ಗದಗ

ಶಾಂತಿಯುತ ಮತದಾನಕ್ಕೆ ಸಜ್ಜು

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 6
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಾರ್ಚ್ 7 ರಂದು ನಡೆಯಲಿರುವ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಪೂರ್ಣಗೊಳಿಸಿದ್ದು, ಚುನಾವಣಾ ಕಾರ್ಯಕ್ಕೆ ನಿಯುಕ್ತಿಯಾದ ಸಿಬ್ಬಂದಿ ಬುಧವಾರ ತಮ್ಮ ಸಾಮಗ್ರಿಗಳನ್ನು ಪಡೆದು ಮತಗಟ್ಟೆಗಳತ್ತ ಸಾಗಿದರು.
ಅತ್ಯಂತ ಕುತೂಹಲ ಕೆರಳಿಸಿರುವ ಹಾಗೂ ಮುಂದಿನ ರಾಜಕೀಯ ಭವಿಷ್ಯದ ಮುನ್ನುಡಿ ಎಂದೇ ಬಿಂಬಿತವಾಗಿರುವ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಆತಂಕದಲ್ಲಿಯೇ ರಾಜಕೀಯ ಪಕ್ಷಗಳು ಮತದಾರರ ಆಜ್ಞೆಗಾಗಿ ಕಾಯುತ್ತಿದ್ದಾರೆ.
ಮತದಾರ ಮಾತ್ರ ಯಾರು ಎಷ್ಟೇ ಅಬ್ಬರದ ಪ್ರಚಾರ ಮಾಡಲಿ, ಸಾಧನೆಗಳ ಬಗ್ಗೆ ಹೇಳಿಕೊಳ್ಳಲಿ, ವಿರೋಧ ಪಕ್ಷದವರು ಆಡಳಿತ ಪಕ್ಷದ ಕಾರ್ಯ ವೈಖರಿಯನ್ನು ಟೀಕಿಸಲಿ ಎಲ್ಲದಕ್ಕೂ ತಣ್ಣಗೆ ಪ್ರತಿಕ್ರಿಯಿಸುತ್ತಿರುವುದರಿಂದ ಸಹಜವಾಗಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ಆತಂಕ ಶುರುವಾಗಿದೆ.
ಮತಗಟ್ಟೆ ಸ್ಥಾಪನೆ: ಜಿಲ್ಲೆಯಲ್ಲಿ ಒಟ್ಟು 285 ಮತಗಟ್ಟೆ ಸ್ಥಾಪಿಸಲಾಗಿದ್ದು, ಮತದಾನ ಕಾರ್ಯ ನಿರ್ವಹಿಸಲು 1140 ಸಿಬ್ಬಂದಿ ನಿಯೋಜಿಸಲಾಗಿದೆ. ಗದಗ-ಬೆಟಗೇರಿಯಲ್ಲಿ 144, ಲಕ್ಷ್ಮೇಶ್ವರದಲ್ಲಿ 23, ಮುಂಡರಗಿಯಲ್ಲಿ 23, ರೋಣದಲ್ಲಿ 23, ನರಗುಂದಲ್ಲಿ 23, ಶಿರಹಟ್ಟಿಯಲ್ಲಿ 17, ಗಜೇಂದ್ರಗಡದಲ್ಲಿ 23, ನರೇಗಲ್‌ದಲ್ಲಿ 18, ಮುಳಗುಂದದಲ್ಲಿ 19 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿ, ಪೋಲಿಂಗ್ ಅಧಿಕಾರಿ ಸೇರಿದಂತೆ ನಾಲ್ಕು ಜನರನ್ನು ನೇಮಿಸಲಾಗಿದೆ. ಶೇ. 10 ರಷ್ಟು ಹೆಚ್ಚುವರಿ 114 ಸಿಬ್ಬಂದಿ ಸೇರಿ ಒಟ್ಟು 1254 ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ.
ಬಿಗಿ ಬಂದೋಬಸ್ತ್: ಮಾ. 7ರಂದು ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಯ ಚುನಾವಣೆ ಶಾಂತಿಯುತವಾಗಿ ನಡೆಸಲು 1 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮುಕ್ತ, ನ್ಯಾಯ ಹಾಗೂ ಪಾರದರ್ಶಕ ಚುನಾವಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಚುನಾವಣೆಯಲ್ಲಿ ಅಕ್ರಮ ತಡೆಯಲು 23 ಚೆಕ್‌ಪೋಸ್ಟ್‌ಗಳನ್ನು ತೆರೆದು ತಪಾಸಣೆ ಮಾಡಲಾಗುತ್ತಿದೆ.
ಬಂದೋಬಸ್ತ್‌ಗಾಗಿ 300 ಗೃಹರಕ್ಷಕ ಸಿಬ್ಬಂದಿ, 3 ಡಿಎಸ್‌ಪಿ, 10 ಸಿಪಿಐ, ಪಿಎಸ್‌ಐ, 16 ಎಎಸ್‌ಐ, 87 ಸಿಎಚ್‌ಸಿ, 338 ಸಿಪಿಸಿ, 332 ಎಚ್‌ಜಿ, 3 ಕೆಎಸ್‌ಆರ್‌ಪಿ ವಾಹನ, ಜಿಲ್ಲಾ ಮೀಸಲು ಪಡೆಯಿಂದ 10 ವಾಹನಗಳನ್ನು ನಿಯೋಜಿಸಲಾಗುತ್ತಿದೆ.
ಮುಂಜಾಗ್ರತೆ ಕ್ರಮ: ಮುಂಜಾಗ್ರತಾ ಕ್ರಮವಾಗಿ ಗದಗ-1, ಬೆಟಗೇರಿ-4, ಗಜೇಂದ್ರಗಡ ಠಾಣಾ ವ್ಯಾಪ್ತಿಯಲ್ಲಿ ಓರ್ವ ಸೇರಿದಂತೆ 13 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಬಂದೂಕು ಪರವಾನಿಗೆ ಪಡೆದಿರುವ 240 ಜನರಲ್ಲಿ 203 ಬಂದೂಕು ಠಾಣೆಗೆ ಒಪ್ಪಿಸಿದ್ದಾರೆ. ಉಳಿದ 40 ಬಂದೂಕುಗಳ ಪೈಕಿ 19 ಡಿಎಆರ್, 19 ಬ್ಯಾಂಕ್ ಭದ್ರತೆ, 1 ಸಿಂಧಗಿ ಠಾಣೆಯಲ್ಲಿದೆ. 1 ಮಾರಾಟವಾಗಿದೆ.


 ಮೊದಲ ಬಾರಿಗೆ ಮತಯಂತ್ರ
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಉತ್ಸಾಹಕ್ಕೆ ಕಾರಣವಾಗಿದೆ. ಈ ಕುರಿತು ಎಲ್ಲ ಅಭ್ಯರ್ಥಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಲವಾರು ದಿನಗಳಿಂದ ಸಭೆ ಕರೆದು, ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಗಿದೆ. ಈ ಹಿಂದಿನ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಮತದಾರರು ವಿದ್ಯುನ್ಮಾನ ಯಂತ್ರಗಳ ಮೂಲಕವೇ ಮತದಾನ ಮಾಡಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ಮೊದಲ ಬಾರಿಗೆಯಾದರೂ ಈ ಹಿಂದೆ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಯಾವುದೇ ಗೊಂದಲ ಉಂಟಾಗುವುದಿಲ್ಲ ಎನ್ನುವುದು ಚುನಾವಣಾ ಅಧಿಕಾರಿಗಳ ಅಭಿಪ್ರಾಯ.

ರೋಣ: ಮತದಾನಕ್ಕೆ ಸಕಲ ಸಿದ್ಧತೆ
ರೋಣ: ರೋಣ, ಗಜೇಂದ್ರಗಡ ಪುರಸಭೆ ಹಾಗೂ ನರೇಗಲ್ ಪಟ್ಟಣ ಪಂಚಾಯತ್ ಚುನಾವಣೆಗೆ ಸಿದ್ಧತೆ ಪೂರ್ಣಗೊಂಡಿದೆ. ಎರಡು 2 ಪುರಸಭೆ ಹಾಗೂ 1 ಪಟ್ಟಣ ಪಂಚಾಯತ್‌ನ ಒಟ್ಟು 62 ವಾರ್ಡ್ ಹಾಗೂ ಗಜೇಂದ್ರಗಡ ಪುರಸಭೆಯ 2 ಮತಗಟ್ಟೆಗಳು ಸೇರಿ ಒಟ್ಟು 66 ಮತಗಟ್ಟೆಗಳಲ್ಲಿ ಮತದಾನ ಜರುಗಲಿದೆ.
ರೋಣ, ಗಜೇಂದ್ರಗಡ, ನರೇಗಲ್ ಪಟ್ಟಣಗಳ ಸ್ಥಳೀಯ ಸಂಸ್ಥೆಯ ಚುನಾವಣೆಗೆ 6 ನಿರ್ವಹಣಾ ಅಧಿಕಾರಿಗಳು ಸೇರಿ ಒಟ್ಟು 284 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತ ಕೇಂದ್ರಗಳ ಪೈಕಿ 8 ಸೂಕ್ಷ್ಮ, 16 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಬಂದೋಬಸ್ತ್‌ಗಾಗಿ 3 ಸಿಪಿಐ, 4 ಪಿಎಸ್‌ಐ, 9 ಎಎಸ್‌ಐ, 110 ಪೊಲೀಸರು ಹಾಗೂ 40 ಹೋಮ್‌ಗಾರ್ಡ್‌ಗಳನ್ನು ನೇಮಿಸಲಾಗಿದೆ. ಪ್ರತಿ ಪಟ್ಟಣಕ್ಕೆ ಒಂದರಂತೆ 3 ಡಿ.ಆರ್. ತುಕಡಿಗಳನ್ನು ಕರೆಸಲಾಗಿದ್ದು, ಗಜೇಂದ್ರಗಡಕ್ಕೆ 1 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ.
ಗುರವಾರ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದ್ದು, ರೋಣ ಪುರಸಭೆ ವ್ಯಾಪ್ತಿಯಲ್ಲಿ 7675 ಪುರುಷರು 7496 ಮಹಿಳೆಯರು ಸೇರಿ ಒಟ್ಟು 15,170 ಮತದಾರರು; ಗಜೇಂದ್ರಗಡ ಪುರಸಭೆಯಲ್ಲಿ 11,034 ಪುರುಷ 10,621 ಮಹಿಳೆಯರು ಸೇರಿ 21,655 ಮತದಾರರು; ನರೇಗಲ್ ಪಟ್ಟಣ ಪಂಚಾಯತ್‌ನಲ್ಲಿ 5,762 ಪುರುಷ ಹಾಗೂ 5,901 ಮಹಿಳೆಯರು ಸೇರಿ 11,637 ಮತದಾರರಿದ್ದಾರೆ. ಮೂರು ಪಟ್ಟಣಗಳ ಒಟ್ಟು ಮತದಾರರ ಸಂಖ್ಯೆ 48,462.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.