ಉರೂಸ್, ಜಾತ್ರೆಯಿಂದ ಕೋಮು ಸೌಹಾರ್ದತೆ
ನರೇಗಲ್ಲ: ಉರೂಸ್, ಜಾತ್ರೆಗಳು ಎಲ್ಲ ಧರ್ಮೀಯರೂ ಸೇರಿ ಆಚರಿಸುವುದರಿಂದ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಲು ಶಕ್ತವಾಗುತ್ತದೆ. ಹೀಗಾಗಿ ಉರೂಸ್ ಮತ್ತು ಜಾತ್ರೆಗಳು ಕೋಮು ಸೌಹಾರ್ದತೆಯ ಕೇಂದ್ರಗಳಾಗಿವೆ ಎಂದು ಸ್ಥಳೀಯ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಈಚೆಗೆ ಅವರು ಸ್ಥಳೀಯ ರಹಿಮಾನ ಶಾವಲಿ ಶ್ರೀಗಳ ಉರೂಸ್ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸರ್ವಧರ್ಮ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಆಡಂಬರ, ಅಲಂಕಾರಗಳು ಎಂದಿಗೂ ಶಾಶ್ವತವಲ್ಲ. ಅವುಗಳ ಕಡೆಗೆ ಮನಸ್ಸು ನೀಡಿದರೆ ಜೀವನವೆಲ್ಲ ಆಡಂಬರವಾಗುತ್ತದೆ. ಇಂತಹ ಧಾರ್ಮಿಕ ಆಚರಣೆಗಳಲ್ಲಿ ಎಲ್ಲರೂ ಪಾಲ್ಗೊಂಡು ಮಾನಸಿಕ ನೆಮ್ಮದಿಯನ್ನು ಪಡೆಯಬೇಕು. ಸೂಫಿ ಸಂತರು ಧರ್ಮದ ಬೀಜ ಬಿತ್ತುವ ಕೇಂದ್ರಗಳೇ ದರ್ಗಾಗಳು. ಸರ್ವರನ್ನೂ ಸಮಭಾವದಿಂದ ಕಾಣುವ, ಸರ್ವರನ್ನೂ ಪ್ರೀತಿಸುವ, ಸರ್ವರಲ್ಲಿಯೂ ದೇವರನ್ನು ಕಾಣುವ ಮಂತ್ರವನ್ನೇ ಈ ದರ್ಗಾಗಳು ಬೋಧಿಸುತ್ತವೆ. ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವೆಲ್ಲ ಶಾಂತಿ ಸಹನೆಯಿಂದ ಬದುಕಬೇಕು ಎಂದರು. ಯುವ ಧುರೀಣ ಮಿಥುನ್ ಪಾಟೀಲ ಮಾತನಾಡಿ, ಶರಣರ, ಪೂಜ್ಯರ ಮಾರ್ಗದಲ್ಲಿ ನಾವುಗಳು ನಡೆದಾಗ ಪರಸ್ಪರ ಸೌಹಾರ್ದತೆಯಿಂದ ಬದುಕಲು ಸಾಧ್ಯ. ನರೇಗಲ್ಲ ಪಟ್ಟಣ ಇಂತಹ ಒಂದು ಸೌಹಾರ್ದತಾ ಕೇಂದ್ರವಾಗಿರುವುದು ಅತ್ಯಂತ ಸಂತಸದ ಸಂಗತಿ ಎಂದರು. ಆಡ್ನೂರು ದಾಸೋಹ ಮಠದ ಪಂಚಾಕ್ಷರ ಶ್ರೀಗಳು ಆಶೀರ್ವಚನ ನೀಡಿ, ಭಾರತ ದೇಶ ಸರ್ವ ಧರ್ಮಗಳ ನೆಲೆಬೀಡಾಗಿದೆ. ಇಲ್ಲಿ ಎಲ್ಲ ಜಾತಿ-ಧರ್ಮದವರೂ ಒಂದೇ ಎಂಬ ನೆಲೆಗಟ್ಟಿನಲ್ಲಿ ಬಾಳ್ವೆ ಮಾಡುತ್ತಿದ್ದಾರೆ. ಇದು ಭದ್ರವಾಗಿ ಉಳಿಯಬೇಕಾದಲ್ಲಿ ಇಂತಹ ಉರೂಸ್, ಧಾರ್ಮಿಕ ಕಾರ್ಯಗಳ ಅವಶ್ಯಕತೆ ಬಹಳಷ್ಟಿದೆ. ಸದಾ ಮೌನಯೋಗಿಯಾಗಿರುವ ಈ ದರ್ಗಾದ ಅಜ್ಜನವರು ಮೌನದಲ್ಲಿಯೇ ಬಹಳಷ್ಟು ಸಂದೇಶಗಳನ್ನು ಭಕ್ತರಿಗೆ ನೀಡುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ನಿಡಗುಂದಿಕೊಪ್ಪದ ಶಿವಬಸವ ಶ್ರೀಗಳು ಆಶೀರ್ವಚನ ನೀಡಿ, ಜಗತ್ತಿನ ಎಲ್ಲ ಧರ್ಮಗಳ ತಿರುಳೂ ಶಾಂತಿಯಾಗಿದೆ. ಹಿಂಸೆಯ ಮೂಲಕ ಏನನ್ನೋ ಸಾಧಿಸುತ್ತೇವೆ ಎಂದು ಅನೇಕರು ಉಗ್ರಗಾಮಿ ಕೃತ್ಯಗಳಿಗೆ ಕೈ ಹಾಕುತ್ತಿದ್ದಾರೆ. ಇದು ಅವರ ಭ್ರಮೆ. ಮನುಷ್ಯ ಮನುಷ್ಯನನ್ನು ಕೊಂದು ಬಾಳಿ ಎಂದು ಯಾವ ಧರ್ಮವೂ ಹೇಳುವುದಿಲ್ಲ. ಇದನ್ನು ಮನಗಂಡು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುವ ಯಾರೇ ಆದರೂ ಅದರಿಂದ ಹೊರಬರಬೇಕು ಎಂದರು. ಮಹ್ಮದ ಪೈಗಂಬರರ ನುಡಿಗಳನ್ನು ಒಮ್ಮೆ ಗಮನವಿಟ್ಟು ಕೇಳಿ, ಇಲ್ಲವೆ ಓದಿ. ಅವುಗಳೆಲ್ಲವೂ ಮನುಷ್ಯ ಶಾಂತಿಯಿಂದ ಬದುಕಬೇಕೆಂಬುದನ್ನು ಹೇಳುತ್ತವೆ. ನಿಜಕ್ಕೂ ಯಾರಿಗೆ ಧರ್ಮದಲ್ಲಿ, ಭಗವಂತನಲ್ಲಿ ನಂಬಿಕೆಯಿದೆಯೋ ಅವರೆಂದಿಗೂ ಯಾವುದೇ ಹಿಂಸಾ ಕೃತ್ಯದಲ್ಲಿ ಭಾಗಿಯಾಗುವದಿಲ್ಲ ಎಂದರು. ನಿವೃತ್ತ ಶಿಕ್ಷಕ ಎ.ಎ. ನವಲಗುಂದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ದರ್ಗಾದ ಅಜ್ಜನವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

