ಗದಗ

ಮಠಗಳು ಸಾಮಾಜಿಕ ಸೇವೆಗೆ ಪ್ರಾಧಾನ್ಯ ನೀಡಲಿ

Published On :

ಕನ್ನಡಪ್ರಭ ವಾರ್ತೆ, ಗದಗ, ಜೂ. 6
ಮಠಗಳು ಸಾಮಾಜಿಕ ಸೇವೆಗೆ ಹೆಚ್ಚಿನ ಪ್ರಾಧಾನ್ಯ ನೀಡಿ ಎಲ್ಲರ ಬದುಕಿನಲ್ಲಿ ಹೊಸತನ ಮೂಡಿಸಲಿ ಎಂದು ಬಳಗಾನೂರಿನ ಶಿವಶಾಂತವೀರ ಶರಣರು ಹೇಳಿದರು.
ಅವರು ಗುರುವಾರ ಗದಗ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಜಗದ್ಗುರು ಬೂದೀಶ್ವರ ಜಾತ್ರೆ ಅಂಗವಾಗಿ ಸರ್ವಧರ್ಮದವರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವೀರಶೈವ ಮಠಗಳು, ಮಠಾಧೀಶರು ಬಡವರ ಉದ್ಧಾರ, ಆರ್ಥಿಕ ಭದ್ರತೆಗಾಗಿ ಸಾಮೂಹಿಕ ವಿವಾಹಗಳಂಥ ಸಮಾಜಮುಖಿಯ ಕೆಲಸಗಳನ್ನು ಜಾತ್ರಾ ಮಹೋತ್ಸವದಲ್ಲಿ ನೇರವೇರಿಸುವುದರಿಂದ ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಂತಾಗುತ್ತದೆ. ಅಕ್ಷರ ದಾಸೂಹ, ಬಡ ಮಕ್ಕಳಿಗೆ ಆಶ್ರಯ, ಬಡ ಕುಟುಂಬಗಳಿಗೆ ಸಹಾಯ ಹಸ್ತವನ್ನು ನೀಡುವಲ್ಲಿ ಮಠಗಳು ಮುಂದಾದರೆ ದೇಶದ ಬಡತನ ನಿವಾರಣೆಗೆ ಮಠಗಳು ಸ್ಪಂದಿಸಿದಂತಾಗುತ್ತವೆ. ಈ ಹಿನ್ನೆಲೆಯಲ್ಲಿ ಹೊಸಹಳ್ಳಿ ಬೂದೀಶ್ವರ ಸಂಸ್ಥಾನಮಠದ ಜಾತ್ರಾ ಮಹೋತ್ಸವ ಸಮಾಜ ಮುಖಿಯಾಗಿ ಬೆಳೆಯುತ್ತಿರುವುದು ಈ ನಾಡಿನ ಭಾಗ್ಯ ಎಂದರು. ಶ್ರೀ ಮಠದ ಶ್ರೀ ಜಗದ್ಗುರು ಬೂದೀಶ್ವರ ಮಹಾಸ್ವಾಮಿಗಳು, ಸಮಾಜ ಮತ್ತು ಭಕ್ತರನ್ನು ಸಮಾನವಾಗಿ ಕರೆದ್ಯೊಯಲು ಧರ್ಮಾಧಿಕಾರಿಗಳು ಬೇಕು. ಭಕ್ತರ ದಾನಗಳಿಂದ ಮಠಗಳ ಬೆಳವಣಿಗೆ ಸಾಧ್ಯವಾದಂತೆ, ಸ್ವಾಮಿಗಳು ಕ್ರಿಯಾಶೀಲ ಕಾರ್ಯಗಳಲ್ಲಿ ತೊಡಗಲು ಸಾಧ್ಯವಾಗುತ್ತದೆ. ಸ್ವಾಮಿಗಳು ಜೋಳಿಗೆಯ ಭಿಕ್ಷೆಯ ಮೂಲಕ ಬಂದ ಹಣದಿಂದ ಸಮಾಜದ ಆರ್ಥಿಕ ಸಮತೋಲನೆಗೆ ಪೂರಕವಾಗುವ ಸಾಮೂಹಿಕ ವಿವಾಹ ಶಿಕ್ಷಣ ಪ್ರಸಾರ ಆರೋಗ್ಯ ತಪಾಸಣೆ ಇಂತಹ ಹಲವು ಸಮಾಜಮುಖಿ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದರು.
ಕಮತಗಿಯ ಹುಚ್ಚೇಶ್ವರ ಸ್ವಾಮಿಗಳು, ದೇಶಕ್ಕೆ ಬರಗಾಲವಿದ್ದರೂ ಭಕ್ತರ ಮನಸ್ಸಿಗೆ, ದಾನಕ್ಕೆ, ಭಿಕ್ಷೆಗೆ ಬರಗಾಲವಿಲ್ಲ. ಭಕ್ತರ ನಿಸ್ವಾರ್ಥ ಸೇವೆಯಿಂದ ಮಠಗಳಲ್ಲಿ ಸಾಮಾಜಿಕ ಕೆಲಸಗಳು ಯಾವುದೇ ಅಡತಡೆ ಇಲ್ಲದೆ ನಿರಂತರವಾಗಿ ಸಾಗಲು ಸಾಧ್ಯ. ಬೂದೀಶ್ವರ ಸಂಸ್ಥಾನಮಠವು ಹತ್ತು ಹಲವಾರು ಕಾರ್ಯಗಳನ್ನು ಕೆಲವೇ ದಿನಗಳಲ್ಲಿ ಮಾಡಿದೆ ಎಂದರು. ಸಾಮೂಹಿಕ ವಿವಾಹದ ವೈದಿಕ ಕಾರ್ಯವನ್ನು ಶ್ರೀಶೈಲ ಹಿರೇಮಠ, ದುಂಡಯ್ಯ ಯಡ್ರಾವಿ, ಪ್ರಭು ಹಿರೇಮಠ ನೇರವೆರಿಸಿದರು.
ದಾಸೋಹ ಸೇವೆಗೈದ ದಾನಿಗಳಾದ ಸಂಗಪ್ಪಜ್ಜ ಅಂಗಡಿ ಹಾಗೂ ವಿಜಯಕುಮಾರ ಗಡ್ಡಿ, ಅಪ್ಪಣ್ಣ ಇನಾಮತಿ, ಶಿವಾನಂದ ಕರಿಗಾರ, ಮಲ್ಲಣ್ಣ ಸಿಕ್ಕೆದೇಸಾಯಿ, ಎಸ್.ಎಸ್. ಪಾಟೀಲ, ಉಮೇಶ ರೊಳ್ಳಿ ಸೇರಿದಂತೆ ಹಲವಾರು ಗಣ್ಯರನ್ನು ಸನ್ಮಾನಿಸಲಾಯಿತು. ಡಾ. ಶರಣಬಸವ ವೆಂಕಟಾಪುರ ಪ್ರಾಸ್ತಾವಿಕ ಮಾತನಾಡಿದರು. ಕ್ರಾಂತಿ ಸೈನ್ಯ ಜಾನಪದ ತಂಡದಿಂದ ಪ್ರಾರ್ಥನೆ ಜರುಗಿತು. ಶಿವಲಿಂಗಶಾಸ್ತ್ರಿಗಳು ಸಿದ್ದಾಪುರ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.