ಗದಗ

ಅಭ್ಯರ್ಥಿಗಳ ನಿದ್ದೆಗೆಡಿಸಿದ ಚುನಾವಣೆ

Published On :

ಶರಣು ಸೊಲಗಿ
ಮುಂಡರಗಿ: ಪುರಸಭೆ ಚುನಾವಣೆಗೆ ಮುಂಡರಗಿ ಪಟ್ಟಣ ಸಜ್ಜಾಗಿದ್ದು, ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗಿಯೇ ನಡೆದಿದೆ.
ಒಟ್ಟು 23 ವಾರ್ಡ್‌ಗಳಲ್ಲಿ 105 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಚುನಾವಣೆ ದಿನ ಸಮೀಪಿಸುತ್ತಿದ್ದು, ಆಡಳಿತಾರೂಢ ಬಿಜೆಪಿ, ಪ್ರತಿ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಈ ಚುನಾವಣೆ ನಿದ್ದೆಗೆಡಿಸಿದೆ.
ಈ ಹಿಂದೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹಾಗೂ ಪಕ್ಷೇತರರು ಸ್ಪರ್ಧಿಸುತ್ತಿದ್ದರು. ಆದರೆ ಇದೀಗ ಈ ಚುನಾವಣೆ ಕಣಕ್ಕೆ ಬಿಎಸ್‌ವೈ ನೇತೃತ್ವದ ಕೆಜೆಪಿ, ಬಿ. ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಪಕ್ಷದ ಅಭ್ಯರ್ಥಿಗಳೂ ಕಣಕ್ಕಿಳಿದಿದ್ದು ಚುನಾವಣೆ ರಂಗೇರಲು ಕಾರಣವಾಗಿದೆ.
ಒಟ್ಟು 105 ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಇಡೀ ಮುಂಡರಗಿ ಪಟ್ಟಣವೇ ಚುನಾವಣಾ ಪ್ರಚಾರಮಯವಾಗಿ ಮಾರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಹಾಗೂ ಕರಬಸಪ್ಪ ಹಂಚಿನಾಳ ಅವರ ನೇತೃತ್ವದಲ್ಲಿ ಮತ ಯಾಚಿಸುತ್ತಿದ್ದಾರೆ.
ಅಭ್ಯರ್ಥಿಗಳ ಪರ ಮತ ಯಾಚನೆ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರೇ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿರುವುದರಿಂದ ಆ ಪಕ್ಷದ ಅಭ್ಯರ್ಥಿಗಳ ಉತ್ಸಾಹ ಹೆಚ್ಚಿಸಿದೆ. ಇನ್ನು ಕಾಂಗ್ರೆಸ್ ಯಾವುದೇ ನಾಯಕರನ್ನು ಕರೆಸುವ ಗೋಜಿಗೆ ಹೋಗದೆ, ಸ್ಥಳೀಯ ನಾಯಕರಾದ ಹೇಮಂತಗೌಡ ಪಾಟೀಲ, ರಾಮಕೃಷ್ಣ ದೊಡ್ಡಮನಿ ನೇತೃತ್ವದಲ್ಲಿ ಜನರ ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಭಾನುವಾರ ಅಥವಾ ಸೋಮವಾರ ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಎಚ್.ಕೆ. ಪಾಟೀಲ, ವಾಸಣ್ಣ ಕುರುಡಗಿ, ಭೀಮಸಿಂಗ್ ರಾಠೋಡ ನೇತೃತ್ವದಲ್ಲಿ ಪ್ರಚಾರ ಕೈಗೊಳ್ಳುವ ಸಾಧ್ಯತೆ ಇದೆ.
ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಸಹ ಸೋಮವಾರ ಆಗಮಿಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ. ಬಿಎಸ್‌ಆರ್ ಕಾಂಗ್ರೇಸ್ ಅಭ್ಯರ್ಥಿಗಳು ವೈ.ಎನ್. ಗೌಡರ ಹಾಗೂ ಮಹಾಂತೇಶ ಹಳ್ಳೆಪ್ಪನವರ ನೇತೃತ್ವದಲ್ಲಿ ಪ್ರಚಾರ ನಡೆಸಿದ್ದು, ರಾಮುಲು ಸಹ ತಮ್ಮ ಅಭ್ಯರ್ಥಿಗಳ ಪರ ಮತ ಯಾಚಿಸಲು ಆಗಮಿಸುವ ಸಾಧ್ಯತೆ ನಿಚ್ಚಳವಾಗಿದೆ.
ಕಾರ್ಯಕರ್ತರಿಗೆ ಹೆಚ್ಚಿದ ಬೇಡಿಕೆ: ಎಲ್ಲ ಪಕ್ಷದ ಅಭ್ಯರ್ಥಿಗಳೂ ಚುನಾವಣೆ ಪ್ರಚಾರಕ್ಕೆ ಕಾರ್ಯಕರ್ತರ ಮನವೊಲಿಕೆಯ ಪ್ರಯತ್ನ ಮಾಡುವಲ್ಲಿ ಹರಸಾಹಸ ಪಡುತ್ತಿರುವುದು ಕಂಡು ಬರುತ್ತಿದೆ. ಇದೀಗ ಬರಗಾಲ ಬಿದ್ದಿರುವ ಹಿನ್ನೆಲೆಯಲ್ಲಿ ಅನೇಕರು ಇದನ್ನೇ ಒಂದು ಉದ್ಯೋಗ ಮಾಡಿಕೊಂಡಿದ್ದಾರೆ. ಕೆಲವರು ಒಂದೇ ದಿನದಲ್ಲಿ 2 ರಿಂದ 3 ಪಕ್ಷದವರಲ್ಲಿಗೆ ಹೋಗಿ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿದ್ದು. ಒಟ್ಟಿನಲ್ಲಿ ಕಾರ್ಯಕರ್ತರೆಂದು ಹೇಳಿಕೊಂಡು ತಿರುಗುವವರಿಗೆ ಹೆಚ್ಚಿನ ಬೇಡಿಕೆ ಬಂದಿದೆ.
ಬಂಡಾಯದ ಬಿಸಿ: ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಸಾಕಷ್ಟು ಇರಿಸು ಮುರುಸಾಗುವ ಮೂಲಕ ಬಂಡಾಯ ಪ್ರಾರಂಭವಾಗಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರಿಂದ ಮಾಜಿ ಅಧ್ಯಕ್ಷರಾಗಿದ್ದ ಶಾವಕ್ಕ ಪಾಟೀಲ, ರೀಹಾನಾಬೇಗಂ ಕೆಲೂರ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ನಿಂಗಪ್ಪ ಉಪ್ಪಾರ ಎನ್ನುವವರು ಬೇರೆ ಪಕ್ಷದಿಂದ ಸ್ಪರ್ಧಿಸಿದ್ದಾರೆ. ನಾಗರಾಜ ಹೊಂಬಳಗಟ್ಟಿ ತನ್ನ ಪತ್ನಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅವರೂ ಅಸಮಾಧಾನಗೊಂಡಿದ್ದಾರೆ.
ಇನ್ನು ಜೆಡಿಎಸ್ ಕಾರ್ಯಕರ್ತ ಮಹ್ಮದ್‌ರಫೀಕ್ ಹವಾಲ್ದಾರ 15ನೇ ವಾರ್ಡಿನ ಅಭ್ಯರ್ಥಿಯಾಗಲು ಬಯಸಿದ್ದರು. ಆದರೆ, ಅಲ್ಲಿ ಪಕ್ಷದ ಅಧ್ಯಕ್ಷ ಎಂ.ಜಿ. ವಡ್ಡಟ್ಟಿ ಮರು ಆಯ್ಕೆ ಬಯಸಿದ್ದರಿಂದ ಮಹ್ಮದ್‌ರಫೀಕ್ ಹವಾಲ್ದಾರ ಬಂಡಾಯದ ಬಾವುಟ ಹಾರಿಸಿದ್ದಾರೆ. ಹೀಗಾಗಿ ಒಬ್ಬರ ಸೋಲಿಗೆ ಮತ್ತೊಬ್ಬರು ಪ್ರಯತ್ನಿಸುತ್ತಿರುವುದು ಇಲ್ಲಿ ಕಂಡು ಬರುತ್ತಿದೆ.
ಕೇವಲ 6 ರಿಂದ 8 ಜನ ಸದಸ್ಯರು ಮಾತ್ರ ಮರು ಆಯ್ಕೆ ಬಯಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮುಖಗಳು ಸ್ಪರ್ಧೆಗಿಳಿದಿವೆ. ಆದರೆ ಮತದಾರ ಮಾತ್ರ ಯಾರತ್ತ ಒಲವು ತೋರಿಸುವನೋ ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.