ಗದಗ

ಯುವಕರು ತಂಬಾಕು ತ್ಯಜಿಸಬೇಕು: ನಂಜೇಗೌಡ

Published On :

ಕನ್ನಡಪ್ರಭ ವಾರ್ತೆ, ರೋಣ, ಜೂ. 2  
ತಂಬಾಕು ಸೇವನೆಯಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಷ್ಟ್ರ ನಿರ್ಮಾಣದ ಶಕ್ತಿ ಹೊಂದಿದ ಯುವ ಜನತೆ ಭವಿಷ್ಯದ ಜೀವನವನ್ನು ಆರೋಗ್ಯಕರವಾಗಿ ಕಳೆಯಲು ತಂಬಾಕು ಸೇವನೆಯನ್ನು ತ್ಯಜಿಸಬೇಕು ಎಂದು ಕಿರಿಯ ಶ್ರೇಣಿ ನ್ಯಾಯಾಧೀಶ ನಂಜೇಗೌಡ ಎಂ.ಸಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತವಾಗಿ ತಂಬಾಕು ನಿಷೇಧ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ದಕ್ಷಿಣ ಭಾಗಕ್ಕಿಂತ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕು ಸೇವನೆಯನ್ನು ಮಾಡುತ್ತಾರೆ. ಅದಕ್ಕಾಗಿ ಜನಸಾಮಾನ್ಯರಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಇಲ್ಲದಿರುವುದು.
ರಾಜ್ಯ ಸರ್ಕಾರ ತಂಬಾಕು ನಿಷೇಧಕ್ಕೆ ಚಿಂತನೆ ನಡೆಸಿದ್ದು ಸ್ತುತ್ಯಾರ್ಹವಾಗಿದೆ. ತಂಬಾಕು ಅಗಿಯುವುದರಿಂದಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಯುವ ಜನತೆಯು ಜಾಗೃತರಾಗಬೇಕು. ಸಾರ್ವಜನಿಕರಲ್ಲಿ ತಂಬಾಕು ತ್ಯಜಿಸುವ ಕುರಿತು ಸಂಘ, ಸಂಸ್ಥೆಗಳು, ಸ್ವ ಸಹಾಯ ಗುಂಪುಗಳು, ಯುವಕ ಮಂಡಳಗಳು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಗಾಗ್ಗೆ ಹಮ್ಮಿಕೊಳ್ಳಬೇಕು ಎಂದರು. ಆರೋಗ್ಯ ಸಹಾಯಕ ಎಸ್.ಎಫ್.ಅಂಗಡಿ ಮಾತನಾಡಿ, ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ. ಇಂದು ಹೆಚ್ಚಾಗಿ ಯುವಕರು, ಮಹಿಳೆಯರು ಹಾಗೂ ಕಾಲೇಜ್ ಹಂತದಲ್ಲಿನ ವಿದ್ಯಾರ್ಥಿಗಳು ಇಂತಹ ವ್ಯಸನದಲ್ಲಿ ಭಾಗಿಯಾಗಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ತಂಬಾಕು ಅಗಿಯುವುದರಿಂದ ಆರೋಗ್ಯ ಹಾಳಾಗುವುದರ ಜತೆಗೆ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ವ್ಯಕ್ತಿಯ ಸದೃಢ ಆರೋಗ್ಯ ಮತ್ತು ಚಿಂತನೆಗಳು ಮುಖ್ಯವಾಗಿವೆ ಎಂದರು.
ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ನ್ಯಾಯಾಧೀಶ ಜಿ.ಡಿ. ಮಹಾವರಕರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಐ.ಎಂ. ಪಾಟೀಲ ವಹಿಸಿದ್ದರು. ತಂಬಾಕು ನಿಷೇಧ ಕಾಯ್ದೆ ಕುರಿತು ನ್ಯಾಯವಾದಿ ವಿ.ಡಿ. ಪಾವಸ್ಕರ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕ ನಾರಾಯಣ, ಎಚ್.ಎಫ್. ಕಾಡದೇವರಮಠ, ಬಿ.ಆರ್. ದೊಡ್ಡಮನಿ, ಜಿ.ಆರ್. ಗುಡಿಸಾಗರ, ಎಸ್.ಎಂ. ಸಜ್ಜನರ, ರಾಜೇಂದ್ರ ಉದ್ದಾರ ಮತ್ತು ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿ.ಆರ್. ಯಳವತ್ತಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.