ಗದಗ

ಬಾಡೂಟ ವಿತರಿಸಿದ ಕಾಂಗ್ರೆಸ್ ಅಭ್ಯರ್ಥಿ: ಆರೋಪ

Published On :

ಗದಗ: ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಹೆಂಡ, ಹಣ ಹಾಗೂ ವಸ್ತುಗಳನ್ನು ವಿವಿಧ ಪಕ್ಷಗಳ  ಅಭ್ಯರ್ಥಿಗಳು ಹಂಚಿದ್ದರು. ಗುರುವಾರ ನಗರದ 29ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಲ್.ಡಿ. ಚಂದಾವರಿ ಮತದಾನ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ತನ್ನ ಬೆಂಬಲಿಗರಿಗೆ ಹಾಗೂ ಮತದಾರರಿಗೆ ಬಾಡೂಟ ವಿತರಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ರಾಜೇಶ ಕಟ್ಟಿಮನಿ ಆರೋಪಿಸಿದ್ದಾರೆ. 29ನೇ ವಾರ್ಡಗೆ ಬರುವ ರಾಜೀವಗಾಂಧಿ ನಗರದಲ್ಲಿರುವ ಸಮುದಾಯ ಭವನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಎಲ್.ಡಿ. ಚಂದಾವರಿ ಮತದಾನ ಶುರುವಾಗುತ್ತಿದಂತೆಯೇ ಇಲ್ಲಿ ಬಾಡೂಟದ ವ್ಯವಸ್ಥೆ ಕಲ್ಪಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅವರಿಗೆ ದೂರು ನೀಡಿದರೂ ಸ್ಪಂದಿಸಿಲ್ಲ. ಕರೆ ಮಾಡಿದರೆ ಸ್ವೀಕರಿಸಲಿಲ್ಲ ಎಂದು ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜೇಶ ಕಟ್ಟಿಮನಿ ಆರೋಪಿಸಿದ್ದಾರೆ.ಈ ಹಿಂದೆ ಹಲವು ಅಭ್ಯರ್ಥಿಗಳು ಪ್ರಚಾರಕ್ಕೆ ಮಕ್ಕಳ ಬಳಕೆ, ದೇವಾಲಯದಲ್ಲಿ ಪ್ರಚಾರ, ಅಕ್ರಮ ಮದ್ಯ ಇತ್ಯಾದಿಗಳ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಆಡಳಿತಾರೂಢ ಪಕ್ಷದ ಪರವಾಗಿ ವರ್ತಿಸುತ್ತಿದ್ದಾರೆ ಎನ್ನುವ ಆರೋಪಗಳೂ ಕೇಳಿಬಂದಿವೆ.
ಮುಳಗುಂದ ಪಪಂಗೆ ಮತದಾನ
ಮುಳಗುಂದ: ಸ್ಥಳೀಯ ಪಪಂನ 18 ವಾರ್ಡ್‌ಗಳಿಗೆ ಗುರುವಾರ ಶಾಂತಿಯುತ ಮತದಾನ ನಡೆದಿದೆ. ಒಟ್ಟು 12,179 ಮತದಾರರಲ್ಲಿ 9,583 ಮಂದಿ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 4845 ಮಹಿಳೆಯರು ಹಾಗೂ 4738 ಪುರುಷರು. ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಮತ ಹಾಕಿದ್ದು ವಿಶೇಷ. ಮತಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿ ಹಾಗೂ ಬೇರೆ ವಾರ್ಡ್‌ಗಳ ಮತಪಟ್ಟಿಯಲ್ಲಿ ಹೆಸರು ಪ್ರತ್ಯಕ್ಷವಾಗಿದ್ದರಿಂದ ಕೆಲವು ಮತದಾರರು ತಮ್ಮ ಹಕ್ಕಿನಿಂದ ವಂಚಿತರಾದರು. ಇದರಿಂದ ಆಕ್ರೋಶಗೊಂಡ ಅವರು ಚುನಾವಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಿಕ್ಕಂತೆ ಮತದಾನ ಪ್ರಕ್ರಿಯೆ ಶಾಂತವಾಗಿತ್ತು. ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು.
ಹಲ್ಲೆ: ಪ್ರಕರಣ ದಾಖಲು
ನರಗುಂದ: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಬಿ.ಎಸ್.ಆರ್. ಕಾಂಗ್ರೆಸ್ ಮುಖಂಡ ರವಿ ಯರಗಟ್ಟಿ ಮೇಲೆ ಶಾಸಕ ಸಿ.ಸಿ. ಪಾಟೀಲ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ನರಗುಂದ ಪೊಲೀಸ್ ಠಾಣೆಯಲ್ಲಿ ರವಿ ಯರಗಟ್ಟಿ ಪ್ರಕರಣ ದಾಖಲಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಎಸ್.ಎಂ. ಕೃಷ್ಣ ನಗರ, ಶರಣ ಬಸವೇಶ್ವರ ಗುಡಿಲೈನ್, ಬೆಟಗೇರಿಯ ಕಿಲ್ಲಾ, ಒಕ್ಕಲಿಗೇರಿ ನಗರ, ವಸಂತಸಿಂಗ್ ಜಮಾದಾರ ರಸ್ತೆ ಈ ಭಾಗಗಳಲ್ಲಿ ಶುಕ್ರವಾರ   ನೀರು ಪೂರೈಕೆ ಮಾಡಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.