ಕೆಲಸ ಪೂರ್ಣವಾಗಿಲ್ಲ, ನಾಳೆ ಬನ್ನಿ...!
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜೂ. 10
ದೂರದ ಊರುಗಳಿಂದ ರೋಣ ಪಟ್ಟಣಕ್ಕೆ ಬರುತ್ತಿದ್ದ ಜನತೆಗೆ ಸಹಾಯಕವಾಗಲಿ ಎಂದು ಸರ್ಕಾರ ಗಜೇಂದ್ರಗಡದಲ್ಲಿ ಸ್ಥಾಪಿಸಿರುವ ವಿಶೇಷ ತಹಸೀಲ್ ಕಚೇರಿಯು ಕೆಲ ದಿನಗಳಿಂದ ಸಿಬ್ಬಂದಿಗಳಿಲ್ಲದೇ ಬಿಕೋ ಎನ್ನುತ್ತಿದೆ.
ಕಚೇರಿ ಸ್ಥಾಪನೆಯ ಉದ್ದೇಶ ಸಫಲತೆಯ ಹಾದಿಯ ಬದಲು ವಿಫಲಯತೆಯ ಹಾದಿಯಲ್ಲಿ ಸಾಗುತ್ತಿದೆ. ಈ ಬಗ್ಗೆ ಗಮನ ನೀಡೋರ್ಯಾರು ಎನ್ನುವ ಪ್ರಶ್ನೆ ಪಟ್ಟಣದ ಜನತೆಗೆ ಎದುರಾಗಿದೆ.
ಈ ವಿಶೇಷ ತಹಸೀಲ್ ಕಚೇರಿಯಲ್ಲಿ ಅಧಿಕಾರಿಗಳು ವರ್ಗಾವಣೆಯಾಗಿ ಹಲವು ತಿಂಗಳು ಗತಿಸಿವೆ. ಈವರೆಗೂ ಬೇರೊಬ್ಬರ ನೇಮಕ ಮಾಡಿಲ್ಲ. ಇನ್ನು ಕಚೇರಿಯ ಅವಧಿಯಲ್ಲಿ ಹೆಚ್ಚಿನ ಕೆಲಸಕ್ಕಾಗಿ ಬೇಕಾಗುವ ಯಾವೊಬ್ಬ ಸಿಬ್ಬಂದಿಯೂ ಇಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಹೀಗಾಗಿ ಕಚೇರಿಗೆ ತೆರಳಿದರೆ ನಿಮಗೆ ಸಿಗುವ ಉತ್ತರ, ನಿಮ್ಮ ಕೆಲಸ ಪೂರ್ಣವಾಗಿಲ್ಲ, ನಾಳೆ ಬನ್ನಿರಿ ಎನ್ನುವ ಸಿದ್ಧ ಉತ್ತರ ಅಲ್ಲಿಯ ಸಿಪಾಯಿಗಳಿಂದ. ಇದರಿಂದ ಗಜೇಂದ್ರಗಡ ಹಾಗೂ ಸುತ್ತಮುತ್ತಲ ಜನತೆ ರೋಸಿ ಹೋಗಿದ್ದು ಈ ಕುರಿತು ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕಿದೆ.
ಸೇವೆ ಗಗನ ಕುಸುಮ: ವೃದ್ಧಾಪ್ಯ ವೇತನ, ವಿಧವಾ ಮಾಸಾಶನ, ಅಂಗವಿಕಲರ ಮತ್ತಿತರ ಜನರ ಕಾರ್ಯ ಸ್ಥಗಿತಗೊಂಡಿದ್ದು, ಫಲಾನುಭವಿಗಳು ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ಜತೆಗೆ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಇಲ್ಲದಂತಾಗಿದೆ. ಸಣ್ಣ ರೈತರು, ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಹಮಾಲರು, ಗ್ರಾಮೀಣ ಕಸಬುದಾರರು, ಬಿಸಿಯೂಟ ನೌಕರರು, ಕಟ್ಟಡ ಕಾರ್ಮಿಕರು ಹಾಗೂ ದೇವದಾಸಿಯರಿಗೆ ಬಿಪಿಎಲ್ ರೇಶನ್ ಕಾರ್ಡ್ಗಳ ಬಗೆಗೆ ಸರಿಯಾದ ಮಾಹಿತಿ ದೊರೆಯದೇ ಪರದಾಡುತ್ತಿದ್ದಾರೆ. ಪ್ರಾಮಾಣಿಕ, ನಿಷ್ಪಕ್ಷಪಾತ ಆಡಳಿತ ಸೇವೆ ಎನ್ನುವುದು ಇಲ್ಲಿನ ಕಚೇರಿಯಲ್ಲಿ ಗಗನ ಕುಸುಮವಾಗಿದೆ.
ಮಧ್ಯವರ್ತಿಗಳ ಹಾವಳಿ ಅತಿರೇಕ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಹಾಗೂ ನರೇಗಲ್ಲ ಹೋಬಳಿ ಮಟ್ಟದ ಹಳ್ಳಿಗಳ ಜನರು ತಮ್ಮ ನಿತ್ಯದ ಕೆಲಸಕ್ಕಾಗಿ ಇಲ್ಲಿಗೆ ಬರಬೇಕಾದ ಅನಿವಾರ್ಯತೆ ಇದೆ. ಆದರೆ, ಕಚೇರಿ ಹಾಗೂ ಅದರ ಆವರಣದಲ್ಲಿ ಇರಬೇಕಾದ ಅಧಿಕಾರಿಗಳಿಗಿಂತ ಮಧ್ಯವರ್ತಿಗಳೇ ಹೆಚ್ಚಿನ ಸಂಖ್ಯೆಯಲ್ಲಿದೆ. ಕಚೇರಿಗೆ ಬರುವ ಸಿಬ್ಬಂದಿ ಕರೆದುಕೊಂಡು ಹೋಗಿ, ಇಲ್ಲಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ನಿಮ್ಮ ಕೆಲಸವನ್ನು ಆದಷ್ಟು ಬೇಗನೇ ಮಾಡಿಸಿಕೊಡುತ್ತೇನೆ ಎಂದು ಹೇಳುವವರು ಸಂಖ್ಯೆ ಹೆಜ್ಜೆ, ಹೆಜ್ಜೆಗೂ ಸಿಗುತ್ತಾರೆ. ಹೀಗಾಗಿ ಇಲ್ಲಿ ಪ್ರತಿಯೊಂದು ಕೆಲಸಕ್ಕೆ ಮಧ್ಯವರ್ತಿಗಳ ಕಾಟ ಬಲು ಜೋರಾಗಿಯೇ ನಡೆಯುತ್ತಿದೆ.
ವಿದ್ಯಾರ್ಥಿಗಳ ಪಾಡು ಹೇಳತೀರದು
ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ವ್ಯಾಸಾಂಗಕ್ಕಾಗಿ ಕಡ್ಡಾಯವಾಗಿ ಸಲ್ಲಿಸುವ ಆದಾಯ, ಜಾತಿ ಪ್ರಮಾಣ ಪತ್ರ ಕಂದಾಯ ಇಲಾಖೆಯಿಂದ ಪಡೆಯಲು ಹರಸಾಹಸ ಪಡಬೇಕಾಗಿದೆ. ಅದರಲ್ಲಿಯೂ ಈಗ ಶಾಲೆ ಪ್ರಾರಂಭದ ಸಮಯವಾಗಿದ್ದು, ಮಕ್ಕಳು ಹಾಗೂ ಪಾಲಕರು ಶಾಲೆ ಬಿಟ್ಟು ಕಾಯುವಂತಾಗಿದೆ. ಇದನ್ನೇ ಲಾಭದ ದಂಧೆಯನ್ನಾಗಿ ಮಾಡಿಕೊಂಡಿರುವ ಕೆಲ ಅಧಿಕಾರಿಗಳು ಬೇರೆಡೆ ಕರ್ತವ್ಯ ನಿರ್ವಹಣೆ ನೆಪದಲ್ಲಿ ಗೈರಾಗುತ್ತಾರೆ. ಇದರಿಂದ ಜನರ ಕೆಲಸ ಸ್ಥಗಿತಗೊಳ್ಳುತ್ತಿವೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಬೇವರಿಳಿಸುತ್ತಿರುವ ಜಿಲ್ಲಾಧಿಕಾರಿ ಎಸ್.ಟಿ. ಅಂಜನ್ಕುಮಾರ ಗಜೇಂದ್ರಗಡದ ವಿಶೇಷ ತಹಸೀಲ್ ಕಚೇರಿ ವ್ಯಾಪ್ತಿಯ ಜನರ ಕಷ್ಟ ಕಾರ್ಪಣ್ಯ ನಿವಾರಣೆಗೆ ಮುಂದಾಗುವರೇ ಕಾದು ನೋಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

