ಗದಗ

ಚಟ ಚಟುವಟಿಕೆ ಮೂಲವಲ್ಲ, ಚಟ್ಟಕ್ಕೆ ಮೂಲ

Published On :

ಕನ್ನಡಪ್ರಭ ವಾರ್ತೆ, ಗದಗ, ಜೂ. 9
ಚಟ ಎಂದಿಗೂ ಚಟುವಟಿಕೆಯ ಮೂಲವಲ್ಲ. ಅದು ಚಟ್ಟಕ್ಕೆ ಮೂಲ. ಆದರೆ, ಚಟಗಳಿಗೆ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡವರು ಚಟಗಳು ಚಟುವಟಿಕೆಯ ಮೂಲ ಎಂದು ಹೇಳುವುದು ತಮ್ಮ ಚಟಗಳನ್ನು ಮರೆಮಾಚಲು ಅಥವಾ ಸಮರ್ಥಿಸಲು ಅವರು ಹುಡುಕಿಕೊಂಡಿರುವ ಸರಳ ಹಾದಿ ಎಂದು ಕೋಟುಮಚಗಿಯ ಸೋಮೇಶ್ವರ ಪ್ರೌಢಶಾಲೆಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ಈಚೆಗೆ ಅವರು ಗದಗ ಜಿಲ್ಲಾ ಗೃಹರಕ್ಷಕ ದಳದ ನರೇಗಲ್ಲ ಘಟಕವು ಇಲ್ಲಿನ ಕೆಎಸ್‌ಎಸ್ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ತಂಬಾಕು ರಹಿತ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಯಾವುದೇ ಚಟ ಹೇಳುವ ಮಾತೇನೆಂದರೆ ಮೊದಲು ನೀನು ನನ್ನನ್ನು ಸೇವಿಸು, ನಂತರ ನಾನು ನಿನ್ನನ್ನು ಸೇವಿಸುತ್ತೇನೆ ಎಂದು, ಆದ್ದರಿಂದ ತಂಬಾಕು ಉತ್ಪನ್ನಗಳಷ್ಟೇ ಅಲ್ಲ, ಯಾವುದೇ ದುಶ್ಚಟಗಳ ದಾಸರಾಗದೆ ಉತ್ತಮ ಹವ್ಯಾಸಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಿರಿ ಎಂದರು.
ಅನ್ನದಾನೇಶ್ವರ ಪ್ರೌಢಶಾಲೆಯ ಶಿಕ್ಷಕ ಎ.ಸಿ. ಮರಡಿಮಠ ಮಾತನಾಡಿ, ತಂಬಾಕು ಮತ್ತು ತಂಬಾಕಿನ ಉತ್ಪನ್ನಗಳ ಸೇವನೆಯಿಂದ ಜೀವನ ದುರ್ಬರವಾಗುತ್ತದೆ. ಕಾರಣ ತಂಬಾಕು ಸೇವನೆಯಿಂದ ದೂರವಿರುವುದು ಒಳಿತು ಎಂದರು. ತಂಬಾಕು ಸೇವನೆ ದೇಹದ ಯಾವ ಯಾವ ಅಂಗಗಳ ಮೇಲೆ ಹೇಗೆ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ ಎಂಬುದನ್ನು ವಿವರವಾಗಿ ತಿಳಿಸಿದರು. ನಾನು ಕಡಿಮೆ ಸೇವನೆ ಮಾಡುತ್ತೇನೆ, ಹಾಗೆ-ಹೀಗೆ ಎಂದು ನೆಪ ಹೇಳುವುದರ ಬದಲಾಗಿ ಈ ಉತ್ಪನ್ನಗಳ ಸೇವನೆಯನ್ನು ಸಂಪೂರ್ಣ ನಿಲ್ಲಿಸಿ ಆರೋಗ್ಯವಂತರಾಗಿ ಬಾಳಬೇಕೆಂದು ಕರೆ ನೀಡಿದರು.
ಶಿಕ್ಷಕ ಎಂ.ಎಸ್. ಧಡೇಸೂರಮಠ ಮಾತನಾಡಿ, ಚಟಗಳು ಹೆಚ್ಚಿದಷ್ಟೂ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತದೆ. ಮೊದಲು ಒಂದು ಎಂದು ಪ್ರಾರಂಭವಾಗುವ ಚಟಗಳು ಮತ್ತೆ ಹೆಚ್ಚಾಗುತ್ತ ಹೋಗುತ್ತವೆ. ಕಾರಣ ಇಂತಹ ಚಟಗಳ ದಾಸರಾಗುವ ಬದಲಿಗೆ ಉತ್ತಮ ಹವ್ಯಾಸಗಳತ್ತ ನಿಮ್ಮ ಮನಸ್ಸನ್ನು ಹರಿಸಬೆಕು ಎಂದರು.ರೋಣ ತಾಲೂಕು ಕಸಾಪ ಅಧ್ಯಕ್ಷ ಡಾ. ಶಿವರಾಜ ಗುರಿಕಾರ ಮಾತನಾಡಿ, ಮನುಷ್ಯನ ಮೆದುಳಿನಲ್ಲಿ ನ್ಯೂರಾನ್ ಅಂಶಗಳಿರುತ್ತವೆ. ತಂಬಾಕು ಸೇವನೆಯು ಈ ಅಂಶಗಳ ಮೇಲೆ ನೇರವಾದ ಪರಿಣಾಮ ಬೀರುವುದರಿಂದ ನ್ಯೂರಾನ್ ಅಂಶಗಳ ಪ್ರಮಾಣ ಕಡಿಮೆಯಾಗುತ್ತ ಹೋಗುವುದರಿಂದ ವ್ಯಕ್ತಿಯು ಮನಸಿಕ ಖಿನ್ನತೆಗೆ ಒಳಗಾಗುತ್ತಾನೆ. ಆದ್ದರಿಂದ ತಂಬಾಕು ಸೇವನೆಯಿಂದ ದೂರವಿರುವುದು ಒಳಿತು ಎಂದರು.
ಅಧ್ಯಕ್ಷತೆ ವಹಿಸಿದ್ದ ಘಟಕಾಧಿಕಾರಿ ಸುರೇಶ ಹಳ್ಳಿಕೇರಿ ಮಾತನಾಡಿದರು. ಮಲ್ಲಿಕಾರ್ಜುನ ಸರ್ವಿ ಸೇರಿದಂತೆ ಗೃಹರಕ್ಷದ ದಳದ ಎಲ್ಲ ಸದಸ್ಯರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಸ್.ಎಸ್. ಗುಡ್ಲಾನೂರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.