ಗದಗ

ಕರ್ತವ್ಯ ಮರೆತರೆ ಕಠಿಣ ಕ್ರಮ: ಎಸಿ ಎಚ್ಚರಿಕೆ

Published On :

ಕನ್ನಡಪ್ರಭ ವಾರ್ತೆ, ರೋಣ, ಜೂ. 6
ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂದರ್ಭದಲ್ಲಿ ತಾಲೂಕಿನ ವಿವಿಧ ಇಲಾಖೆಯ ಮುಖ್ಯ ಅಧಿಕಾರಿಗಳು ತಮ್ಮ ಮುಖ್ಯ ಕಚೇರಿಯಲ್ಲಿದ್ದು ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ಕೂಡಲೇ ಪರಿಹಾರ ಒದಗಿಸುವ ದಿಶೆಯಲ್ಲಿ ಕಾರ್ಯನಿರ್ವಹಿಸಬೇಕು. ವಿಳಂಬ ನೀತಿ ಅನುಸರಿಸಿ ಕರ್ತವ್ಯ ಮರೆತಲ್ಲಿ ಅಂತಹ ಅಧಿಕಾರಿಗಳನ್ನು ನಿರ್ದಾಕ್ಷಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಇಸ್ಲಾವುದ್ದಿನ್ ಗದ್ಯಾಳ ಎಚ್ಚರಿಕೆ ನೀಡಿದರು.
ಅವರು ಗುರವಾರ ತಹಸೀಲ್ದಾರ್ ಕಚೇರಿಯಲ್ಲಿ ಬರನಿರ್ವಹಣೆ ಕುರಿತು ಗುರುವಾರ ಸಂಜೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಮುಖ್ಯ ಅಧಿಕಾರಿಗಳ ಸಭೆಯಲ್ಲಿ ಇಲ್ಲಿಯವರೆಗಿನ ಆಯಾ ಇಲಾಖೆಯ ಪ್ರಗತಿ ವರದಿ ಪರೀಶಿಲಿಸಿ ಮಾತನಾಡಿದರು.
ತಾಲೂಕಿನ ಅನೇಕ ಕಡೆಗಳಲ್ಲಿ ಬೆಂಕಿ ಅನಾಹುತದಿಂದ ರೈತರು ಅಪಾರ ಪ್ರಮಾಣದ ಮೇವು, ಹೊಟ್ಟು ಹಾಗೂ ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಆದರೆ, ಈವರೆಗೂ ಈ ಮಾಹಿತಿ ನಮ್ಮ ಗಮನಕ್ಕೆ ಏಕೆ ತಂದಿಲ್ಲ, ಪರಿಹಾರ ವಿತರಿಸುವಲ್ಲಿ ಏಕೆ ವಿಳಂಬ ಮಾಡಿದ್ದೀರಿ ಎಂದು ಸ್ಥಳದಲ್ಲಿದ್ದ ತಹಸೀಲ್ದಾರ್ ಸಿಬ್ಬಂದಿ ಸತೀಶ, ಕೃಷಿ ಸಹಾಯಕ ನೀರ್ದೇಶಕ ಎಸ್.ಎ. ಸೂಡಿಶೆಟ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡು, ತಕ್ಷಣವೇ ಈ ಕುರಿತು ಸಮಗ್ರ ಮಾಹಿತಿ ನೀಡಬೇಕು. ತೊಂದರೆಗೆ ಒಳಗಾದ ಜನತೆ ಮತ್ತು ರೈತರಿಗೆ ಸ್ಪಂದಿಸಿ ಪರಿಹಾರ ನೀಡಿದ್ದಲ್ಲಿ ಅವರ ಸಂಕಷ್ಟಕ್ಕೆ ಸರ್ಕಾರ ನೆರವಾದಂತಾಗುತ್ತದೆ. ಆ ದಿಶೆಯಲ್ಲಿ ಅಧಿಕಾರಿಗಳ ಕಾರ್ಯ ಮುಖ್ಯವಾಗಿದೆ ಎಂದರು.
ಸಮರ್ಪಕ ಬೀಜ ವಿತರಿಸಿ: ಸತತ ಮಳೆಯ ಕೊರತೆಯಿಂದ ರೈತ ಸಮುದಾಯ ತತ್ತರಿಸಿದ್ದು, ಈ ಸಾರಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ರೈತರಿಗೆ ಬೀಜ-ಗೊಬ್ಬರ ಸಮರ್ಪಕವಾಗಿ ವಿತರಿಸಬೇಕು. ರೈತರಿಂದ ಯಾವುದೇ ದೂರು ಬಾರದಂತೆ ಮುಂಜಾಗ್ರತೆ ವಹಿಸಬೇಕು ಎಂದು ಕೃಷಿ ಅಧಿಕಾರಿ ಎಸ್.ಎ. ಸೂಡಿಶೆಟ್ಟರ್‌ಗೆ ಸೂಚಿಸಿದಾಗ, ಸರಾಸರಿ 101.5 ಮೀ.ಮೀ. ಮಳೆಯಾಗಿದೆ. ರೈತರು ಹೆಸರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ತಾಲೂಕಿನಲ್ಲಿ 3 ರೈತ ಸಂಪರ್ಕ ಕೇಂದ್ರ ತೆರೆಯಲಾಗಿದ್ದು, ಆ ಮೂಲಕ ಬೀಜ ವಿತರಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಲ್ಲಿ ಶೇಂಗಾ ಮತ್ತು ಮೆಕ್ಕೆಜೋಳ ಬಿತ್ತನೆ ಮಾಡುತ್ತಾರೆ ಎಂದರು.
ಮುಖ್ಯಾಧಿಕಾರಿ ತರಾಟೆಗೆ: ಪುರಸಭೆ ಮುಖ್ಯಾಧಿಕಾರಿ ವಿ.ರಾಮಸ್ವಾಮಿ ಅವರು ಮುಖ್ಯ ಕಚೇರಿಯಲ್ಲಿ ಇರಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸಲ್ಲ. ನಿತ್ಯ ಜನರಿಂದ ದೂರವಿರುವರು. ಅಲ್ಲದೇ ರೋಣ ಪಟ್ಟಣದ ಜನತೆ ನಿತ್ಯ ನೀರಿಗಾಗಿ ಪರದಾಡುತ್ತಿದ್ದರೂ ನೀವೇಕೇ ಕಚೇರಿಯಲ್ಲಿ ಕುಳಿತುಕೊಳ್ಳುವುದಿಲ್ಲ. ನಾನು ನಿಮಗೆ ಎಷ್ಟು ಕಚೇರಿಯಲ್ಲಿ ಕುಳಿತು ಜನತೆ ಸಮಸ್ಯೆ ಆಲಿಸಿ ಎಂದು ಎಷ್ಟು ಸಾರಿ ಸೂಚಿಸಿಬೇಕು. ಇನ್ನು ಮುಂದೆ ಈ ರೀತಿ ಮಾಡಿದಲ್ಲಿ ಅಮಾನತು ಮಾಡಲಾಗುವದು ಎಂದು ಎಚ್ಚರಿಸಿದರು.
ಸಿದ್ಧರಾಗಿ: ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯಿದ್ದು, ಆ ಸಂದರ್ಭದಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿದು ಗ್ರಾಮಸ್ಥರಿಗೆ ತೊಂದರೆಯಾಗುವ ಸಂದರ್ಭ ಒದಗಿ ಬರುವ ಮೊದಲೇ ಎಲ್ಲಾ ಅಧಿಕಾರಿಗಳು ಮುಂಜಾಗ್ರತರಾಗಿ ಯೋಜನೆ ತಯಾರಿಸಿ ಅದಕ್ಕೆ ಅಗತ್ಯವಿರುವ ಸಾಮಗ್ರಿ ಮೊದಲೇ ಸಿದ್ಧಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮತಗಟ್ಟೆ ಬದಲಾವಣೆಗೆ ಅವಕಾಶ: ಕಳೆದ ಚುನಾವಣೆಯಲ್ಲಿ ತೊಂದರೆಯಾದ ಮತಗಟ್ಟೆ ಹಾಗೂ ಸೌಲಭ್ಯ ಕೊರತೆಯಿದ್ದ ಮತಗಟ್ಟೆಗಳನ್ನು ಬದಲಾಯಿಸಲು ಸದ್ಯದಲ್ಲಿ ಅವಕಾಶವಿದೆ. ಕೂಡಲೇ ಅಂತಹ ಮತಗಟ್ಟೆಗಳನ್ನು ಪಟ್ಟಿ ಮಾಡಿ ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಲು ಅವಕಾಶವಿದೆ ಎಂದು ಎಸಿ ಇಸ್ಲಾವುದ್ದಿನ್ ಗದ್ಯಾಳ ತಿಳಿಸಿದರು.
ತಹಸೀಲ್ದಾರ್ ಎಂ.ಬಿ. ಪಾಟೀಲ, ಎಸ್.ಎ. ಸೂಡಿಶೆಟ್ಟರ್, ಪ್ರಶಾಂತ ವರಗಪ್ಪನವರ, ಪಿ.ಎಚ್. ಕಡಿವಾಲ, ವಿ.ರಾಮಸ್ವಾಮಿ, ಐ.ಕೆ. ಗುಡದಾರಿ, ಎಂ.ಎಚ್. ಬಿಳಗಿ, ಪಿಎಸ್‌ಐ ಎಂ.ಎನ್. ಹತ್ತಿಕಟಗಿ, ಎಂ.ಡಿ. ತೇಗುಣಸಿ, ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆಯ ಮುಖ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.