ಜನತೆಗೆ ಸ್ವಾವಲಂಬಿ ಬದುಕು ಕಲ್ಪಿಸುವೆ
ಗದಗ: ವಾರ್ಡ್ನಲ್ಲಿ ಜನತೆಗೆ ಸ್ವಾವಲಂಬಿ ಬದುಕು ಕಲ್ಪಿಸಿ, ಅಗತ್ಯ ಮೂಲ ಸೌಲಭ್ಯಗಳನ್ನು ನಿಗದಿತ ಸಮಯದಲ್ಲಿಯೇ ನೀಡುವುದು ನನ್ನ ಮುಖ್ಯ ಧ್ಯೇಯವಾಗಿದೆ ಎಂದು ನಗರಸಭೆಯ 32ನೇ ವಾರ್ಡಿನ ಅಭ್ಯರ್ಥಿ ಪ್ರಕಾಶ ಬಾಕಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ವಾರ್ಡ್ನಲ್ಲಿ ಈಗಾಗಲೇ ಮಹಿಳೆಯರಿಗೆ ವಿಶೇಷ ಹೊಲಿಗೆ ತರಬೇತಿ ಶಿಬಿರಗಳು, ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅವರಲ್ಲಿ ಸ್ವಾವಲಂಬನೆಯ ಕಲ್ಪನೆ ಮೂಡಿಸಲಾಗಿದೆ.
ನಮ್ಮ ಲೋಕಸೇವಾ ವಿವಿಧೋದ್ದೇಶಗಳ ಸೇವಾ ಸಂಸ್ಥೆಯ ಅಡಿಯಲ್ಲಿ ಹತ್ತಾರು ಜನಪರ ಕಾರ್ಯಕ್ರಮಗಳನ್ನು ಈಗಾಗಲೇ ರೂಪಿಸಿದ್ದೇನೆ. ಇನ್ನು ಬಡ ಮಕ್ಕಳಿಗೆ ಪ್ರತಿ ವರ್ಷಕ್ಕೆ 300 ಜನರಂತೆ ಕಳೆದ 4 ವರ್ಷಗಳಿಂದ ಉಚಿತವಾಗಿ ನೋಟ್ಬುಕ್ ವಿತರಣೆ ಮಾಡಿ, ಅವರ ಶಿಕ್ಷಣಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಾರ್ಯ ಮಾಡಿದ್ದೇನೆ. ಇನ್ನು ಹೆಚ್ಚಾಗಿ ಬಡವರೇ ವಾಸಿಸುವ ಈ ವಾರ್ಡ್ನಲ್ಲಿನ ಜನತೆಯ ಅನುಕೂಲತೆಯ ದೃಷ್ಟಿಯಿಂದ ಶಾಂತಾರಾಮ್ ಸಮುದಾಯ ಭವನ ನಿರ್ಮಾಣ ಮಾಡುತ್ತಿದ್ದು, ನನ್ನ ವೈಯಕ್ತಿಕ ಹಣದಲ್ಲಿಯೇ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದೇನೆ ಎಂದರು.
ಚುನಾವಣೆಯ ಫಲಿತಾಂಶದ ಕುರಿತು ನಿಮ್ಮ ಅಭಿಪ್ರಾಯವೇನು ಎಂದಾಗ, ಅವಳಿ ನಗರದ ಎಸ್.ಎಸ್.ಕೆ. ಸಮಾಜದ ಪ್ರಮುಖರಲ್ಲಿ ನಾನೂ ಒಬ್ಬನಾಗಿದ್ದು, ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈಗಾಗಲೇ 2 ಬಾರಿ ನಗರಸಭೆಯ ಸದಸ್ಯನಾಗಿ ಸೇವೆ ಮಾಡಿದ ಅನುಭವ ಹೊಂದಿದ್ದೇನೆ. ಈ ಹಿಂದೆ ನಮ್ಮ ಕುಟುಂಬದವರೇ 2 ಬಾರಿ ನಗರಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವಾರ್ಡ್ನಲ್ಲಿ ಪ್ರತಿಯೊಬ್ಬ ಬಡವರ ಸಮಸ್ಯೆಗೆ ಸ್ಪಂದಿಸಿದ್ದೇನೆ. ಇದೆಲ್ಲಕ್ಕೂ ಮಿಗಿಲಾಗಿ ನಮ್ಮ ನಾಯಕರಾದ ಎಚ್.ಕೆ. ಪಾಟೀಲರ ಮಾರ್ಗದರ್ಶನ ಮತ್ತು ಅವರ ಶುದ್ಧ ಕುಡಿಯುವ ನೀರಿನ ಕಲ್ಪನೆ, ಅದರ ಸಮರ್ಪಕ ಅನುಷ್ಠಾನದಿಂದ ಜನತೆ ಇಂದು ಶುದ್ಧ ಕುಡಿವ ನೀರು ಪಡೆಯುತ್ತಿದ್ದು, ಈ ಎಲ್ಲ ಅಂಶಗಳ ಆಧಾರದಲ್ಲಿ ನಾನು ಈ ಬಾರಿಯೂ ಖಂಡಿತವಾಗಿ ಗೆಲುವು ಸಾಧಿಸುತ್ತೇನೆ ಎಂದರು. ಕಾರ್ಯಕರ್ತರ ಹುಮ್ಮಸ್ಸಿನ ಕುರಿತು ಪ್ರಸ್ತಾಪಿಸಿದ ಬಾಕಳೆ, ನನ್ನ ವಾರ್ಡ್ ಮಾತ್ರವಲ್ಲ, ಅವಳಿ ನಗರದ ಪ್ರತಿಯೊಂದು ವಾರ್ಡ್ಗಳಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು, ಯುವಕರ ಪಡೆ ಚುನಾವಣೆಯನ್ನು ಅತ್ಯಂತ ಹುಮ್ಮಸ್ಸಿನಿಂದ ಎದುರಿಸಲು ಸಿದ್ಧವಾಗಿದೆ. ನನ್ನ ವಾರ್ಡ್ನಲ್ಲಿನ ಕೆಲ ಯುವಕರು ದಿನದ ಒಂದು ಗಂಟೆಯೂ ಬಿಡುವಿಲ್ಲದೇ ಪ್ರಚಾರ ಮಾಡುತ್ತಿದ್ದು, ಅವರಂತಹ ನಿಷ್ಠಾವಂತ ಕಾರ್ಯಕರ್ತರ ಶ್ರಮ, ಪಕ್ಷದ ನಾಯಕರ ವರ್ಚಸ್ಸು ಹಾಗೂ ಈ ವಾರ್ಡ್ನಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳೇ ನನಗೆ ಮತಗಳಾಗಿ ಪರಿವರ್ತನೆಯಾಗುವುದರಿಂದ ನನ್ನ ಗೆಲವು ಖಚಿತ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

