ್ಚು ಜನರು ಗುಟ್ಕಾ ಪ್ಯಾಕೆಟ್‌ಗಳನ್ನು ಅಂಗಡಿಗಳಿಗೆ ತಲುಪಿಸುವ (2ನೇ ದರ್ಜೆ ಪರವಾನಗಿ) ಹೊಂದಿದ್ದಾರೆ. 7410093 ರಷ್ಟು ವ್ಯಾಪಾರಸ್ಥರು ಗುಟ್ಕಾ ನೇರ ಮಾರಾಟ ಹಾಗೂ ಅದರ ವಹಿವಾಟು ನಡೆಸುತ್ತಿದ್ದು, ರಾಜ್ಯದಲ್ಲಿ ಪ್ರತಿ ದಿನ 18 ಟನ್ ಅಧಿಕ ಗುಟ್ಕಾ ಮಾರಾಟವಾಗುತ್ತದೆ ಎಂದು ಖಾಸಗಿ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಹಿರಂಗಗೊಂಡಿದೆ. ಇನ್ನು ಪರಿಸರ ಇಲಾಖೆ ಹಾಗೂ ತಂಬಾಕು ನಿಯಂತ್ರಣ ಮಂಡಳಿಗಳ ದಾಖಲೆಗಳೂ ಇದಕ್ಕೆ ಹೊರತಾಗಿಲ್ಲ.
ಪರಿಸ್ಥಿತಿಯ ಲಾಭ: ಸರ್ಕಾರ ಗುಟ್ಕಾ ನಿಷೇಧ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಎಲ್ಲ ಗುಟ್ಕಾ ವ್ಯಾಪಾರಸ್ಥರು ಏಕಾಏಕಿ ಬೆಲೆಯನ್ನು ದುಪ್ಪಟ್ಟು ಮಾಡಿದ್ದಾರೆ. ಅದರಲ್ಲಿಯೂ ಕೆಲ ಪ್ರಮುಖ ಕಂಪನಿಗಳ ಗುಟ್ಕಾ ಇಂದು ಒಂದು ಸ್ಯಾಚೆಟ್‌ಗೆ (ಚೀಟಿಗೆ) ರು. 50ಕ್ಕೆ ಮಾರಾಟವಾಗುತ್ತಿದೆ. ಅದರ ಮೂಲ ಬೆಲೆ ರು. 10, ಇನ್ನು ಕೆಳ ದರ್ಜೆಯ ಗುಟ್ಕಾಗಳು ಮೊದಲು ಕ್ರಮವಾಗಿ ರು. 5, 2, 1 ಗಳಲ್ಲಿ ಲಭ್ಯವಾಗುತ್ತಿದ್ದವು. ಆದರೆ, ನಿಷೇಧದ ವಾಸನೆ ಬಡಿಯುತ್ತಿದ್ದಂತೆ ಅತ್ಯಂತ ಕಡಿಮೆ ಗುಣಮಟ್ಟದ ( 1 ಸ್ಯಾಚೆ) ಇಂದು ರು. 10ಕ್ಕೆ ಮಾರಾಟವಾಗುತ್ತಿದ್ದು, ಈ ಪರಿಸ್ಥಿತಿಯ ಲಾಭವನ್ನು ನೇರವಾಗಿ ಸಗಟು ಹಾಗೂ ಬಿಡಿ ಮಾರಾಟಗಾರರು ಪಡೆದುಕೊಳ್ಳುತ್ತಿದ್ದಾರೆ.
ಗುಟ್ಕಾ ದಾಸ್ತಾನಿದೆ: ಸರ್ಕಾರ ನಿಷೇಧ ಆದೇಶ ಹೊರಡಿಸಿದೆ. ಆದರೆ, ಈಗಾಗಲೇ ರಾಜ್ಯದ ಎಲ್ಲ ಪಾನ್ ಬೀಡಾ ಅಂಗಡಿಗಳಿಗೆ ರವಾನೆಯಾಗಿರುವ ಗುಟ್ಕಾ ಏನು ಮಾಡುವುದು ? ಅದು ಮಾರಾಟವಾಗದೇ ಬೇರೆ ದಾರಿಯೇ ಇಲ್ಲ. ಆದರೆ ಎಲ್ಲ ವ್ಯಾಪಾರಸ್ಥರೂ ದಾಸ್ತಾನಿರುವ ಗುಟ್ಕಾವನ್ನೇ ಅತ್ಯಂತ ಲಾಭದ ವಸ್ತುವಾಗಿ ಮಾರ್ಪಡಿಸಿಕೊಂಡಿದ್ದಾರೆ. ವ್ಯಾಪಾರಸ್ಥರ ಬಳಿ ಈಗಾಗಲೇ ಇರುವ ಗುಟ್ಕಾ ಮಾರಾಟ ಅಥವಾ ನಿಷೇಧ ವಿಷಯವಾಗಿ ಸ್ಪಷ್ಟತೆ ಇಲ್ಲದೇ ಇರುವುದು ಹೆಚ್ಚಿನ ದರದ ಮಾರಾಟಕ್ಕೆ ಅನುಕೂಲ ಕಲ್ಪಿಸಿದ್ದು, ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿವಿಧ ಕಂಪನಿಗಳು ಸೇರಿದಂತೆ ಒಟ್ಟು 1500 ಟನ್‌ಗೂ ಅಧಿಕ (4 ಕೋಟಿ ಸ್ಯಾಚೆಟ್‌ಗಳು) ಗುಟ್ಕಾ ರಾಜ್ಯದಲ್ಲಿದೆ ಎಂದು ಅಂದಾಜಿಸಲಾಗಿದೆ.

ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.