ಸಾಲ ಮನ್ನಾಕ್ಕೆ ಆಗ್ರಹಿಸಿ ಇಂದು ಮನವಿ
ಮುಂಡರಗಿ: ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಉದ್ಯೋಗಿನಿ ಯೋಜನೆಯಡಿಯಲ್ಲಿ ನಿರ್ಗತಿಕ ಮಹಿಳೆಯರು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕೆಂದು ಕನ್ನಡ ಜನಾಭಿವೃದ್ಧಿ ವೇದಿಕೆ ಅಧ್ಯಕ್ಷ ದೇವಪ್ಪ ಇಟಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಭಯ ಶಾಸಕರು ಒತ್ತಡ ತರಬೇಕೆಂದು ಒತ್ತಾಯಿಸಿ ಜೂ. 10ರ ಬೆಳಗ್ಗೆ 11ಕ್ಕೆ ತಾಲೂಕು ದಂಡಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗುವುದೆಂದು ತಿಳಿಸಿದ್ದಾರೆ.
ಇಸ್ಪೀಟ್: 8 ಜನರ ಬಂಧನ
ಗದಗ: ತಾಲೂಕಿನ ನಾಗಾವಿ ತಾಂಡಾದ ಖಂಡುಬಾ ಗುಡಿ ಹತ್ತಿರ ಇಸ್ಪೀಟ್ ಆಡುತ್ತಿದ್ದ 8 ಜನರನ್ನು ಪೊಲೀಸರು ಬಂಧಿಸಿ, ರು. 17700 ವಶಪಡಿಸಿಕೊಂಡಿದ್ದಾರೆ. ನಾಗಾವಿ ತಾಂಡಾದ ನಿವಾಸಿಗಳಾದ ಪಾಂಡಪ್ಪ ರಾಠೋಡ, ಅಶೋಕ ಲಮಾಣಿ, ಕೇಶಪ್ಪ ಪೂಜಾರ, ಪರಶುರಾಮ ರಾಠೋಡ, ಹೇಮಂತ ಚವ್ಹಾಣ, ರಮೇಶ ಹಾದಿಮನಿ, ಮಹಾದೇವ ಗುಡಿಮನಿ, ಅಶೋಕ ಲಮಾಣಿ ಬಂಧಿತ ಆರೋಪಿಗಳು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಡಿಕ್ಕಿ: ಓರ್ವ ಸಾವು
ಗದಗ: ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಭಾನುವಾರ ನಡೆದಿದೆ. ಮೃತನನ್ನು ಹಳ್ಳಿಗುಡಿ ಗ್ರಾಮದ ನಿವಾಸಿ ಬಸಪ್ಪ ಕಲ್ಲಳ್ಳಿ (50) ಎಂದು ಗುರುತಿಸಲಾಗಿದೆ. ಮನೆಯಿಂದ ಹೊಲಕ್ಕೆ ತೆರಳುವ ವೇಳೆ ಹೆದ್ದಾರಿ ಕ್ರಾಸ್ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ನಿರ್ವಾಹಕನ ಹಣ ದೋಚಿ ಪರಾರಿ
ಗದಗ: ಬಸ್ ನಿರ್ವಾಹಕನನ್ನು ಹೆದರಿಸಿ, ಥಳಿಸಿ ಕೆಲ ಕಿಡಿಗೇಡಿಗಳು ಅವನ ಬಳಿ ಇದ್ದ ಹಣವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಬೆಟಗೇರಿಯ ನರಸಾಪುರ ಬಳಿ ಭಾನುವಾರ ನಡೆದಿದೆ. ರಾಣಿಬೆನ್ನೂರ ಕೆಎಸ್ಆರ್ಟಿಸಿ ಡಿಪೋದಲ್ಲಿ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದ ಹಿರೇಮನ್ನಾಪುರ ಗ್ರಾಮದ ಇಮಾಮಸಾಬ್ ಖಾಜಾಹುಸೇನಸಾಬ ಜಿನ್ನದ ಎಂಬುವರ ಹತ್ತಿರ ಇದ್ದ ಹಣ, ಟಿಕೆಟ್, ಮೊಬೈಲ್ ಹಾಗೂ ಎಟಿಎಂ ಕಾರ್ಡ್ನ್ನು ದೋಚಿ ಪರಾರಿಯಾಗಿದ್ದಾರೆ. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿದಂಬರ ನಿಧನ
ಗದಗ: ನಗರದ ಹೆಲ್ತ್ಕ್ಯಾಂಪ್ ನಿವಾಸಿ ಹಾಗೂ ಡಯಟ್ ಕಾಲೇಜಿನ ಗುಮಾಸ್ತರಾಗಿದ್ದ ಚಿದಂಬರ ಕುಲಕರ್ಣಿ (46) ಶನಿವಾರ ನಿಧನರಾದರು. ಮೃತರು ತಾಯಿ, ತಮ್ಮ ಹಾಗೂ ಅಪಾರ ಬಂಧು-ಬಳಗ ಹೊಂದಿದ್ದರು. ಡಯಟ್ ಕಾಲೇಜಿನ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಸ್ಥಾಯಿ ಸಮಿತಿಗೆ ಅವಿರೋಧ ಆಯ್ಕೆ
ಶಿರಹಟ್ಟಿ: ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಕೋಟೆಪ್ಪ ವರ್ದಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸದರಿ ಸಮಿತಿಯಲ್ಲಿ ನಾಲ್ಕು ಕಾಂಗ್ರೆಸ್ ಹಾಗೂ ಒಬ್ಬ ಬಿಜೆಪಿ ಸದಸ್ಯರಿದ್ದು, ಕಾಂಗ್ರೆಸ್ನ ಫಕ್ಕೀರವ್ವ ಮುಂಡವಾಡ, ಸುಶೀಲಾ ಪರಮೇಶ ಲಮಾಣಿ, ಸುಷ್ಮಾ ಗುಡದಪ್ಪ ಸೊರಟೂರ ಅವರು ಸೂರಣಗಿ ಕ್ಷೇತ್ರದ ತಾಪಂ ಸದಸ್ಯ ಕೋಟೆಪ್ಪ ವರ್ದಿಗೆ ಬೆಂಬಲ ಸೂಚಿಸಿದರು. ಸಭೆಯಲ್ಲಿ ಬೆಜೆಪಿ ಸದಸ್ಯ ತಿಮ್ಮರಡ್ಡಿ ಅಳವಂಡಿ ಹಾಜರಿರಲಿಲ್ಲ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಉಪಸ್ಥಿತರಿದ್ದರು.
ಗದಗ: ವರ್ಗಾವಣೆ ಮಾರ್ಗಸೂಚಿ ಪ್ರಕಟ
ಗದಗ: 2013-14ನೇ ಸಾಲಿಗಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕುರಿತು ಇಲಾಖೆಯು ಮಾರ್ಗಸೂಚಿ ಹಾಗೂ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಈ ಮಾರ್ಗಸೂಚಿಯಂತೆ ವರ್ಗಾವಣೆ ಬಯಸುವ ಶಿಕ್ಷಕರು ಜೂ. 12ರ ಒಳಗಾಗಿ ಆನ್ಲೈನ್ ಮೂಲಕ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಜೂ. 13ರ ಒಳಗಾಗಿ ಈ ಅರ್ಜಿಯಲ್ಲಿನ ಮಾಹಿತಿಗಳನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಈ ವರ್ಗಾವಣೆ ಮಾರ್ಗಸೂಚಿಯನ್ನು ಇಲಾಖೆಯ ವೆಬ್ಸೈಟ್ Schooleducation.kar.nic ನಲ್ಲಿ ಪ್ರಕಟಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಗದಗ: ಅರ್ಜಿ ಆಹ್ವಾನ
ಗದಗ: ಕರ್ನಾಟಕ ಸರ್ಕಾರದ ಅಮೃತ ಯೋಜನೆಯಲ್ಲಿ ಧಾರವಾಡ ಸಹಕಾರಿ ಹಾಲು ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅರ್ಹ ಫಲಾನುಭವಿ (ವಿಧವೆಯರು ಮತ್ತು ಸಂಕಷ್ಟಕ್ಕೊಳಗಾದ ಮಹಿಳೆಯರು) ಗಳಿಗೆ ರು. 35 ಸಾವಿರ. ಘಟಕ ವೆಚ್ಚದಲ್ಲಿ ಹೈನುರಾಸು ಖರೀದಿಗಾಗಿ ಸರ್ಕಾರದ ನಿಯಮಾವಳಿಗಳ ಅನ್ವಯ ಶೇ. 50ರ ಅನುದಾನವಿದ್ದು (ಶೇ. 50 ಫಲಾನುಭವಿ ವಂತಿಕೆ- 17500 ) ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಯ ರೂಪುರೇಷೆಗಳು, ಫಲಾನುಭವಿಗೆ ಇರಬೇಕಾದ ಅರ್ಹತೆಗಳು, ಅನುದಾನದ ವಿವರ, ಮತ್ತು ಸಲ್ಲಿಸಬೇಕಾದ ದಾಖಲೆಗಳ ಕುರಿತು ಧಾರವಾಡ ಸಹಕಾರಿ ಹಾಲು ಒಕ್ಕೂಟದ ಆಯಾ ವಿಭಾಗದ ವಿಸ್ತರಣಾಧಿಕಾರಿಗಳು, ಜಿಲ್ಲಾ ಮುಖ್ಯಸ್ಥರು ಅಥವಾ ವ್ಯವಸ್ಥಾಪಕ ನಿರ್ದೇಶಕರು, ಲಕ್ಕಮನಹಳ್ಳಿ, ಧಾರವಾಡ-4 ಇವರ ಕಚೇರಿಯನ್ನು ಒಂದು ವಾರದೊಳಗೆ ಸಂಪರ್ಕಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲೆಯ ಆರ್.ಎಸ್. ಸಿದ್ಧರಾಜು-9480682730, ಗದಗ ಜಿಲ್ಲೆಯ ಡಾ. ಮಹದೇವಪ್ಪ ಮಡಿವಾಳರ-9480682732, ಹಾವೇರಿ ಜಿಲ್ಲೆಯ ಡಾ. ಆರ್.ಎಸ್. ಹೆಗಡೆ-9480682709, ಉತ್ತರ ಕನ್ನಡ ಜಿಲ್ಲೆಯ ಜಯರಾಮ ಭಟ್-9480682740 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕಾರ್ಯಕಾರಿ ಸಮಿತಿಯ ತ್ರೈವಾರ್ಷಿಕ ಚುನಾವಣೆ
ಗದಗ: 2013ರ ರಾಜ್ಯ ವಿಜ್ಞಾನ ಪರಿಷತ್ತಿನ ತ್ರೈವಾರ್ಷಿಕ ಚುನಾವಣೆಗೆ ಸಂಬಂಧಪಟ್ಟಂತೆ ಮತದಾರರ ಪಟ್ಟಿಯನ್ನು ಕರಾವಿಪ ಅಂತರ್ಜಾಲ (www.krvp.org)ದಲ್ಲಿ ಜೂ. 15ರಂದು ಪ್ರಕಟಿಸಲಾಗುವುದು. ಸದಸ್ಯರು ಆ ಪಟ್ಟಿಯನ್ನು ಪರಿಶೀಲಿಸಿ ತಿದ್ದುಪಡಿ ಅಥವಾ ಆಕ್ಷೇಪಣೆ ಏನಾದರೂ ಇದ್ದಲ್ಲಿ ಜುಲೈ 1 ರೊಳಗೆ ತಲುಪುವಂತೆ ಕರಾವಿಪ ಕಚೇರಿಗೆ ಇ-ಮೇಲ್ ಮೂಲಕ (krvp.info@gmail.com) ಅಥವಾ ಅಂಚೆ ಮೂಲಕ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

