ಗದಗ

ಸುದ್ದಿ ಸಂಕ್ಷೇಪ

Published On :

ಕನ್ನಡ ಸಾಹಿತ್ಯ ಸಮ್ಮೇಳನ: ಬಡಿಗೇರ ಹೇಳಿಕೆಗೆ ಖಂಡನೆ
ಮುಂಡರಗಿ: 
ಮುಂಡರಗಿಯಲ್ಲಿ ಜೂ. 15, 16ರಂದು ನಡೆಯಲಿರುವ ಗದಗ ಜಿಲ್ಲಾ 5ನೇ ಸಾಹಿತ್ಯ ಸಮ್ಮೇಳನದ ಕುರಿತು ಗದಗ ಜಿಲ್ಲಾ ಚುಟುಕ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ವಿ. ಬಡಿಗೇರ ಅನಾವಶ್ಯಕ ಟೀಕೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಮುಂಡರಗಿ ತಾಲೂಕು ಸಾರ್ವಜನಿಕ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಚನಾತ್ಮಕ ಸಲಹೆ ನೀಡಿದರೆ ಅದನ್ನು ಕಸಾಪ ಸ್ವೀಕರಿಸುತ್ತದೆ. ಮುಂಡರಗಿಯಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದು 5 ತಿಂಗಳ ಹಿಂದೆಯೇ ಜಿಲ್ಲಾ ಕಸಾಪ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಮುಂಡರಗಿಯಲ್ಲಿ ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಸಮಾರಂಭ ನಡೆಸಲು ಮುಂಡರಗಿ ತಾಲೂಕಿನ ಸಾಹಿತ್ಯ ಪ್ರೇಮಿಗಳು ಎಲ್ಲ ಸಿದ್ಧತೆಗಳು ನಡೆದಿರುವಾಗ ಡಿ.ವಿ. ಬಡಿಗೇರ ಹಳದಿ ಕಣ್ಣಿನಿಂದ ನೋಡಬಾರದು ಎಂದು ಹೇಳಿದ್ದಾರೆ. ಅಂದಾನಗೌಡ ಕುಲಕರ್ಣಿ, ಕೃಷ್ಣ ಸಾವಕಾರ, ವಿಜಯಕುಮಾರ ಬಣಕಾರ, ದುರುಗಪ್ಪ ಪೂಜಾರ ಸೇರಿದಂತೆ ಅನೇಕ ಕಸಾಪ ಅಭಿಮಾನಿಗಳು ಉಪಸ್ಥಿತರಿದ್ದು, ಬಡಿಗೇರರ ಹೇಳಿಕೆ ಖಂಡಿಸಿದರು.
ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನ
ಗದಗ:
ಕೆನರಾ ಬ್ಯಾಂಕ್ ಮತ್ತು ವಿ.ಆರ್.ಡಿ.ಎಂ. ಟ್ರಸ್ಟ್‌ನಿಂದ ಪ್ರಾಯೋಜಿತ-ದೇಶಪಾಂಡೆ ರುಡ್‌ಸೆಟ್ ಸಂಸ್ಥೆ ಹಳಿಯಾಳ ಇವರು ಜೂನ್ ತಿಂಗಳಲ್ಲಿ ಆಸಕ್ತ ನಿರುದ್ಯೋಗಿ ಯುವಕರಿಂದ ಉಚಿತ ವಿವಿಧ ಸ್ವ-ಉದ್ಯೋಗ ತರಬೇತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜೂ. 14ರಿಂದ 1 ತಿಂಗಳ ಮೋಟರ್ ರಿವೈಂಡಿಂಗ್ ತರಬೇತಿ, ಜೂ. 17ರಿಂದ ಏಸಿ ಮತ್ತು ರೆಫ್ರಿಜರೇಶನ್ ತರಬೇತಿ, 27ರಿಂದ ಮೊಬೈಲ್ ಫೋನ್ ರಿಪೇರಿ ತರಬೇತಿಗಳು ಜರುಗಲಿದ್ದು, ಆಸಕ್ತರು ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ. ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. 18 ರಿಂದ 45 ವರ್ಷದೊಳಗಿನ ರಾಜ್ಯದ ಯಾವುದೇ ಭಾಗದ ಆಸಕ್ತರು ತರಬೇತಿಯಲ್ಲಿ ಭಾಗವಹಿಸಬಹುದು. ಅರ್ಜಿ ಸಲ್ಲಿಸಲು ಇಚ್ಛಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆ, ಪಡೆಯಲಿಚ್ಛಿಸುವ ತರಬೇತಿ, ವಿದ್ಯಾರ್ಹತೆ, ಆಯ್ದ ವಿಷಯದಲ್ಲಿ ಪ್ರಾಥಮಿಕ ಜ್ಞಾನ ಮುಂತಾದ ವಿವರಗಳನ್ನೊಳಗೊಂಡ ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಬರೆದು, ನಿರ್ದೇಶಕರು, ದೇಶಪಾಂಡೆ ರುಡ್‌ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾನಗರ, ಹಳಿಯಾಳ-581329 ಇಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಆಯಾ ತರಬೇತಿಗಳು ಪ್ರಾರಂಭವಾಗುವ ಮುನ್ನ ಸಂಸ್ಥೆಯು ಕೆಳಗೆ ನೀಡಿದ ದೂರವಾಣಿಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿ ತರಬೇತಿಗೆ ಆಯ್ಕೆಯಾಗಬಹುದು. ಹೆಚ್ಚಿನ ಮಾಹಿತಿಗಾಗಿ ಮತ್ತು ಸಂಸ್ಥೆಗೆ ಬರುವಾಗ ತರಬೇಕಾದ ದಾಖಲಾತಿಗಳ ಬಗ್ಗೆ ಸಂಸ್ಥೆಯ ದೂರವಾಣಿ ಸಂಖ್ಯೆ 08284-220807, 9482188780, 9483485489 ಇಲ್ಲಿಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಇಂದು ಸಮಾರಂಭ
ಗದಗ: 
ನಗರದ ಕಾಟನ್ ಮಾರ್ಕೆಟ್‌ನಲ್ಲಿರುವ ದಿ ಮರ್ಚ್‌ಂಟ್ಸ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಕಚೇರಿ ಸ್ಥಳಾಂತರ ಸಮಾರಂಭ ಜೂನ್ 3ರ ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಭಾ ಭವನದಲ್ಲಿ ಜರುಗಲಿದೆ.  ಉದ್ಘಾಟನೆಯನ್ನು ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ನೆರವೇರಿಸುವರು. ಅಧ್ಯಕ್ಷತೆಯನ್ನು ಬ್ಯಾಂಕಿನ ಚೇರ್‌ಮನ್  ಸಚಿನ್ ಪಟ್ಟಣಶೆಟ್ಟಿ ವಹಿಸುವರು. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಸಹಕಾರ ಸಂಘಗಳ ಉಪನಿಬಂಧಕ ಜಬ್ಬಾರ್ ಬೇಗ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಹೇಶ ಉಪ್ಪಿನ ಆಗಮಿಸುವರು. ಸದ್ಯ ಕಾಟನ್ ಮಾರ್ಕೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಜೂನ್ 3 ರಿಂದ ಎಪಿಎಂಸಿ ಮುಖ್ಯ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕಿನ ಹತ್ತಿರದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಬ್ಯಾಂಕಿನ ವೈಸ್ ಚೇರಮನ್ ಶಾಂತೇಶ ಅರಮನಿ ತಿಳಿಸಿದ್ದಾರೆ.
ಇಂದು ಪೂರ್ವಭಾವಿ ಸಭೆ
ನರೇಗಲ್ಲ:
  ಜೂ. 3ರ ಸಂಜೆ 5 ಗಂಟೆಗೆ ಸ್ಥಳೀಯ ಶ್ರೀ ರೇಣುಕಾಚಾರ್ಯ ಪೂರ್ವಪ್ರಾಥಮಿಕ ಶಾಲೆಯಲ್ಲಿ ರೋಣ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ ಹಾಗೂ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದು, ತಾಲೂಕಿನ ಎಲ್ಲ ಪದಾಧಿಕಾರಿಗಳು ಸಾಹಿತ್ಯಾಸಕ್ತರು ಹಾಗೂ ತಾಲೂಕು ಪದಾಧಿಕಾರಿಗಳು ಭಾಗವಹಿಸಬೇಕೆಂದು ತಾಲೂಕು ಕಸಾಪ ಅಧ್ಯಕ್ಷ ಡಾ. ಶಿವರಾಜ ಗುರಿಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.