ಪಡಿತರಕ್ಕಾಗಿ ಅಂಗವಿಕಲನ ಪರದಾಟ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜೂ. 3
ಸರ್ಕಾರ ಪಡಿತರ ಇಲಾಖೆಯ ಮುಖಾಂತರ ಕಡು ಬಡವರಿಗೆ ಲಕ್ಷಾಂತರ ಮೌಲ್ಯದ ಆಹಾರ ಧಾನ್ಯವನ್ನು ರಿಯಾಯ್ತಿ ದರದಲ್ಲಿ ಹಂಚುತ್ತಿದೆ. ಬಡವರು, ದೀನ ದಲಿತರು ನೆಮ್ಮದಿಯಿಂದ ಬದುಕು ಸಾಗಿಸುವಂತಾಗಲಿ ಎಂಬ ಉದ್ದೇಶದಿಂದ ಹಂಚುತ್ತಿರುವ ಪಡಿತರ ಧಾನ್ಯ ಮಾತ್ರ ನಿಜವಾಗಿ ಸಂಕಷ್ಟದಲ್ಲಿರುವವರಿಗೆ, ಬಡವರಿಗೆ ತಲುಪುತ್ತಿಲ್ಲ.
ಸಮೀಪದ ಬಾಲೆಹೊಸೂರು ಗ್ರಾಮದಲ್ಲಿ ಒಂದು ಕಾಲು ಇಲ್ಲದೇ ಇರುವ ಅಂಗವಿಕಲನ ಕುಟುಂಬಕ್ಕೆ 3-4 ತಿಂಗಳಿಂದ ಪಡಿತರ ಧಾನ್ಯ ಸಿಗದೆ ಹೊಟ್ಟೆಗೆ ಹಿಟ್ಟಿಲ್ಲದೆ ಕಂಡ ಕಂಡವರ ಕಾಲು ಹಿಡಿದು ಬೇಡಿಕೊಳ್ಳುತ್ತಿರುವ ದಯನೀಯಸ್ಥಿತಿ ಬಂದಿದೆ.
ಬಾಲ್ಯದಲ್ಲಿ ಬಸ್ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡು ಅಂಗವಿಕಲನಾಗಿರುವ ಹನುಮಂತಪ್ಪ ಕುರುಗೊಡೆಪ್ಪ ವಗ್ಗಣ್ಣವರ(45) ಈತನಿಗೆ ಸರ್ಕಾರ ಅಂತ್ಯೋದಯ ಕಾರ್ಡ್‌ನ್ನು ನೀಡಿದೆ. ಆದರೆ, 3-4 ತಿಂಗಳಿಂದ ಪಡಿತರ ಮಾತ್ರ ಸಿಗುತ್ತಿಲ್ಲ. ಇನ್ನೂ ದುರಂತವೆಂದರೆ ಈತನ ಹೆಸರಲ್ಲಿ ಯಾವುದೇ ಹೊಲ, ಮತ್ತಿತರ ಆಸ್ತಿಯಾಗಲಿ ಇಲ್ಲ. ಇವನ ಹೆಂಡತಿ ಕೂಡ ಅಂಗವಿಕಲೆಯಾಗಿದ್ದಾಳೆ.
ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕುಟುಂಬ: 3-4 ತಿಂಗಳಿಂದ ಪಡಿತರ ಸಿಗದೆ ಕಂಗಾಲಾಗಿರುವ ಹನುಮಂತಪ್ಪ ಕಂಡ ಕಂಡ ಅಧಿಕಾರಿಗಳ ಕಾಲು ಹಿಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಕಣ್ಣೀರಿಡುತ್ತಾನೆ.
ಅಂಗವಿಕಲನಾಗಿರುವುದರಿಂದ ದುಡಿದು ತಿನ್ನಲು ಆಗದೆ, ಸರ್ಕಾರ ನೀಡುವ ಪಡಿತರದಿಂದ ಜೀವನ ಸಾಗಿಸಬೇಕೆಂದರೆ, ಪಡಿತರ ಸಿಗುತ್ತಿಲ್ಲ. ಇದರಿಂದ ಅವರು ಸಂಕಷ್ಟದಲ್ಲಿಯೇ ದಿನ ದೂಡುತ್ತಿದ್ದಾರೆಂದು ಗ್ರಾಮಸ್ಥರು ಹನುಮಂತಪ್ಪನ ಬಗ್ಗೆ ಮರುಕ ಪಡುತ್ತಾರೆ. ಆದರೆ, ಇದು ಅಧಿಕಾರಿಗಳ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ.
ಹೀಗೆ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪದಿರುವುದು ದುರದೃಷ್ಟಕರ. ಇಂತಹ ಕಷ್ಟದಲ್ಲಿರುವ ಬಡವರ ನೆರವಿಗೆ ತಾಲೂಕು ಪಡಿತರ ಆಹಾರ ವಿತರಣೆಯ ಅಧಿಕಾರಿಗಳು ಸ್ಪಂದಿಸುತ್ತಾರೆಯೇ ಎಂಬುವುದನ್ನು ಕಾದು ನೋಡಬೇಕಿದೆ.
ನನಗೆ ಇಬ್ಬರು ಚಿಕ್ಕಮಕ್ಕಳಿದ್ದು ತುತ್ತಿನ ಚೀಲ ತುಂಬಿಸಿಕೊಳ್ಳುವುದು ಕಷ್ಟವಾಗುತ್ತಿದೆ. 3-4 ತಿಂಗಳಿಂದ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗಿದೆ. ಸರ್ಕಾರ ನೀಡುವ ರು. 400 ಗಳಲ್ಲಿ ನಮ್ಮ ಜೀವನ ಸಾಗಬೇಕು. ಅಂಗವಿಕಲನಾಗಿದ್ದರಿಂದ ಯಾವುದೇ ಹೊಲ, ಮನಿ ಕಾರ್ಯಗಳನ್ನು ಮಾಡಲು ಆಗುತ್ತಿಲ್ಲ. ಪಡಿತರ ಸಿಗದೆ ತುತ್ತು ಅನ್ನಕ್ಕಾಗಿ ಬೇರೆಯವರ ಮನೆ ಕಾಯುವ ಸ್ಥಿತಿ ಬಂದೊದಗಿದೆ. ಇನ್ನು ರೇಶನ್ ನೀಡುವ ಅಂಗಡಿಯಾತನನ್ನು ಕೇಳಿದರೆ ನಿನ್ನ ಕಾರ್ಡಿಗೆ ಪಡಿತರ ಬಂದಿಲ್ಲ. ಹೀಗಾಗಿ ನಿನಗೆ ರೇಶನ್ ಇಲ್ಲವೆಂದು ಎಂದು ಹೇಳುತ್ತಾನೆ. ಹೀಗಾದರೆ ನಮ್ಮ ಜೀವನ ಹೇಗೆ ಎಂಬ ಚಿಂತೆ ಕಾಡುತ್ತಿದೆ.
-ಹನುಮಂತಪ್ಪ ವಗ್ಗಣ್ಣವರ, ಅಂಗವಿಕಲ.
ಅಶೋಕ ಸೊರಟೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

