ಗದಗ

ಸುದ್ದಿ ಸಂಕ್ಷೇಪ

Published On :

ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಹ್ವಾನ
ನರೇಗಲ್ಲ: ನರೇಗಲ್ಲದಲ್ಲಿ ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಈಚೆಗೆ ತಾಲೂಕು ಅಧ್ಯಕ್ಷ ಡಾ. ಶಿವರಾಜ ಗುರಿಕಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ತೀರ್ಮಾನಿಸಿತು. ನರೇಗಲ್ಲ ಮತ್ತು ನರೇಗಲ್ಲ ಪಪಂ ವ್ಯಾಪ್ತಿಯಲ್ಲಿನ ಎಲ್ಲ ಪ್ರಾಥಮಿಕ, ಪ್ರೌಢ ಮತ್ತು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಲಿದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಲು ಇಚ್ಛಿಸುವ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಬಹುತೇಕ ಕನ್ನಡ ನಾಡಿಗೆ ಸಂಬಂಧಿಸಿದ ಹಾಡು, ರೂಪಕ, ನೃತ್ಯಗಳ ಪ್ರದರ್ಶನ ಮಾಡಬಹುದು. ಅದಕ್ಕಾಗಿ ಆಸಕ್ತರು ತಾಲೂಕಿನ ವಿವಿಧ ಸಂಘ-ಸಂಸ್ಥೆಗಳವರು, ಸಾಂಸ್ಕೃತಿಕ ಕಲಾ ಮೇಳದವರು ತಮ್ಮ ವಿವರಗಳನ್ನೊಳಗೊಂಡ ವಿವರವಾದ ಮಾಹಿತಿಯನ್ನು, ತಾವು ಪ್ರದರ್ಶನ ಮಾಡಲಿರುವ ನೃತ್ಯ, ರೂಪಕದ ವಿವರ, ಸಂಬಂಧಿಸಿದವರ ದೂರವಾಣಿ ಸಂಖ್ಯೆಯೊಂದಿಗೆ ಜೂ. 10 ರೊಳಗೆ ತಲುಪುವಂತೆ ಅರುಣ ಕುಲಕರ್ಣಿ, ಶಿಕ್ಷಕರು, ಮಾಲತೇಶ ಕೃಪಾ, ಕಾಲೇಜು ರಸ್ತೆ, ನರೇಗಲ್ಲ-ಕೋಡಿಕೊಪ್ಪ-582119 ತಾ. ರೋಣ, ಜಿ. ಗದಗ ಇಲ್ಲಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9448468136 ಇಲ್ಲಿಗೆ ಸಂಪರ್ಕಿಸಬಹುದು.
ಚನ್ನವೀರಪ್ಪ ನಿಧನ
ಶಿರಹಟ್ಟಿ: ಪಟ್ಟಣದ ಶೆಟ್ಟರ ಓಣಿಯ ನಿವಾಸಿ ಚನ್ನವೀರಪ್ಪ ಶಂಕ್ರಪ್ಪ ಸಂಗಪ್ಪಶೆಟ್ಟರ (48) ಶನಿವಾರ ಬೆಳಗ್ಗೆ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರಿ, ತಂದೆ, ತಾಯಿ ಹಾಗೂ ಸಹೋದರರನ್ನು ಹೊಂದಿದ್ದರು. ಬಸವರಾಜ ಹೊಸೂರ, ಚಂದ್ರಣ್ಣ ನೂರಶೆಟ್ಟರ, ಶಿವಬಸಪ್ಪ ದಶಮನಿ, ಮುತ್ತಣ್ಣ ಮಜ್ಜಿಗಿ, ಕಿರಣ ಗುಗ್ಗರಿ, ಶಿವಪ್ಪ ಅಂಗಡಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
ನಾಳೆ ಗ್ರಂಥಾಲಯ ವರ್ಷಾಚರಣೆ
ರೋಣ: ತಾಲೂಕಿನ ಹೊನ್ನಿಗನೂರ ಗ್ರಾಮದ ಭಗತ್‌ಸಿಂಗ್ ಯುವಕ ಸಂಘವು ಪ್ರಾರಂಭಿಸಿದ ಸಾರ್ವಜನಿಕ ಗ್ರಂಥಾಲಯದ ಪ್ರಥಮ ವರ್ಷಾಚರಣೆಯ ಕಾರ್ಯಕ್ರಮವು ಜೂ. 10 ರಂದು ಜರುಗಲಿದೆ. ಇದರ ಅಂಗವಾಗಿ ಅಂದು ಬೆಳಗ್ಗೆ 10 ಗಂಟೆಗೆ ಗಡ್ಡಿ ಚಕ್ಕಡಿ ಓಡಿಸುವ ಸ್ಪರ್ಧೆಯನ್ನು ಯುವಕ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಶಾಸಕ ಜಿ.ಎಸ್.ಪಾಟೀಲ ನೆರವೇರಿಸುವರು. ಗ್ರಂಥಾಲಯ ವರ್ಷಾಚರಣೆ ಕಾರ್ಯಕ್ರಮದ ಜ್ಯೋತಿಯನ್ನು ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಧಶರಥ ಗಾಣಿಗೇರ ನೆರವೇರಿಸುವರು. ಅತಿಥಿಗಳಾಗಿ ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿರುವರು. ಗಡ್ಡಿ ಚಕ್ಕಡಿ ಓಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ ರು. 20 ಸಾವಿರ, ದ್ವಿತೀಯ ಬಹುಮಾನ ರು. 10 ಸಾವಿರ ಹಾಗೂ ತೃತೀಯ ಬಹುಮಾನ ರು. 5 ಸಾವಿರ ನೀಡಲಾಗುವುದು ಎಂದು ಈರಣ್ಣ ಸೂಳಿಬಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪಘಾತ: ನಾಲ್ವರಿಗೆ ಗಾಯ
ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಹತ್ತಿರ ಶನಿವಾರ ಬೆಳಗ್ಗೆ ಬೈಕ್ ಮತ್ತು ಜೆಸಿಬಿ ನಡುವೆ ಅಪಘಾತ ಸಂಭವಿಸಿ ಮೂರು ಶಾಲಾ ಮಕ್ಕಳು ಸೇರಿದಂತೆ 4 ಜನರು ಗಾಯಗೊಂಡಿರುವ ಘಟನೆ ಸಂಭವಿಸಿದೆ. ಶಾಲಾ ಮಕ್ಕಳು ಶಾಲೆ ಮುಗಿಸಿಕೊಂಡು ಕೊರ್ಲಹಳ್ಳಿಗೆ ಬರುವ ಸಂದರ್ಭ ಬೈಕ್ ಸವಾರ ಈ ಮಕ್ಕಳನ್ನು ಬೈಕ್‌ನಲ್ಲಿ ಹತ್ತಿಸಿಕೊಂಡು ಬರುತ್ತಿರುವಾಗ ಮುಂದೆ ಬಂದಿರುವ ಜೆಸಿಬಿಗೆ ಸಿಲುಕಿ ಅಪಘಾತವಾದ ಪರಿಣಾಮ ಬೈಕ್‌ನ ಮೇಲಿದ್ದ ನಾಲ್ಕು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕೊರ್ಲಹಳ್ಳಿಯ ಪಾಂಡು ಹಡಪದ (12), ಬಸವರಾಜ ಗೋಣನ್ಣನವರ (13), ರಂಗಪ್ಪ ಬೆಟಗೇರಿ (12) ಮತ್ತು ಸುರೇಶ ಶೆಟ್ಟಿ (36) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ತಕ್ಷಣ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಇಬ್ಬರು ಶಾಲಾ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ ಕಳಿಸಲಾಗಿದೆ. ಸ್ಥಳೀಯ ಆಸ್ಪತ್ರೆಗೆ ಶಾಸಕ ರಾಮಕೃಷ್ಣ ದೊಡ್ಡಮನಿ ಭೇಟಿ ನೀಡಿ ಗಾಯಗೊಂಡವರಿಗೆ ಸಾಂತ್ವನ ಹೇಳಿದರು.
ಗುಟ್ಕಾ ಮಾರಾಟ: ಗಜೇಂದ್ರಗಡದಲ್ಲಿ ದಿಢೀರ್ ದಾಳಿ
ಗಜೇಂದ್ರಗಡ: ರಾಜ್ಯದಲ್ಲಿ ಗುಟ್ಕಾ ಮಾರಾಟ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕೆಂದು ರಾಜ್ಯ ಸರ್ಕಾರ ಜಿಲ್ಲಾ ಮತ್ತು ತಾಲೂಕಾಡಳಿತಕ್ಕೆ ಆದೇಶಿಸಿದ ಬೆನ್ನಲ್ಲೇ ರೋಣ ತಹಸೀಲ್ದಾರ್ ಎಂ.ಬಿ. ಪಾಟೀಲ ನೇತೃತ್ವದ ತಂಡ ಪೊಲೀಸರ ನೆರವಿನೊಂದಿಗೆ ಶನಿವಾರ ಪಟ್ಟಣದ ಗುಟ್ಕಾ ಮಾರಾಟ ಅಂಗಡಿಗಳ ಮೇಲೆ ದಿಢೀರನೆ ದಾಳಿ ನಡೆಸಿದರು. ರೋಣ ರಸ್ತೆ, ಬಸ್ ನಿಲ್ದಾಣದ ರಸ್ತೆ, ಜೋಡು ರಸ್ತೆ, ಕೊಳ್ಳಿಯವರ, ಕತ್ರಿ ಸೇರಿದಂತೆ ಪ್ರಮುಖ ಕಿರಾಣಿ ಅಂಗಡಿ, ಪಾನ್ ಬೀಡಾ ಅಂಗಡಿಗಳ ಮೇಲೆ ದಾಳಿ ನಡೆಸಿ ರು. 25 ಸಾವಿರಕ್ಕೂ ಅಧಿಕ ಮೌಲ್ಯದ ಗುಟ್ಕಾ ಪ್ಯಾಕೇಟ್‌ಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ಗುಟ್ಕಾ ಮಾರಾಟ ಮಾಡದಂತೆ ಎಚ್ಚರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಟ್ಕಾ ಸಂಪೂರ್ಣ ನಿಷೇಧಿಸುವ ಕುರಿತು ಜಿಲ್ಲಾಡಳಿತ ಆಯಾ ತಾಲೂಕಾಡಳಿತಕ್ಕೆ ಆದೇಶಿಸಿದ್ದು, ಗುಟ್ಕಾ ಮಾರಾಟ ಮತ್ತು ಸೇವನೆ ನಿಷೇಧ ಕುರಿತು ಬಿತ್ತಿ ಪತ್ರ ಮತ್ತು ಧ್ವನಿ ವರ್ಧಕ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಲಿದ್ದೇವೆ. ಶನಿವಾರ ಗಜೇಂದ್ರಗಡದಲ್ಲಿ ದಾಳಿ ನಡೆಸಿ, ವ್ಯಾಪಾರಸ್ಥರಿಗೂ ಬೀಡಿ ಅಂಗಡಿ ಮಾಲಿಕರಿಗೂ ಗುಟ್ಕಾ ಮಾರಾಟ ಮಾಡದಂತೆ ಕೊನೆಯ ಎಚ್ಚರಿಕೆ ನೀಡಿದ್ದೇವೆ ಎಂದರು. ತಾಲೂಕು ವೈದ್ಯಾಧಿಕಾರಿ ಬಿ.ಡಿ. ಭಜಂತ್ರಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬಿಳಗಿ, ಆರೋಗ್ಯ ಇಲಾಖೆಯ ಎಂ.ಬಿ. ಗಡ್ಡಿ, ಆರೋಗ್ಯ ನಿರೀಕ್ಷಕ ಮಹೇಶ ನಿಡಶೇಶಿ, ಸಿ.ಕೆ. ಕುಲಕರ್ಣಿ, ಕೆ.ಓ. ಮುಲ್ಲಾ, ಸಿ.ಡಿ.ದೊಡ್ಡಮನಿ, ಪಿ.ಎನ್. ದೊಡ್ಡಮನಿ, ಮರಿಯಪ್ಪ ಅರಳಿಗಿಡದ, ಹನುಮಂತ ಚಲವಾದಿ, ಆರ್.ಜಿ. ನಿಶಾಂದಾರ  ಪೊಲೀಸ್ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.