ಗದಗ

ಪುಟ್ಟರಾಜ ಶ್ರೀ ಆಧಾರಿತ ಚಲನಚಿತ್ರ: ನಾಗಾಭರಣ

Published On :

ಗದಗ:   ಇಟಗಿ ಭೀಮಾಂಬಿಕಾ ಸಿನಿ ಆರ್ಟ್ಸ್‌ನ ವತಿಯಿಂದ ಗಾನಯೋಗಿ ಪಂ. ಪುಟ್ಟರಾಜ ಶ್ರೀಗಳ ಜೀವನಾಧರಿಸಿದ ಚಲನಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.
ಅವರು ಶುಕ್ರವಾರ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಗೀತದ ಮೂಲಕ ಈ ನಾಡಿಗೆ ತನ್ನದೇಯಾದ ಕೊಡುಗೆ ನೀಡಿರುವ ಲಿಂ. ಪುಟ್ಟರಾಜ ಶ್ರೀಗಳ ಜೀವನಾಧರಿಸಿದ ಚಲನಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅವರ ಹುಟ್ಟು, ಬಾಲ್ಯ, ಯವ್ವನ ಹಾಗೂ ಅವರು ಪುಣ್ಯಾಶ್ರಮಕ್ಕೆ ಸೇರಿದ ನಂತರ ಅವರು ಕೈಗೊಂಡ ಕಾರ್ಯ, ಸಾಧನೆಯನ್ನು ಚಲನಚಿತ್ರವಾಗಿ ನಿರ್ಮಾಣ ಮಾಡಲಾಗುತ್ತಿದೆ. ದೇಶಾದ್ಯಂತ ಚಿರ ಪರಿಚಿತರಾಗಿರುವ ಪುಟ್ಟರಾಜ ಶ್ರೀಗಳು, ಅಂಧರಾಗಿದ್ದರೂ ಸಂಗೀತ, ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡುವ ಮೂಲಕ ಜಗತ್ಪ್ರಸಿದ್ಧರಾಗಿದ್ದಾರೆ ಎಂದರು.
9 ಪುಸ್ತಕಗಳ ಸಂಗ್ರಹ: ಪುಟ್ಟರಾಜ ಶ್ರೀಗಳ ಜೀವನಾಧರಿಸಿ ಹಲವು ಪುಸ್ತಕಗಳು ಪ್ರಕಟವಾಗಿದ್ದು, ಅವುಗಳಲ್ಲಿನ ಪ್ರಮುಖ 9 ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿರುವ ಮುಖ್ಯ ಅಂಶಗಳನ್ನು ಹಾಗೂ ಪುಟ್ಟರಾಜ ಶ್ರೀಗಳ ಶಿಷ್ಯ-ಪ್ರಶಿಷ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅವರ ಹುಟ್ಟು, ಸಾಧನೆ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪುಟ್ಟರಾಜರು ಯಾವುದೇ ಒಂದು ಜಾತಿಗೆ ಸೀಮಿತವಾಗದೇ ಎಲ್ಲ ಜನಾಂಗದ ಅಂಧ-ಅನಾಥ ಮಕ್ಕಳನ್ನು ಪೋಷಿಸಿ, ಅವರನ್ನು ಸಮಾಜದಲ್ಲಿ ಗುರುತಿಸುವಂತಹ ಕಾರ್ಯ ಮಾಡಿದ್ದಾರೆ. ಶ್ರೀಗಳ ಬಳಿ ಕಲಿತ ಸುಮಾರು 30 ಸಾವಿರಕ್ಕೂ ಅಧಿಕ ಶಿಷ್ಯರು ದೇಶ, ವಿದೇಶಗಳಲ್ಲಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ.
ಲಕ್ಷಾಂತರ ಶಿಷ್ಯ ಬಳಗವನ್ನು ಹೊಂದಿದ ಪುಟ್ಟರಾಜ ಶ್ರೀಗಳ ಜೀವನಾಧರಿಸಿದ ಚಲನಚಿತ್ರವನ್ನು ಸುಮಾರು 2 ವರ್ಷಗಳ ಹಿಂದೆಯೇ ನಿರ್ಮಾಣ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಹಿನ್ನಡೆಯಾಗಿತ್ತು. ಈ ಹಿಂದೆ ನಿರ್ಮಿಸಿದ ಸಂತ ಶಿಶುನಾಳ ಶರೀಪರ ಚಲನಚಿತ್ರದ ಮಾದರಿಯಲ್ಲೇ ಈ ಚಿತ್ರವನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಪುಟ್ಟರಾಜ ಶ್ರೀಗಳ ಮೂಲ ಕೃತಿಗೆ ಚ್ಯುತಿ ಬಾರದಂತೆ ಚಲನಚಿತ್ರ ನಿರ್ಮಾಣದ ಗುರಿ ಹೊಂದಲಾಗಿದೆ ಎಂದರು.
2013ರ ಡಿಸೆಂಬರ್ ಅಂತ್ಯದೊಳಗೆ ಚಿತ್ರೀಕರಣ ಪೂರ್ಣಗೊಳಿಸಿ 3-3-2014 ರಂದು ಲಿಂ. ಪಂಡಿತ ಪುಟ್ಟರಾಜ ಶ್ರೀಗಳ 100ನೇ ಜನ್ಮದಿನೋತ್ಸವದ ಮೊದಲೇ ಚಿತ್ರವನ್ನು ಬಿಡುಗಡೆಗೊಳಿಸುವ ಮೂಲಕ ಪುಟ್ಟರಾಜ ಶ್ರೀಗಳ ಜೀವನ ಚರಿತ್ರೆ ನಾಡಿಗೆ ಮುಟ್ಟುವ ಕಾರ್ಯ ಮಾಡಲಾಗುತ್ತಿದೆ ಎಂದರು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಚಲನಚಿತ್ರ ನಿರ್ಮಾಪಕ ಮಾರುತಿ ಜಡಿ ಮಾತನಾಡಿದರು. ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜ ಹಿಡ್ಕಿಮಠ, ನಗರಸಭೆಯ ಮಾಜಿ ಸದಸ್ಯ ಫಕೀರಪ್ಪ ಹೆಬಸೂರ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.