ಗ್ರಾಮೀಣ ಬ್ಯಾಂಕ್ಗಳಲ್ಲಿ ಕೆವಿಜಿ ಬ್ಯಾಂಕ್ ಪ್ರಥಮ
ಗದಗ: ಉತ್ತರ ಕರ್ನಾಟಕದ ಮತ್ತು ಕರಾವಳಿ ಕರ್ನಾಟಕದ ಜನರ ಜೀವನಾಡಿಯಾಗಿರುವ ಕರ್ನಾಟಕ ವಿಕಾಸ ಗ್ರಾಮೀಣ (ಕೆವಿಜಿ) ಬ್ಯಾಂಕ್ ಪ್ರವರ್ತಕ ಬ್ಯಾಂಕಾದ ಸಿಂಡಿಕೇಟ್ ಬ್ಯಾಂಕಿನ ಜತೆ ಮಾಡಿಕೊಂಡ ಒಡಂಬಡಿಕೆಯ ಆನ್ವಯ ಎಲ್ಲ ವಿಭಾಗಗಳಲ್ಲೂ ಗುರಿಮೀರಿ ಸಾಧನೆ ತೋರಿ, 2012-13ರ ಆರ್ಥಿಕ ವರ್ಷದಲ್ಲಿ ರು. 195 ಕೋಟಿ ಲಾಭಗಳಿಕೆ ಮಾಡಿ ಗ್ರಾಮೀಣ ಬ್ಯಾಂಕುಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ಕೆವಿಜಿ ಬ್ಯಾಂಕಿನ ಮಹಾ ಪ್ರಬಂಧಕ ಮುರಳೀನಾಥ ಗುಪ್ತಾ ಹೇಳಿದರು.
ಅವರು ಈಚೆಗೆ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಕೆವಿಜಿ ಬ್ಯಾಂಕಿನ ಗದಗ ಪ್ರಾದೇಶಿಕ ಕಚೇರಿಯ 51 ಶಾಖೆಗಳ ಶಾಖಾಧಿಕಾರಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಬರಗಾಲದಲ್ಲೂ ಕೂಡ ಪ್ರಥಮ ಸ್ಥಾನ ಪಡೆಯುವುದಕ್ಕೆ ಬ್ಯಾಂಕಿನ ನೌಕರರು ಒಂದು ತಂಡವಾಗಿ ಪರಿಶ್ರಮವಹಿಸಿದ್ದು ಕಾರಣ. ಆಯಾ ಪ್ರದೇಶಕ್ಕೆ ಅನುಗುಣವಾದ ಜನರ ಸಮಸ್ಯೆಗಳನ್ನ ಅರ್ಥಮಾಡಿಕೊಳ್ಳುವ ಮನೋಭಾವ ಶಾಖಾಧಿಕಾರಿಗಳಲ್ಲಿ ಬಂದಾಗ ಬ್ಯಾಂಕಿನ ಉನ್ನತ ಬೆಳವಣಿಗೆ ಸಾಧ್ಯ. ಹೊಸದಾಗಿ ಖಾತೆ ತೆರೆಯುವ ಸಮಯದಲ್ಲಿ ಕೆವೈಸಿ ನಿಯಮಗಳನ್ನು ಅಳವಡಿಸಿಕೊಳ್ಳವುದನ್ನು ಶಾಖಾಧಿಕಾರಿಗಳು ಕಡ್ಡಾಯಗೊಳಿಸಿದಾಗ ಬ್ಯಾಂಕಿನಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಯಲು ಸಾಧ್ಯ. ಕೆವಿಜಿ ಬ್ಯಾಂಕಿನ ಅನುತ್ಪಾದಕ ಸಾಲಗಳ ನಿರ್ವಹಣೆ ಬಗ್ಗೆ ಭಾರತೀಯ ರಿಜರ್ವ ಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.
ಗದಗ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಪ್ರಬಂಧಕ ಎ.ಎ. ಉಪಾಧ್ಯ ಮಾತನಾಡಿ, ಗದಗ ಜಿಲ್ಲೆ ಕಳೆದ 2 ವರ್ಷಗಳಿಂದ ಬರಗಾಲ ಅನುಭವಿಸುತ್ತಿದ್ದರೂ ನಮ್ಮ ಪ್ರಾದೇಶಿಕ ಕಚೇರಿ ಉತ್ತಮ ಸಾಧನೆ ಮಾಡಿದೆ. 2012-13ರ ಆರ್ಥಿಕ ವರ್ಷದಲ್ಲಿ ಸಾಲಗಳ ಮತ್ತು ಅನುತ್ಪಾದಕ ಸಾಲಗಳ ಗುರಿ ಸಾಧಿಸಲಾಗಿದೆ. ಆದರೆ, ಠೇವಣಿ ಗುರಿ ತಲುಪಲು ಸಾಧ್ಯವಾಗದಿರುವುದಕ್ಕೆ ಬರಗಾಲವೇ ಕಾರಣ. ಕಳೆದ ವರ್ಷಕ್ಕಿಂತ 10.35 ಕೋಟಿ ಹೆಚ್ಚು ಲಾಭ ಮಾಡಿ ಶೇ. 146 ರಷ್ಟು ಹೆಚ್ಚಳವಾದದ್ದು ನಮ್ಮ ಪ್ರಗತಿಗೆ ಕಾರಣವಾಗಿದೆ. ಬ್ಯಾಂಕಿಂಗ್ ಶೇರು ಮಾರುಕಟ್ಟೆಯಲ್ಲಿ ಗದಗ ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕುಗಳಿಗಿಂತ ನಮ್ಮ ಕೆವಿಜಿ ಬ್ಯಾಂಕ್ ಅಗ್ರಸ್ಥಾನದಲ್ಲಿದೆ. 2013-14ರ ಪ್ರಸಕ್ತ ವರ್ಷದಲ್ಲಿ ರು. 660 ಕೋಟಿ ಠೇವಣಿ ಮತ್ತು ರು. 675 ಕೋಟಿ ಮುಂಗಡದೊಂದಿಗೆ ಒಟ್ಟು ರು. 1335 ಕೋಟಿ ಒಟ್ಟು ವ್ಯವಹಾರದ ಗುರಿಯನ್ನು ಪ್ರಾದೇಶಿಕ ಕಚೇರಿ ಹಮ್ಮಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಗದಗ ಶಾಖೆಯ ಮುಖ್ಯ ಪ್ರಬಂಧಕ ಬಿ.ಟಿ.ಪೈ ಮತ್ತು ಶಿರಹಟ್ಟಿ ಶಾಖೆಯ ಮುಖ್ಯ ಪ್ರಬಂಧಕ ಎಲ್.ಬಿ. ಚಿಲ್ಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಠೇವಣಿ ಸಾಲಗಳ ಮತ್ತು ಅನುತ್ಪಾದಕ ಸಾಲಗಳ ವಿಭಾಗದಲ್ಲಿ ಗುರಿ ಸಾಧಿಸಿದ ಶಾಖಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸೂಡಿ ಶಾಖಾಧಿಕಾರಿ ಸಿ.ಪಿ. ಕುಲಕರ್ಣಿ ಪ್ರಾರ್ಥಿಸಿದರು. ಎಸ್.ಜಿ. ಹಿರೇಮಠ ಸ್ವಾಗತಿಸಿದರು. ಪಿ.ಎ. ಕುಲಕರ್ಣಿ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

