ಅಂಗವಿಕಲರ ಪ್ರತಿಭೆಗೆ ಅವಕಾಶ ನೀಡಿ: ಬೊಮ್ಮಾಯಿ
ಶಿಗ್ಗಾಂವಿ: ಅಂಗವೈಕಲ್ಯದಿಂದ ಜೀವನ ಸಾಗಿಸಲಾಗದೆ, ಕಷ್ಟದಿಂದ ಬಳಲುತ್ತಿರುವ ಜನರಿಗೆ ಸಹಾನುಭೂತಿ ತೋರಿಸುವುದಕ್ಕಿಂತ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಸೂಕ್ತ ಅವಕಾಶ ದೊರಕಿಸಿಕೊಡುವುದು ಇಂದಿನ ದಿನದಲ್ಲಿ ಅವಶ್ಯವಾಗಿದೆ. ಅಂದಾಗ ಮಾತ್ರ ಎಲ್ಲರಂತೆ ಅಂಗವಿಕಲರು ನೆಮ್ಮದಿ ಬದುಕು ಸಾಗಿಸಲು ಸಾಧ್ಯ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಲ್ಲಿಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಅಂಗವಿಕಲರ ಕ್ಷೇಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಅಂಗವಿಕಲ ಫಲಾನುಭವಿಗಳಿಗೆ ಬೈಸಿಕಲ್, ಲ್ಯಾಪ್ಟಾಪ್, ಹೊಲಿಗೆಯಂತ್ರ ವಿತರಿಸಿ, ತಾಲೂಕು ಪಂಚಾಯಿತಿಯಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದರು.
ಯೋಜನೆ ಸದುಪಯೋಗವಾಗಲಿ: ಅಂಗವಿಕಲರ ಅಭಿವೃದ್ಧಿಗಾಗಿ ಸರ್ಕಾರ ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾ ಪಂಚಾಯಿತಿ, ಪುರಸಭೆಗಳಲ್ಲಿ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ಯೋಜನೆಗಳ ಸದುಪಯೋಗ ಅರ್ಹ ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರು.
ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ: ಸರ್ಕಾರದ ಅನೇಕ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಹಾಗೂ ಸಮಾಜದಲ್ಲಿನ ಕಡು ಬಡವನಿಗೆ ತಲುಪುತ್ತಿಲ್ಲ ಎಂಬ ಕೂಗು ಇಂದಿಗೂ ಕೇಳಿ ಬರುತ್ತಿದೆ. ಇದಕ್ಕೆ ಅಧಿಕಾರಿಗಳಲ್ಲಿನ ಪ್ರಾಮಾಣಿಕತೆ ಕೊರತೆಯೇ ಕಾರಣ. ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಅದರ ಪ್ರಯೋಜನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮಹತ್ವದ ಜವಾಬ್ದಾರಿಯನ್ನು ಸಂಬಂಧಿಸಿದ ಅಧಿಕಾರಿಗಳು ನಿರ್ವಹಿಸಿದ್ದಾದಲ್ಲಿ ಜನರ ಬಹುಪಾಲು ಸಮಸ್ಯೆ ನೀಗಲಿದೆ ಎಂದರು.
ಸಮಸ್ಯೆಗೆ ಸ್ಪಂದಿಸಿ: ಬಡಜನರ ಕುರಿತು ಅಧಿಕಾರಿ ವಲಯದಲ್ಲಿ ಕಳಕಳಿ ಹಾಗೂ ಕಾಳಜಿ ಮೂಡಬೇಕಿದೆ. ಅವರ ಅವಶ್ಯಕ ಕೆಲಸಗಳಿಗೆಂದು ಕಚೇರಿಗೆ ಬಂದಾಗ ಸತಾಯಿಸದೆ, ಸಮಯಕ್ಕೆ ಸರಿಯಾಗಿ ಕೆಲಸ ಮಾಡಿಕೊಡುವ ಮೂಲಕ ಅವರ ನೆರವಿಗೆ ಮುಂದಾದಲ್ಲಿ ಸರ್ಕಾರದ ಮಹತ್ವಪೂರ್ಣ ಯೋಜನೆಗಳು ಯಶಸ್ವಿಯಾಗಲಿದೆ. ಪ್ರತಿಯೊಬ್ಬರೂ ಯೋಜನೆಯ ಲಾಭ ಪಡೆದಾಗ ಬದುಕಿನಲ್ಲಿ ಬದಲಾವಣೆ ಕೂಡ ಸಾಧ್ಯ ಎಂದರು.
ಈ ಹಿಂದೆ ಐದು ವರ್ಷ ಸಚಿವನಾಗಿದ್ದ ಕಾಲದಲ್ಲಿ ಅಧಿಕಾರಿಗಳ ಕಾರ್ಯವ್ಯಾಪ್ತಿಯಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಮುಂದಿನ ಐದು ವರ್ಷವೂ ಯಾವ ಇಲಾಖೆಗಳ ಕಾರ್ಯದಲ್ಲೂ ಕೈಹಾಕುವುದಿಲ್ಲ. ಆದರೆ, ಬಡಜನರ, ಕಷ್ಟ ಎಂದು ಬರುವವರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ ಶಾಸಕರು, ತಾಲೂಕಿನಲ್ಲಿ ಜನಪರ ಅಭಿವೃದ್ಧಿ ಕಾರ್ಯಗಳು ಅನುಷ್ಠಾನವಾಗಬೇಕೇ ಹೊರತು ಇನ್ನುಳಿದಂತೆ ಜನವಿರೋಧಿ ಕಾರ್ಯಗಳು ನಡೆಯುವ ಕುರಿತು ದೂರು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ತಾಪಂ ಅಧ್ಯಕ್ಷೆ ಉಷಾ ಬಿಳೆಕುದರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಗಂಧಾಬಾಯಿ ಘೋಡಕೆ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜ ಆಡಿನ, ಸದಸ್ಯರಾದ ಶಶಿಧರ ಹೊನ್ನಣ್ಣವರ, ಸಿ.ಎಸ್. ಪಾಟೀಲ, ತಾಪಂ ಸದಸ್ಯರಾದ ಲಕ್ಷ್ಮೀ ತೋಟದ, ಸುಜಾತ ಕಲಕಟ್ಟಿ, ತಿಪ್ಪಣ್ಣ ಸಾತಣ್ಣವರ, ನಿಂಗಪ್ಪ ಜವಳಿ, ವೀರನಗೌಡ ಪಾಟೀಲ, ನಿಂಗಪ್ಪ ಹರಿಜನ, ಕಾರ್ಯನಿರ್ವಾಹಕ ಅಧಿಕಾರಿ ಬಿ. ರೇವಣ್ಣ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

