ಗದಗ

ಏತ ನೀರಾವರಿ ಕಾಲುವೆ ಕಿತ್ತು ಹಾಕಿದ ರೈತರು

Published On :

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜೂ. 7
ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಪ್ರಾಯೋಗಿಕ ಬಿಡಲಾಗಿದ್ದ ನೀರಿಗೆ ರೈತರು ಅಡ್ಡಗಟ್ಟಿ ಕಾಲುವೆಗಳನ್ನು ಕಿತ್ತು ಹಾಕಿದ್ದಾರೆ.
ತಾಲೂಕಿನ ನಂದಿಹಳ್ಳಿ-ಮುದೇನೂರು ಕೆರೆಯ ಪಕ್ಕದಲ್ಲಿ ನಿರ್ಮಾಣಗೊಂಡಿದ್ದ ಕಾಲುವೆಯ ನೀರನ್ನು ಎಲ್ಲ ಕಡೆಗಳಿಗೆ ಪೂರೈಕೆಯಾಗಲು ಗೇಟ್ ಅಳವಡಿಸಿದ್ದರೂ ಆ ಭಾಗದ ಕೆಲವು ರೈತರು ಕಾಲುವೆಯನ್ನು ಜೆಸಿಬಿ ಯಂತ್ರದಿಂದ ಕಿತ್ತು ಹಾಕಿದ್ದಾರೆ.
ಈ ಕುರಿತು ಯೋಜನೆ ಕಾರ್ಯಪಾಲಕ ಅಭಿಯಂತರ ಓದೋ ಗಂಗಪ್ಪರನ್ನು ಸಂಪರ್ಕಿಸಿದಾಗ, 2ನೇ ಹಂತದ ನೀರೇತ್ತುವ ಘಟಕದಿಂದ ಪ್ರಾಯೋಗಿಕವಾಗಿ ಕಾಲುವೆ ಕಾಮಗಾರಿ ಪರೀಕ್ಷೆಗಾಗಿ ನೀರು ಬಿಡಲಾಗಿತ್ತು. ಆ ನೀರು ಮುಂದಕ್ಕೆ ಹೋಗದಂತೆ ತಡೆಯೊಡ್ಡಿ ನೀರು ಪೂರ್ಣ ಕೆರೆಗೆ ಹೋಗಬೇಕೆಂಬ ಉದ್ದೇಶದಿಂದ ರೈತರು ಕಾಲುವೆ ಕಿತ್ತು ಹಾಕಿದ್ದಾರೆಂದು ತಿಳಿಸಿದ್ದಾರೆ.
ಇತರೆ ಕಡೆಗಳಲ್ಲಿ ರೈತರು ಪದೇ ಪದೇ ಕಾಲುವೆಗಳನ್ನು ಕಿತ್ತು ಹಾಕುತ್ತಿದ್ದರೆ ಮರು ನಿರ್ಮಾಣಕ್ಕೆ ಅನುದಾನ ಲಭ್ಯತೆ ಇರುವುದಿಲ್ಲ. ಆದ್ದರಿಂದ ರೈತರು ಈ ಯೋಜನೆ ತಮ್ಮ ಆಸ್ತಿ ಎಂದು ತಿಳಿದುಕೊಂಡು ಸಮರ್ಪಕ ರೀತಿಯಲ್ಲಿ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎನ್ನುತ್ತಾರೆ.
ತಾಲೂಕಿನಲ್ಲಿ 24 ಸಾವಿರ ಎಕರೆ ಜಮೀನಿಗೆ ನೀರುಣಿಸುವ ಯೋಜನೆ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಮುಖ್ಯ ಕಾಲುವೆ, ಉಪ ಕಾಲುವೆ ಮತ್ತು ಹೊಲಗಾಲುವೆಗಳನ್ನು ನಿರ್ಮಾಣ ಮಾಡಲಾಗಿದೆ. ಕಳೆದ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕರು ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದ ವೇಳೆ, ತಾವು ಮತ್ತು ತಮ್ಮ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದಾಗ ರೈತರು ಕಾಲುವೆಯನ್ನು ಕಿತ್ತು ಹಾಕಿದ್ದಾರೆ ಎಂದು ತಿಳಿಸಿದರು.
ಇಲಾಖೆ ಯಾವ ರೈತರ ಮೇಲೆ ದೂರು ಸಲ್ಲಿಸಬೇಕೆಂದು ತಿಳಿದಂತಾಗಿದೆ. ಇನ್ನೊಂದು ಕಡೆ ಸರ್ಕಾರ ಕೋಟ್ಯಂತರ ರು.ಗಳ ವೆಚ್ಚ ಮಾಡಿ ನಿರ್ಮಾಣ ಮಾಡಿದ್ದ ಕಾಲುವೆಗಳನ್ನು ಕಿತ್ತು ಹಾಕುತ್ತಿದ್ದರೇ ಯಾರು ಜವಾಬ್ದಾರಿವಹಿಸುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಯೋಜನೆ ಸದುಪಯೋಗಕ್ಕೆ ರೈತರು ಮತ್ತು ಅಧಿಕಾರಿಗಳ ಮಧ್ಯ ಸಹಕಾರ ಇರಬೇಕು. ಆಗ ಇಂತಹ ಯೋಜನೆಗಳು ಜನರಿಗೆ ಮುಟ್ಟಲು ಸಾಧ್ಯ ಎನ್ನುತ್ತಾರೆ.
506 ಮೀಟರ್ ನೀರು ನಿಲುಗಡೆ: ತಾಲೂಕಿನ 24 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಲು ಯೋಜನೆ ಸಜ್ಜಾಗಿದೆ. ಈ ಬಾರಿ ಬ್ಯಾರೇಜ್‌ನಲ್ಲಿ 506 ಮೀಟರ್ (ಎಫ್‌ಆರ್‌ಎಲ್) ನೀರು ನಿಲುಗಡೆ ಮಾಡಲಾಗುವುದು. ಇದರಿಂದ ಮುಳುಗಡೆಯಾಗಿರುವ ಅಲ್ಲಿಪುರ, ಗುಮ್ಮಗೊಳ ಮತ್ತು ಬಿದರಹಳ್ಳಿ ಗ್ರಾಮಗಳ ಪ್ರದೇಶಕ್ಕೆ ನೀರು ನುಗ್ಗುವುದಿಲ್ಲ ಎಂದು ಓದೋಗಂಗಪ್ಪ ತಿಳಿಸಿದರು.
ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕಾಲುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಆ ಭಾಗದ 1.20 ಲಕ್ಷ ಒಣ ಭೂಮಿಗೆ ನೀರುಣಿಸಲಾಗುವುದು. ಆ ಭಾಗ ಕಾಮಗಾರಿ ಪೂರ್ಣಗೊಂಡ ನಂತರದಲ್ಲಿ 509 ಮೀಟರ್ ಮಟ್ಟಕ್ಕೆ ನೀರು ನಿಲುಗಡೆ ಮಾಡಲಾಗುವುದು ಎಂದು ಓದೋ ಗಂಗಪ್ಪ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.