ಗದಗ

ಕಪ್ಪತಗುಡ್ಡ: ವನ್ಯಜೀವಿ ಧಾಮವನ್ನಾಗಿಸಬೇಡಿ

Published On :

ಕನ್ನಡಪ್ರಭ ವಾರ್ತೆ, ಗದಗ, ಜೂ. 8
ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವನ್ನಾಗಿ ಘೋಷಿಸದಂತೆ ಆಗ್ರಹಿಸಿ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು, ಅಲ್ಪಸಂಖ್ಯಾತ ಸಮುದಾಯ, ಕುರುಬ ಜನಾಂಗದವವರು ಇತ್ತೀಚಿಗೆ ಬೆಂಗಳೂರಿನ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಬಂಜಾರಾ ಸೇವಾ ಸಂಘದ ಅಧ್ಯಕ್ಷ ಮೋತಿಲಾಲ ಮಾಳಗಿಮನಿ ಮಾತನಾಡಿ, ಜಿಲ್ಲೆಯ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕುಗಳು ಕಳೆದ ಅನೇಕ ದಶಕಗಳಿಂದ ಬರಗಾಲದ ಹಣೆಪಟ್ಟಿಯನ್ನು ಕಟ್ಟಿಕೊಂಡಿವೆ. ಈ ಪ್ರದೇಶದಲ್ಲಿನ ಬಹುತೇಕ ಜನರು ಹಿಂದುಳಿದ ವರ್ಗದ ಕುರುಬರು, ಲಂಬಾಣಿಗಳು, ವಾಲ್ಮೀಕಿ ಜನಾಂಗ ಸೇರಿದಂತೆ ಹಿಂದುಳಿದ ವರ್ಗದ ಜನರು ವಾಸಿಸುತ್ತಿದ್ದಾರೆ. ಈ ಜನರು ತಮ್ಮ ಜಾನುವಾರುಗಳನ್ನು ಕಪ್ಪತ್ತಗುಡ್ಡದಲ್ಲಿ ಬೆಳೆಯುವ ಹುಲ್ಲನ್ನು ಉಪಯೋಗಿಸಿಯೇ ಸಾಕುತ್ತಿದ್ದಾರೆ.
ಈ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವನ್ನಾಗಿ ಘೋಷಿಸಿದಲ್ಲಿ ಜನರನ್ನು ಕಪ್ಪತ್ತಗುಡ್ಡದಿಂದ ಹೊರಗಿಡಲಾಗುತ್ತದೆ. ಇದರಿಂದ ಈ ಭಾಗದ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕಪ್ಪತ್ತಗುಡ್ಡದಲ್ಲಿ ಒಂದೇ ಒಂದು ವನ್ಯಜೀವಿಯಿಲ್ಲ. ಕಳೆದ ಅನೇಕ ದಶಕಗಳಿಂದ ಕಪ್ಪತ್ತಗುಡ್ಡದಲ್ಲಿ ವನ್ಯಪ್ರಾಣಿಗಳಿಂದ ಒಂದೂ ಜೀವ ಹಾನಿಯಾಗಿಲ್ಲ. ಕೆಲ ಢೋಂಗಿ ಪರಿಸರವಾದಿಗಳು ಕಪ್ಪತ್ತಗುಡ್ಡದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಈ ಜನರು ದಲಿತ ವರ್ಗವನ್ನು ದಮನ ಮಾಡುವ ಮೂಲಕ ಅವರ ಮೇಲೆ ಪ್ರಭುತ್ವ ಸಾಧಿಸಲು ಹವಣಿಸುತ್ತಿದ್ದಾರೆ. ಏನೇ ಆಗಲಿ ಈ ಹಿತಾಸಕ್ತಿಗಳಿಗೆ ಕಪ್ಪತ್ತಗುಡ್ಡದಿಂದ ಲಂಬಾಣಿಗಳು, ಹಿಂದುಳಿದವರನ್ನು ಹೊರಗೆ ಹಾಕುವುದು ಏಕೈಕ ಉದ್ದೇಶವಾಗಿದೆ ಎಂದು ಆರೋಪಿಸಿದರು. ಗದಗ ಜಿಲ್ಲಾ ಬಂಜಾರಾ ರೈತ ವೇದಿಕೆ ಸಂಚಾಲಕ ಸಿ. ಲಕ್ಷ್ಮಣ ಮಾತನಾಡಿ, ಯಾವುದೇ ಕಾರಣಕ್ಕೂ ಲಂಬಾಣಿಗರ ಉಸಿರಾಗಿರುವ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವನ್ನಾಗಿ ಮಾಡಬಾರದು. ಒಂದು ವೇಳೆ ಯಾವುದೇ ಒತ್ತಡಕ್ಕೆ ಮಣಿದು ಸರ್ಕಾರ ಏನಾದರೂ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವನ್ನಾಗಿ ಘೋಷಿಸಿದಲ್ಲಿ ವಿಧಾನಸೌಧದ ಮುಂದೆ ಆಮರಣ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು. ಮೀರುಬಾಯಿ ರಾಠೋಡ ಮಾತನಾಡಿದರು. ಈ ಸಂದರ್ಭದಲ್ಲಿ ಮೈಲಾರಪ್ಪ ಜಾಲಮ್ಮನವರ, ಬಸವರಾಜ ಜಕ್ಕಪ್ಪನವರ, ಶಂಕರಗೌಡ ಜಾಯಿಗೌಡರ, ಪಾಂಡಪ್ಪ ದಾಸರ, ವೆಂಕಪ್ಪ ಎಕಲಾಸಪುರ, ಪರಶುರಾಮ ರಾಠೋಡ, ಶಂಕ್ರವ್ವ ರಾಠೋಡ, ಸಾವಕ್ಕ ನಾಯಕ, ಪಾರವ್ವ ಲಮಾಣಿ, ಎನ್. ಸುರೇಶಕುಮಾರ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.