ಗದಗ

ಕಣದಲ್ಲಿ ಪದವೀಧರರೇ ಹೆಚ್ಚು

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 5
ಶಿಕ್ಷಣಕ್ಕೆ ಎಲ್ಲ ರೀತಿಯ ಸಮಸ್ಯೆಗಳನ್ನು ಹೊಡೆದೋಡಿಸುವ ಶಕ್ತಿ ಇದೆ ಎನ್ನುವುದು ಹಿರಿಯರ ಅನುಭದ ಮಾತು. ಉತ್ತಮ ಶಿಕ್ಷಣ ಹೊಂದಿದ ಹೆಚ್ಚು ಅಭ್ಯರ್ಥಿಗಳು ಈ ಬಾರಿ ಅವಳಿ ನಗರದ ನಗರಸಭೆ ಚುನಾವಣಾ ಕಣದಲ್ಲಿದ್ದಾರೆ.
ಅವಳಿ ನಗರದ ಜನತೆ ಉತ್ತಮ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕಾರವಂತ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸಿ ಮತ ನೀಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಮತದಾನಕ್ಕೆ ಒಂದು ದಿನ ಬಾಕಿ ಉಳಿದಿದ್ದು, ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳು ಮತದಾರರನ್ನು ಓಲೈಸಿಕೊಳ್ಳಲು ಎಲ್ಲ ಬಗೆಯ ಕಸರತ್ತು ಪೂರ್ಣಗೊಳಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಎಲ್ಲ ಪಕ್ಷಗಳಲ್ಲಿ ಹೆಚ್ಚಾಗಿ ಹಳೆಯ ಮುಖಗಳ ಜತೆ ಹೊಸ ಮುಖಗಳು ಸ್ಪರ್ಧಿಸಿವೆ. ಅವರಲ್ಲಿ ಸುಶಿಕ್ಷಿತರು ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಬಿಜೆಪಿಯಿಂದ 33, ಕಾಂಗ್ರೆಸ್‌ನಿಂದ 35, ಕೆಜೆಪಿಯಿಂದ 28, ಬಿಎಸ್‌ಆರ್ ಕಾಂಗ್ರೆಸ್‌ನಿಂದ 34, ಜೆಡಿಎಸ್‌ನಿಂದ 28 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಹಳೆ ಅಭ್ಯರ್ಥಿಗಳು ಸ್ಪರ್ಧೆಗೆ: ಈ ಹಿಂದೆ ಬಿಜೆಪಿಯಿಂದ ನಗರಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದ ಪರಶುರಾಮ ಹೆಬಸೂರ, ಸದಾನಂದ ಪಿಳ್ಳಿ, ಶಾಂತಾಬಾಯಿ ಹೊನ್ನಳ್ಳಿ, ನಾಗರಾಜ ಗಣಾಚಾರಿ, ಸದಾನಂದ ಹೊನ್ನಳ್ಳಿ, ಪದ್ಮಾ ಯುಗಪಲ್ಲಿ, ವಂದನಾ ವರ್ಣೇಕರ, ದಶರಥರಾಜ ಕೊಳ್ಳಿ. ಕಾಂಗ್ರೆಸ್‌ನಿಂದ ಸುರೇಶ ಕಟ್ಟಿಮನಿ, ಎಂ.ಸಿ. ಶೇಖ, ಅನಿಲ ಗರಗ, ಪೀರಸಾಬ್ ಕೌತಾಳ, ಬಿ.ಬಿ. ಅಸೂಟಿ, ಶ್ರೀನಿವಾಸ ಹುಯಿಲಗೋಳ, ಮಂಜುನಾಥ ಪೂಜಾರ, ಕೃಷ್ಣಾ ಪರಾಪುರ, ಪ್ರಕಾಶ ಬಾಕಳೆ, ಜ್ಯೋತಿ ಇರಾಳ. ಕೆಜೆಪಿಯಿಂದ ಸಿದ್ದು ಪಲ್ಲೇದ ಮರು ಆಯ್ಕೆ ಬಯಸಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಪದವೀಧರರೇ ಹೆಚ್ಚು: ಕಾಂಗ್ರೆಸ್ ಅಭ್ಯರ್ಥಿಗಳಾಗಿರುವ ಖಮರಸುಲ್ತಾನ್ ನಮಾಜಿ(ಎಂಎ), ಅನಿಲ ಶಿಂಗ್ಟಾಲಕೇರಿ (ಎಲ್‌ಎಲ್‌ಬಿ), ಮೇಘಾ ಮುದಗಲ್ಲ (ಬಿಎ), ಅಶೋಕ ಬಣ್ಣದ (ಬಿಎ), ಪ್ರೇಮನಾಥ ಬರದ್ವಾಡ (ಬಿಎ), ಬಸವರಾಜ ಇಸರಪ್ಪನವರ (ಬಿಕಾಂ), ಅನಿಲ ಗರಗ (ಬಿಕಾಂ), ಡಾ. ಸಂತೋಷ ತೋಟಗಂಟಿಮಠ (ಬಿಎಎಂಎಸ್), ಎಂ.ಸಿ. ಶೇಖ (ಬಿಎ), ಬಿ.ಬಿ. ಅಸೂಟಿ (ಬಿಎ), ಸರ್ಫರಾಜ ಬಬರ್ಚಿ(ಬಿಕಾಂ) ಪದವೀಧರರಾಗಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಾದ ಜಗನ್ನಾಥಸಾ ಭಾಂಡಗೆ (ಬಿಕಾಂ, ಎಲ್‌ಎಲ್‌ಬಿ), ಮಹೇಶ ಕೋಟಿ (ಬಿಎ), ಪ್ರಶಾಂತ ತಂಬ್ರಳ್ಳಿಮಠ (ಬಿಇ), ಪಾರ್ವತಿ ಮರಿಗೌಡ್ರ (ಎಂಎ), ಬಸವರಾಜ ಹಾನಗಲ್ಲ (ಬಿಕಾಂ, ಎಲ್‌ಎಲ್‌ಬಿ) ಪದವೀಧರರಾಗಿದ್ದಾರೆ.
ಜೆಡಿಎಸ್‌ನಿಂದ ಸ್ಪರ್ಧಿಸಿರುವ ಪ್ರಭುರಾಜಗೌಡ ಪಾಟೀಲ (ಡಿಪ್ಲೋಮಾ), ಸುನಂದಾ ಕೊಡಬಾಳ (ಎಂಎ, ಬಿಫಾರ್ಮ), ಸುಕನ್ಯಾ ಮಳೇಕರ (ಬಿಕಾಂ, ಎಲ್‌ಎಲ್‌ಬಿ) ಪ್ರಭಾಕರ ಮಣ್ಣಮ್ಮನವರ (ಎಂಎ), ಜ್ಞಾನೇಶ್ವರ ಕೋಕಿಲೆ (ಬಿಎಸ್ಸಿ) ರವಿ ಮಡಿವಾಳರ (ಬಿಎ) ಶಶಿಧರ ಅಲ್ಲಪ್ಪಗೌಡ್ರ (ಬಿಎ, ಎಲ್‌ಎಲ್‌ಬಿ), ಪ್ರವೀಣ ಹಿರೇಮಠ (ಐಟಿಐ) ಶಿಕ್ಷಣ ಪಡೆದಿದ್ದಾರೆ.
ಕೆಜೆಪಿಯಿಂದ ಸ್ಪರ್ಧಿಸಿರುವ ಗುರುಲಿಂಗಪ್ಪ ತಡಸದ (ಬಿಎ), ದಾನಪ್ಪಗೌಡ ದಾನಪ್ಪಗೌಡ್ರ (ಬಿಎ, ಬಿಇಡಿ) ಶ್ರೀನಿವಾಸ ಹುಬ್ಬಳ್ಳಿ (ಡಿಪ್ಲೋಮಾ), ಮನೋಹರ ಮೇರವಾಡೆ (ಬಿಎ, ಎಲ್‌ಎಲ್‌ಬಿ) ಪದವಿ ಪಡೆದಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಪದ್ಮಾವತಿ ಗೊರ್ಲೆ (ಎಲ್‌ಎಲ್‌ಬಿ), ರಾಜೇಶ ಕಟ್ಟಿಮನಿ (ಎಲ್‌ಎಲ್‌ಬಿ), ಶ್ರೀನಿವಾಸ ಕರಿ (ಎಂಎ, ಬಿಇಡಿ), ಸಂತೋಷ ಮೇಲಗಿರಿ (ಬಿಕಾಂ), ಗೀತಾಂಜಲಿ ಭಜನಿಮನಿ (ಬಿಎ) ಪದವೀಧರರಾಗಿದ್ದಾರೆ. ಕೇವಲ ಇವರಷ್ಟೇ ಅಲ್ಲ, ಬಹುತೇಕ ಅಭ್ಯರ್ಥಿಗಳು ಪಿಯುಸಿವರಗೆ ಶಿಕ್ಷಣ ಪಡೆದವರು ಹೆಚ್ಚಾಗಿ ಸ್ಪರ್ಧೆಯಲ್ಲಿದ್ದಾರೆ.
ಸುಶಿಕ್ಷಿತರಿಂದ ಬದಲಾವಣೆ ಸಾಧ್ಯ: ಶಿಕ್ಷಣ, ಸಂಘಟನೆ, ಹೋರಾಟದ ಮೂಲಕವೇ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಸ್ವಾತಂತ್ರ್ಯ ಸೇನಾನಿಗಳು ಹೇಳಿದ್ದು ಇಲ್ಲಿ ಉಲ್ಲೇಖಾರ್ಹ. ರಾಜಕೀಯ ರಂಗ ಎನ್ನುವುದು ಜನ ಸೇವೆಗಾಗಿ ಇರುವ ಮಹತ್ತರ ವೇದಿಕೆ. ಇಂತಹ ವೇದಿಕೆಯಲ್ಲಿ ಸುಶಿಕ್ಷಿತರಿದ್ದಲ್ಲಿ ಹಲವಾರು ಪ್ರಗತಿಪರ ಚಿಂತನೆಗಳು, ಜನಪರ ಕಾಳಜಿ. ಮುಖ್ಯವಾಗಿ ಎಲ್ಲಿ ವಿದ್ಯೆ ಇರುತ್ತದೆಯೋ ಅಲ್ಲಿ ವಿನಯ ಇರುತ್ತದೆ. ಹಾಗಾಗಿ ಈ ಬಾರಿ ಅವಳಿ ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ (ಯಾವ ಪಕ್ಷದವರೇ ಆಗಲಿ) ಸುಶಿಕ್ಷಿತರನ್ನು ಚುನಾಯಿಸಿದಲ್ಲಿ ಮಹತ್ತರ ಬದಲಾವಣೆ ಕಂಡು ಬರಲು ಸಾಧ್ಯ.


ಮತದಾರರ ಪ್ರೋತ್ಸಾಹ ಅವಶ್ಯ
ಬಹುತೇಕ ಎಲ್ಲ ವಾರ್ಡ್‌ಗಳಲ್ಲಿಯೂ ಪದವೀಧರರು ಸ್ಪರ್ಧಿಸಿರುವುದನ್ನು ಗಮನಿಸಿದರೆ ಈ ಹಿಂದೆ ಆಡಳಿತ ನಡೆಸಿರುವ ಸದಸ್ಯರಿಂದ ಆಗದ ಅಭಿವೃದ್ಧಿಯನ್ನು ಗಮನಿಸಿ, ಪದವೀಧರರೇ ನಗರಸಭೆಗೆ ಸ್ಪರ್ಧಿಸಿದ್ದಾರೆ. ಗೆಲವು ಸಾಧಿಸಿ ಅಭಿವೃದ್ಧಿಗೊಳಿಸಲು ಸನ್ನದ್ಧರಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮತದಾರ ಪ್ರಭು ತಮ್ಮ ಹಿಂದಿನ ಚಾಳಿಗೆ ಜೋತು ಬಿದ್ದು ಹಳೆಯ ಮುಖಗಳನ್ನೇ ಗೆಲ್ಲಿಸುವರೋ ಅಥವಾ ಹೊಸಬರಿಗೆ ಅದರಲ್ಲಿಯೂ ಪದವೀಧರರಿಗೆ ಹೆಚ್ಚಿನ ಅವಕಾಶ ನೀಡುವರೋ ಎಂಬುವುದನ್ನು ಕಾದು ನೋಡಬೇಕಿದೆ.
- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.