ಗದಗ

ಸಾರಿಗೆ ಸಮಸ್ಯೆ: ಅಧಿಕಾರಿಗಳ ಗಮನಕ್ಕೆ ತನ್ನಿ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜೂ. 10
ಗಜೇಂದ್ರಗಡ ಸುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ಸಾರಿಗೆ ಸಮಸ್ಯೆಗಳಿದ್ದಲ್ಲಿ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಸ್ಥಳೀಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಎಚ್.ಟಿ. ಬಳೂಟಗಿ ಹೇಳಿದರು.
ಅವರು ಶುಕ್ರವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶರವೇಗದಲ್ಲಿ ಬೆಳೆಯುತ್ತಿರುವ ವಾಣಿಜ್ಯ ನಗರಿಯ ಪಟ್ಟಣಕ್ಕೆ ನಿತ್ಯ ಸುತ್ತಲಿನ ಗ್ರಾಮಗಳ ಸಾವಿರಾರು ಜನತೆ ಬಂದು ಹೋಗುತ್ತಾರೆ. ಇಲ್ಲಿನ ಕೆಲ ಹಳ್ಳಿಗಳಿಗೆ ಸರಿಯಾದ ರಸ್ತೆ ಇಲ್ಲದ್ದರಿಂದ ಬಸ್ ವ್ಯವಸ್ಥೆ ಕಲ್ಪಿಸಲು ಆಗಿಲ್ಲ. ಆದರೆ, ಉತ್ತಮ ರಸ್ತೆ ಹೊಂದಿರುವ ಗ್ರಾಮಗಳಿಗೆ ಸಂಸ್ಥೆಯ ಮೇಲಧಿಕಾರಿಗಳ ಪರವಾನಗಿ ಪಡೆದು ಬಸ್ ಬಿಡಲಾಗುವುದು.
ಪುರ್ತಗೇರಿಯಿಂದ ವೀರಾಪುರ, ಚಿಲ್‌ಝರಿ, ಹೊಸ ರಾಂಪುರ, ರಾಂಪುರ, ಹಿರೇಕೊಪ್ಪ, ಮಾಟರಂಗಿ ನಾಗರಸಕೊಪ್ಪ, ಗೋಗೇರಿ, ಬೆಣಸಮಟ್ಟಿ, ಕುಂಟೋಜಿ, ವದೇಗೊಳ ಜಿಗೇರಿ, ಕಾಲಕಾಲೇಶ್ವರಕ್ಕೆ ಬಸ್ ಇಲ್ಲದೇ ಅಲ್ಲಿನ ಗ್ರಾಮಗಳ ವಿದ್ಯಾರ್ಥಿಗಳು, ಸಾರ್ವಜನಿಕರು ತೊಂದರೆ ಅನುಭವಿಸುವುದಕ್ಕೆ ತಿಲಾಂಜಲಿ ಹಾಕಲು ಸಂಸ್ಥೆ ಮುಂದಾಗಲಿದೆ. ಆದರೆ, ಗ್ರಾಮಗಳ ಜನತೆ ಮನವಿ ಸಲ್ಲಿಸಬೇಕು.
ವಾಕರ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಗಜೇಂದ್ರಗಡಕ್ಕೆ ಭೇಟಿ ನೀಡಿದಾಗ ಶೇ. 60 ರಷ್ಟು ಬಸ್‌ಗಳನ್ನು ಗ್ರಾಮೀಣರಿಗೆ ಮೀಸಲಾಗಿಡಬೇಕು ಎಂಬ ಸರ್ಕಾರದ ನಿಯಮದಂತೆ ಗ್ರಾಮೀಣ ಸಾರಿಗೆಗೆ ಮೊದಲು ಅಧ್ಯತೆ ನೀಡಿ, ಖಾಸಗಿ ವಾಹನಗಳ ಹಾವಳಿಗೆ ಕಡಿವಾಣ ಹಾಕಲಾಗುವುದು ಎಂದು ನೀಡಿದ ಭರವಸೆಯನ್ನು ಜಾರಿಗೆ ತರಲು ಸಂಸ್ಥೆ ತಯಾರಿದೆ. ಆದರೆ ಜನಸ್ಪಂದನೆ ಅವಶ್ಯವಾಗಿದೆ. ಜನತೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದರ ಜತೆ ಲಾಭದಲ್ಲಿ ಮುನ್ನಡೆಸುವುದು ಸಂಸ್ಥೆಯ ಗುರಿಯಾಗಿದ್ದು, ಇದಕ್ಕೆ ಎಲ್ಲರೂ ಶ್ರಮಿಸಬೇಕಾಗಿದೆ.
ಗಜೇಂದ್ರಗಡ ಸಾರಿಗೆ ಘಟಕದಲ್ಲಿ 56 ಬಸ್‌ಗಳಿಂದ ಮಾಸಿಕ 1.65 ಕೋಟಿ ಆದಾಯ ಬರುತ್ತಿದೆ. ಎಲ್ಲ ಬಸ್‌ಗಳು ಸುಸಜ್ಜಿತವಾಗಿವೆ. ಆದರೆ, ಕೆಲ ತಾಂತ್ರಿಕ ತೊಂದರೆ ಹೊರತು ಪಡಿಸಿದರೆ ನಮ್ಮ ಘಟಕದಿಂದ ಜನತೆಗೆ ಉತ್ತಮ ಸೇವೆ ನೀಡುತ್ತಿರುವ ಬಗೆಗೆ ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಘಟಕಾಧಿಕಾರಿ ಎಸ್.ಎಸ್. ಸುಂಕದ, ನಾಗರಾಜ ರಂಗ್ರೇಜಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.