ಖಾಸಗೀಕರಣ ನಿಲ್ಲಲಿ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜೂ. 6
ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರವನ್ನು ವ್ಯಾಪಾರಿಕರಣ, ಖಾಸಗೀಕರಣ, ಕೇಸರಿಕರಣಗೊಳಿಸಿದ್ದ ಹಿಂದಿನ ಸರ್ಕಾರದ ನೀತಿಗಳನ್ನು ಬದಲಾಯಿಸಿ ಶಿಕ್ಷಣ ಕ್ಷೇತ್ರವನ್ನು ಶುದ್ಧೀಕರಿಸಬೇಕೆಂದು ಎಸ್ಎಫ್ಐ ಸಂಘಟನೆಯು ಗುರುವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸಿದೆ.
ಎಸ್ಎಫ್ಐ ನಗರ ಸಮಿತಿಯ ನೇತೃತ್ವದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳ ರ್ಯಾಲಿಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳಿಕ ವಿಶೇಷ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಂಘಟನೆಯ ನಗರ ಸಮಿತಿ ಉಪಾದ್ಯಕ್ಷ ಶಿವಾನಂದ ಭೋಸಲೆ ಮಾತನಾಡಿ, ಸಂವಿಧಾನ ಬದ್ಧ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ)ಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಬದಲಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲಕರವಾಗುವಂತೆ ನಿಯಮಾವಳಿಯನ್ನು ಹಿಂದಿನ ಸರ್ಕಾರ ರೂಪಿಸಿತ್ತು. ಸರ್ಕಾರದ ಈ ನೀತಿಯಿಂದಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿತ್ತು. ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಇಂತಹ ಅವೈಜ್ಞಾನಿಕ ಶಿಕ್ಷಣ ನೀತಿ ಕೈಬಿಟ್ಟು ಆರ್ಟಿಇ ನಿಯಮಾವಳಿಯಂತೆ ಶೈಕ್ಷಣಿಕ ಕ್ಷೇತ್ರವನ್ನು ಪಾರದರ್ಶಕವನ್ನಾಗಿಸಬೇಕು. ಜತೆಗೆ ವಿದ್ಯಾರ್ಥಿಗಳಿಗೆ ಪೆಡಂಭೂತದಂತೆ ಕಾಡುತ್ತಿರುವ ಡೊನೇಶನ್ ಹಾವಳಿಗೆ ಕಡಿವಾಣ ಹಾಕಿ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸರ್ಕಾರ ಮುನ್ನುಡಿಯಾಗಬೇಕು ಎಂದರು.
ನಗರ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಮಾನವ್ವ ರಾಠೋಡ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇವೆ ಎಂಬ ನೆಪವೊಡ್ಡಿ ಶಾಲೆಗಳನ್ನು ಮುಚ್ಚುವ ಪ್ರಯತ್ನ ಕೈಬಿಟ್ಟು ಶಾಲೆಗಳಿಗೆ ಮೂಲ ಸೌಕರ್ಯ ನೀಡುವಲ್ಲಿ ಶಿಕ್ಷಣ ಸಚಿವರು ಮುಂದಾಗಲಿ. ಜತೆಗೆ ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆ ಸರಿಪಡಿಸಲು ಶಿಕ್ಷಣ ಇಲಾಖೆ ಮುಂದಾಗದಿದ್ದರೆ ಸಂಘಟನೆ ವತಿಯಿಂದ ರಾಜ್ಯಾದ್ಯಾಂತ ಉಗ್ರ ಪ್ರತಿಭಟನೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನಾ ನಿರತರ ಸ್ಥಳಕ್ಕೆ ವಿಶೇಷ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಎಸ್.ಎನ್. ನದಾಫ ಆಗಮಿಸಿ ಮನವಿ ಸ್ವೀಕರಿಸಿ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು. ಶಿವಾಜಿ ಗಡ್ಡದ, ಕಳಕೇಶ ರಾಠೋಡ, ರಮೇಶ ಗಡಾದ, ಪ್ರವೀಣ ಹಳಕಟ್ಟಿ, ವೆಂಕಟೇಶ ಚಿನ್ನೂರ, ಹರೀಶ ಮದ್ದಿನೇನಿ, ಮಂಜು ಹಾಳಕೇರಿ, ನಾರಾಯಣ ಭೋಸಲೆ, ಮಹೇಶ ಸಿಂದೆ, ದಾವಲಸಾಬ ತಾಳಿಕೋಟಿ, ಲಚ್ಚಪ್ಪ ಇಂಜನಿ, ಮುನಿರಾಜು ಮಲಕೋಜಿ, ಕಲ್ಲೇಶಿ ಇಳಕಲ್ ಇನ್ನಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

