ಗದಗ

23ವಾರ್ಡ್‌ಗೆ ಮತದಾನ

Published On :

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ 23 ವಾರ್ಡ್‌ಗಳಿಗೆ ಗುರುವಾರ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಸಂಜೆ 5 ಗಂಟೆ ವೇಳೆಗೆ ಶೇ. 65ಕ್ಕೂ ಹೆಚ್ಚು ಮತದಾನ ನಡೆದಿದ್ದು ಕಂಡುಬಂತು. ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ತಿಳಿದುಬಂದಿಲ್ಲ.  ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗೆ ಧಾವಿಸಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮತ ಯಂತ್ರಗಳನ್ನು ಪೂಜೆ ಮಾಡಿ ಮತದಾನಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಪಟ್ಟಣದ 3,16,22ನೇ ವಾರ್ಡ್‌ನಲ್ಲಿ ಸುಮಾರು 1800ಕ್ಕೂ ಹೆಚ್ಚು ಮತದಾರರು ಇರುವುದರಿಂದ ಗಂಟೆಗಟ್ಟಲೆ ಕಾದು ಮತದಾನ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಮತದಾರರು ತೊಂದರೆ ಅನುಭವಿಸುವಂತಾಯಿತು. ಕೆಲವೆಡೆ ಹಲವಾರು ಬೂತಗಳನ್ನು ಒಂದೇ ಶಾಲಾ ಆವರಣದಲ್ಲಿ ಮಾಡಿದ್ದರಿಂದ ಅಲ್ಲಿ ಸ್ಥಳದ ಅಭಾವದಿಂದಾಗಿ ಗೊಂದಲದ ವಾತಾವರಣ ಕಂಡುಬಂತು. ಮತದಾರರನ್ನು ಸೆಳೆಯಲು ಕಾರು, ಟೆಂಪೊ, ಆಟೋಗಳಲ್ಲಿ ಜನರನ್ನು ಕರೆತರುವ ದೃಶ್ಯ ಸಾಮಾನ್ಯವಾಗಿತ್ತು. ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ವಾರ್ಡ್ 13ರಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ವಾರ್ಡ್ 17ರಲ್ಲಿ ತಮ್ಮ ಮತ ಹಾಕಿದರು. ಟಿ. ಈಶ್ವರ 22ನೇ ವಾರ್ಡಿನಲ್ಲಿ ಪತ್ನಿ ಸಮೇತರಾಗಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು.
ಇಂದು ಪ್ರಶಸ್ತಿ ಪ್ರದಾನ
ಗದಗ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಪರಿಸರ ಮಿತ್ರ ಶಾಲೆ 2012-13ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾ. 8ರ ಬೆಳಗ್ಗೆ 10.30 ಗಂಟೆಗೆ ನಗರದ ಮುಳಗುಂದ ರಸ್ತೆಯಲ್ಲಿರುವ ಪಾರ್ಶ್ವನಾಥ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದೆ. ಉದ್ಘಾಟನೆಯನ್ನು ಮಹಾವೀರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಭೂಷಣ್ ಷಾ ನೆರವೇರಿಸುವರು. ಅಧ್ಯಕ್ಷತೆಯನ್ನು ಜಿಪಂ ಸಿಇಓ ವೀರಣ್ಣ ತುರಮರಿ ವಹಿಸುವರು. ಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೀವ ನಾಯಕ, ಜ. ಶಿವಾನಂದ ಪಪೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್.ವಿ. ಸಂಕನೂರ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ಅಪಘಾತ: ಓರ್ವ ಸಾವು
ನರೇಗಲ್ಲ: ಪಟ್ಟಣದ ಅಬ್ಬಿಗೇರಿ ರಸ್ತೆಯಲ್ಲಿ ವೀರೇಶ್ವರ ಚಿತ್ರಮಂದಿರದ ಬಳಿ ಗುರುವಾರ 2 ಬೈಕ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಜರುಗಿದೆ. ಕೋಡಿಕೊಪ್ಪದ ಹುಚ್ಚೀರಯ್ಯ ಮಲ್ಲಯ್ಯ ಹೊಸೂರ (25) ಗದಗ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈರಣ್ಣ ವಿರುಪಾಕ್ಷಗೌಡ ಉದ್ದಣ್ಣವರ ಮತ್ತು ಅಭಿಷೇಕ ಈರಣ್ಣ ಉದ್ದಣ್ಣವರ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ನರೇಗಲ್ಲ ಪಿಎಸ್‌ಐ ಎಸ್.ಎನ್. ಅಂಬಿಗೇರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.